ಸಮಸ್ಯೆ ಹೇಳಿಕೊಳ್ಳಲು ಅಡ್ಡಿಯಾದ ಪೊಲೀಸರು
ಶ್ರೀನಿವಾಸಪುರ: ಪಟ್ಟಣದಲ್ಲಿ ನಡೆದ ಪಿಂಚಣಿ ಮಂಜೂರಾತಿ ಆದೇಶ ಪತ್ರಗಳ ವಿತರಣಾ ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಶಾಸಕ ಕೆ.ಆರ್. ರಮೇಶ್‌ಕುಮಾರ್ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮುತ್ತಿಗೆ ಹಾಕಲು ಬಂದಿದ್ದ ನೂರಾರು ಮಹಿಳೆಯರಿಗೆ ಪೊಲೀಸರು ಅಡ್ಡಿಯಾದ ಪ್ರಸಂಗ ನಡೆಯಿತು.
ತಾಲೂಕಿನ ಕಸಬಾ ಹೋಬಳಿಯ ದೊಡಮಲದೊಡ್ಡಿ ಹರಿಜನ ಕಾಲೋನಿಯಲ್ಲಿ ಸುಮಾರು 7 ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಕುಂಟೆಯಲ್ಲಿ ನೀರನ್ನು ತಂದು ಕುಡಿಯಲಾಗುತ್ತಿದೆ. ಇದು ನಾನಾ ರೀತಿಯ ಕಾಯಿಲೆಗಳಿಗೆ ದಾರಿಯಾಗುತ್ತಿದ್ದು, ಸಂಬಂಧಪಟ್ಟ ಪಿಡಿಒ, ಇಒ ಅವರಿಗೆ ತಿಳಿಸಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.
ಖಾಲಿ ಬಿಂದಿಗೆಗಳ ಸಮೇತ ಆಗಮಿಸಿದ್ದ ಕಾಲೋನಿಯ ನೂರಾರು ಮಹಿಳೆಯರಿಗೆ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡುವುದಕ್ಕೆ ಬಿಡುತ್ತೇವೆಂದು ಹೇಳುತ್ತಿದ್ದ ಪೊಲೀಸರು ಮಂತ್ರಿಗಳು ನಿರ್ಗಮಿಸುವ ವೇಳೆಯಲ್ಲಿ ಮಹಿಳೆಯರನ್ನು ತಡೆದು ಅಡ್ಡಿಯುಂಟು ಮಾಡಿದರು.
ಇದರಿಂದ ಕುಪಿತಗೊಂಡ ಹರಿಜನ ಮಹಿಳೆಯರು ಪೊಲೀಸರನ್ನು ತರಾಟೆಗೆ ಗೆತೆದುಕೊಂಡರು. ಆದರೆ ಮಂತ್ರಿಗಳು ಇವರ ಸಮಸ್ಯೆಯನ್ನು ಆಲಿಸದೆ ಹೊರಟು ಹೋದರು. ಮಹಿಳೆಯರು ಬಂದ ದಾರಿಗೆ ಸುಂಕವಿಲ್ಲವೆಂದು ಮನೆ ದಾರಿ ಹಿಡಿಯಬೇಕಾಗಿಯಿತು.
5 ಕೋಟಿ ವೆಚ್ಚದಲ್ಲಿ ಮಿನಿವಿಧಾನ ಸೌಧ: ಸಚಿವ
ಶ್ರೀನಿವಾಸಪುರ: ತಾಲೂಕಿನಲ್ಲಿ 5 ಕೋಟಿ ವೆಚ್ಚದಲ್ಲಿ ಮಿನಿವಿಧಾನ ಸೌಧವನ್ನು ನಿರ್ಮಾಣ ಹಾಗೂ ಸಿಎನ್‌ಡಿಆರ್ ನಿಯಮದ ಅನ್ವಯ 2000 ಸರ್ವೆಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದೆಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಪಿಂಚಣಿದಾರರಿಗೆ ಆದೇಶ ಪತ್ರಗಳ ವಿತರಣಾ ಸಮಾರಂಭದಲ್ಲಿ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಪಿಂಚಣಿ ಆದೇಶ ಪತ್ರ ವಿತರಣೆ
ಶ್ರೀನಿವಾಸಪುರ: ಸಮಾಜದಲ್ಲಿ ಪ್ರತಿಯೊಬ್ಬರಲ್ಲೂ ಸ್ವಾರ್ಥ ತುಂಬಿ ತುಳುತ್ತಿದೆ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
6 ಸಾವಿರ ಅರ್ಹ ಫಲಾನುಭವಿಗಳಿಗೆ ಪಿಂಚಣಿಯ ಆದೇಶ ಪತ್ರಗಳನ್ನು ನೀಡಲಾಗಿದೆ. ಇನ್ನುಳಿದವರು ಕೂಡ ಅತಂಕ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಮನೆ ಬಾಗಿಲಿಗೆ ಪಿಂಚಣಿಯ ಆದೇಶ ಪತ್ರಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ಶೇ.90ರಷ್ಟು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿದಿದ್ದು, ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕೆ.ಹೆಚ್, ಮುನಿಯಪ್ಪ ರಾಜ್ಯ ಕಂದಾಯ ಸಚಿವರಾದ ಶ್ರೀನಿವಾಸ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿಗಳಾದ ಡಿ.ಕೆ. ರವಿ ಮಾತನಾಡಿದರು.
ತೂಪಲ್ಲಿ ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ಬಿ.ವಿ. ಕೃಷ್ಣಾರೆಡ್ಡಿ, ಜಿ. ಸೋಮಶೇಖರರೆಡ್ಡಿ, ಎಲ್. ಗೋಪಾಲಕೃಷ್ಣ, ವೆಂಕಟಮುನಿಯಪ್ಪ, ಅನಿಲ್‌ಕುಮಾರ್, ಎನ್. ಶ್ರೀರಾಮರೆಡ್ಡಿ ಹಾಗೂ ದಿಂಬಾಲ ನಾರಾಯಣಸ್ವಾಮಿ ವೇಡಿಕೆಯಲ್ಲಿ ಉಪಸ್ಥಿತರಿದ್ದರು.
ಸುಜಾತ ಮತ್ತು ಸಂಗಡಿರಿಂದ ಪ್ರಾರ್ಥನೆ, ಸಿ.ಎನ್. ಮಂಜುನಾಥ ಸ್ವಾಗತಿ ಮತ್ತು ತಹಸೀಲ್ದಾರ್ ಎಚ್. ಜಯ ವಂದಿಸಿದರು.