ಕುಂದಲಗುಕರ್ ಗ್ರಾಪಂ ಗ್ರಂಥಾಲಯಕ್ಕೆ ಬೀಗ
ಶಿಡ್ಲಘಟ್ಟ: ಗ್ರಾಮೀಣ ಪ್ರದೇಶಗಳ ಜನರಲ್ಲಿನ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಪಂಚಾಯ್ತಿಗೊಂದು ಗ್ರಂಥಾಲಯಗಳನ್ನು ತೆರೆದಿದ್ದರೂ ಗ್ರಂಥಪಾಲಕರ ನಿರ್ಲಕ್ಷ್ಯದಿಂದಾಗಿ ಓದುಗರಿಗೆ ಅನ್ಯಾಯವಾಗುತ್ತಿದೆ ಎಂಬುದಕ್ಕೆ ತಾಲೂಕಿನ ಕುಂದಲಗುಕರ್ ಗ್ರಾಮ ಪಂಚಾಯಿತಿಯ ಗ್ರಂಥಾಲಯವೇ ಸಾಕ್ಷಿ.
ಕುಂದಲಗುಕರ್ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಆವರಣದಲ್ಲಿ ಗ್ರಂಥಾಲಯವಿದ್ದರೂ ಬಾಗಿಲು ತೆಗೆಯದೆ ಓದುಗರು ವಂಚಿತರಾಗುತ್ತಿದ್ದಾರೆ.
ಗ್ರಂಥಾಲಯದಲ್ಲಿನ ಪೀಠೋಪಕರಣಗಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ.
ಗ್ರಂಥಾಲಯಕ್ಕೆ ಒಂದು ದಿನಪತ್ರಿಕೆಯನ್ನೂ ತರಿಸುವುದಿಲ್ಲ, ಈ ಬಗ್ಗೆ ಜಿಲ್ಲಾ ಮಟ್ಟದ ಗ್ರಂಥಪಾಲಕರಿಗೆ ದೂರು ನೀಡಿದ್ದರೂ ಅಧಿಕಾರಿಗಳು ಗ್ರಂಥಪಾಲಕರ ವಿರುಧ್ದ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಸ್ಥಳೀಯ ಗ್ರಂಥಪಾಲಕ ಸಂಘಟನೆಯೊಂದರ ಸಂಚಾಲಕ ಎಂಬ ಕಾರಣಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಜಿಲ್ಲಾ ಗ್ರಂಥಾಲಯ ಅಧಿಕಾರಿ ಸರಸ್ವತಿ ಎನ್. ಅವರನ್ನು ಸಂಪರ್ಕಿಸಿದಾಗ ನಾನು ಚಿಕ್ಕಬಳ್ಳಾಪುರಕ್ಕೆ ಬಂದು ಒಂದು ತಿಂಗಳಾಗಿದೆ. ಈ ವರೆಗೂ ಈ ಬಗ್ಗೆ ಯಾರೂ ದೂರನ್ನು ಕೊಟ್ಟಿಲ್ಲ, ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಗರಿಕರ ಆರೋಪ ನಿಜವಾಗಿದ್ದರೆ ಕೂಡಲೇ ಅವರ ಮೇಲೆ ಕ್ರಮ ತೆಗೆದುಕೊಂಡು ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದಿದ್ದಾರೆ.