ಪಿಯು ಪರೀಕ್ಷಾ ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ
ಗುಡಿಬಂಡೆ: ಇತ್ತೀಚಿಗೆ ರಾಜ್ಯ ಸರ್ಕಾರ ಪಿಯುಸಿ ಪರೀಕ್ಷಾ ಶುಲ್ಕದಲ್ಲಿ ಶೇ.20 ರಷ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ತಾಲೂಕು ಎಸ್‌ಎಫ್‌ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಈಶ್ವರಪ್ಪ ಬಡವರ, ರೈತರ ಸರ್ಕಾರ ನಮ್ಮದು ಎಂದು ಪ್ರತಿನಿತ್ಯ ಮಾಧ್ಯಮಗಳ ಮುಂದೆ ರಾಜ್ಯ ಸರ್ಕಾರ ಬೊಬ್ಬೆ ಹೊಡೆಯುವುದನ್ನು ಬಿಟ್ಟರೆ ಬಡವರಿಗಾಗಿ ಯಾವುದೇ ರೀತಿಯಲ್ಲಿ ಉಪಯುಕ್ತವಾಗಿಲ್ಲ. ಜೊತೆಗೆ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡಲು ಹೊರಟಿದ್ದು, ಬಡ ರೈತರ ಮಕ್ಕಳು ವಿದ್ಯಾಭ್ಯಾಸದಿಂದ ದೂರವುಳಿಯುವಂತೆ ಮಾಡುತ್ತಿದೆ ಮಾಡುತ್ತಿದೆ ಎಂದು ಆರೋಪಿಸಿದರು.
ದಿಢೀರನೇ ಪರೀಕ್ಷಾ ಶುಲ್ಕ ಹೆಚ್ಚಿಸಿ ಬಡ ವಿದ್ಯಾರ್ಥಿಗಳಿಗೆ ಮೋಸ ಮಾಡುತ್ತಿದೆ. ಈ ಹಿಂದೆ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ 2006 ಕಾಯ್ದೆ ಜಾರಿಗೆ ಹೊರಟಾಗ ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂಪಡೆಯಲಾಯಿತು ಎಂದ ಅವರು, ಹೆಚ್ಚಿಸಿರುವ ಶುಲ್ಕ ಹಿಂಪಡೆಯದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮಿನಿವಿಧಾನಸೌದ ಮುಂದೆ ಕೆಲಕಾಲ ಧರಣಿ ನಡೆಸಿ ನಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಅಶೋಕ ಕುಮಾರ್, ಕಾರ್ಯದರ್ಶಿ ಮೋಹನ್ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.