ಸಾರಿಗೆ ಬಸ್ನಲ್ಲಿ ಹೆಚ್ಚುವರಿ ದರ ವಸೂಲಿ; ಪ್ರತಿಭಟನೆ
ಮುಳಬಾಗಲು: ಮುಳಬಾಗಲುನಿಂದ ಕೋಲಾರ ಮಾರ್ಗವಾಗಿ ಟೋಲ್ ನೀಡಲು ಪ್ರತಿ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಎಂದಿನ ದರಕ್ಕಿಂತ 7 ಹೆಚ್ಚುವರಿಯಾಗಿ ಪಡೆಯುತ್ತಿರುವ ರಾಜ್ಯರಸ್ತೆ ಸಾರಿಗೆ ಕ್ರಮ ಖಂಡಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಟೆಎಪಿಸಿಎಂಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಒಂದು ಗಂಟೆಗೂ ಹೆಚ್ಚಿನ ಕಾಲ ರಸ್ತೆ ತಡೆ ನಡೆಸಲಾಯಿತು. ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಧಳಕ್ಕೆ ಧಾವಿಸಿದ ಡಿಪೋ ವ್ಯವಸ್ಧಾಪಕ ಭಾಸ್ಕರ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ತಮ್ಮ ಕೇಂದ್ರ ಕಚೇರಿಯ ಆದೇಶದಂತೆ ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವುದಾಗಿ ಸಮಜಾಯಿಸಿ ಕೊಡಲು ಮುಂದಾದಾಗ, ವಾಸ್ತವ ಪರಿಸ್ಧಿತಿಯನ್ನು ತಾವು ಮೇಲಾಧಿಕಾರಿಗಳಿಗೆ ತಿಳಿಸಬೇಕಾಗಿತ್ತು ಎಂದ ಪ್ರತಿಭಚನಾಕಾರರು, ಒಂದು ಸಲಕ್ಕೆ 150 ನೀಡಿ ಸುಮಾರು 5 ಟ್ರಿಪ್ಗಳಲ್ಲಿ ಹೆಚ್ಚುವರಿಯಾಗಿ 2 ಸಾವಿರಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿ ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಧಿಕಾರಿಯ ಮೇಲೆ ಹರಿಹಾಯ್ದರು.
ತಕ್ಷಣ ಹೆಚ್ಚುವರಿ ಹಣ ವಸೂಲಿ ನಿಲ್ಲಿಸಲು ಒತ್ತಾಯಿಸಿ ಮನವಿ ಪತ್ರ ನೀಡಿದರು. ವೃತ್ತ ನಿರೀಕ್ಷಕ ಕೃಷ್ಣಪ್ಪ, ಉಪ ನಿರೀಕ್ಷಕ ಮೇಲ್ವಿನ್ ಪ್ರಾನ್ಸಿಸ್ ಸೂಕ್ತ ಬಂದೋಸ್ತ್ ಏರ್ಪಡಿಸಿದ್ದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ನಾರಾಯಣಗೌಡ, ಟೆ.ರಂಜಿತ್ಕುಮಾರ್. ಮಂಜುಬಂಗಾರಿ, ಗೊಟ್ಟುಕುಂಟೆ ಕೃಷ್ಣ, ಹರೀಶ್, ರಾಮಪ್ರಸಾದ್, ಫರೂಕ್ ಬಾಷಾ, ಪ್ರೆಸ್ ಗಣೇಶ್ ಮುಂತಾದವರು ಭಾಗವಹಿಸಿದ್ದರು.