ಅನ್ನಭಾಗ್ಯ ಯೋಜನೆಯ 18 ಮೂಟೆ ಅಕ್ಕಿ ವಶ
ಚಿಂತಾಮಣಿ: ಅಕ್ರಮವಾಗಿ ಲಾರಿ ಟ್ರಾನ್ಸ್ಪೋರ್ಟ್ವೊಂದರಲ್ಲಿ ಸರ್ಕಾರದ 1 ರು. ಬೆಲೆಯ 18 ಅಕ್ಕಿ ಮೂಟೆಗಳನ್ನು ದಾಸ್ತಾನು ಮಾಡಿದ್ದನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಪ್ರೇಮ್ನಗರ ರಸ್ತೆಯ ಎಚ್.ಎಂ.ಎಸ್ ಟ್ರಾನ್ಸ್ಪೋರ್ಟ್ನಲ್ಲಿ ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಸುಮಾರು 1 ರು. ಬೆಲೆಯ 18 ಮೂಟೆ ಅಕ್ಕಿ ಅನಾಮಧೇಯ ಹೆಸರಿನಲ್ಲಿ ನಗರಕ್ಕೆ ಬಂದಿರುವ ಖಚಿತ ಮಾಹಿತಿ ಮೇರೆಗೆ ನಗರಠಾಣೆ ಎಸ್ಐ ಮುರಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡರು.
ಬೆಂಗಳೂರು ಮತ್ತು ಸುತ್ತಮುತ್ತಲಿನಿಂದ ಬಿಲ್ ರಹಿತ ಅಕ್ರಮವಾಗಿ 1 ರು. ಕೆಜಿ ಅಕ್ಕಿಯನ್ನು ಟ್ರಾನ್ಸ್ಪೋರ್ಟ್ಗಳ ಮೂಲಕ ನಗರಕ್ಕೆ ಬರುತ್ತಿದ್ದರೂ ಆಹಾರ ಇಲಾಖೆಯವರು ಮೌನವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಂತೆ ಕಂತೆಗಳು ಕೇಳಿ ಬರುತ್ತಿವೆ.
ನಗರದ ವರ್ತಕರೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಲು ತಂದಿರುವ ಅಕ್ಕಿ ಮೂಟೆಗಳನ್ನು ಬಡವರಿಗೆ ಅನ್ಯಾಯ ಮಾಡಿ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.