ಸರಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ
ಕೆಜಿಎಫ್: ಬಂಗಾರಪೇಟೆ ಮತ್ತು ಕೆಜಿಎಫ್ ವ್ಯಾಪ್ತಿಯ ಸರಗಳ್ಳತನ, ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಮಾರು 3.55 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ತಿಳಿಸಿದ್ದಾರೆ.
ಕಳೆದ ವರ್ಷ 2013ನೇ ಸಾಲಿನಲ್ಲಿ ರಾಬರ್ಟ್ಸನ್ಪೇಟೆ ಠಾಣಾ ವ್ಯಾಪ್ತಿಯ ಮಹಾರಾಜ ರಸ್ತೆಯಲ್ಲಿ ಹಾಗೂ ನಗರಸಭೆ ಕಚೇರಿಯ ಸಮೀಪ ಮತ್ತು ಬಂಗಾರಪೇಟೆಯ ಬಸವೇಶ್ವರ ನಗರದಲ್ಲಿ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪತ್ತೆಗಾಗಿ ಬಂಗಾರಪೇಟೆ ಮತ್ತು ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ದೇಶಿಹಳ್ಳಿ ಬಡಾವಣೆಯ ಮಹಿಳೆಯರು ರಾತ್ರಿ ವೇಳೆ ತಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದಾಗ ಸರ ಕಳ್ಳತನ ಮಾಡುವಾಗ ರಾತ್ರಿ ಗಸ್ತಿನಲ್ಲಿದ್ದ ಬಂಗಾರಪೇಟೆ ಪೊಲೀಸರು ಕೆಜಿಎಫ್ನ ಡಾ. ಅಂಬೇಡ್ಕರ್ನಗರ ನಿವಾಸಿಗಳಾದ ಜೋಶ್ವ ದೀಪಕ್ರಾಜ್ (22) ಹಾಗೂ ರಾಜೇಶ್ (21) ಎಂಬುವವರನ್ನು ಬಂಧಿಸಿ 3.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಸೆಫಟ್ ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ವಿಶೇಷ ತಂಡದ ರಾಬರ್ಟ್ಸನ್ಪೇಟೆ ಠಾಣಾ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ, ಅಪರಾಧ ವಿಭಾಗದ ಪಿಎಸ್ಐ ನರಸಿಂಹಮೂರ್ತಿ, ಬಂಗಾರಪೇಟೆ ಠಾಣಾ ಪಿಎಸ್ಐ ಯೋಗಾನಂದಸೋನಾರ್, ಸಿಬ್ಬಂದಿಗಳಾದ ಚಲಪತಿ, ಸುರೇಶ್, ದೇವರಾಜ್, ಜಬಿ, ಶ್ರೀರಾಮರೆಡ್ಡಿ ಮತ್ತು ಹನುಮಂತಪ್ಪ ತಂಡವನ್ನು ಎಸ್ಪಿ ಶ್ಲಾಘಿಸಿದರು.