ಪ್ಯಾಕೇಜ್ ಕಾಮಗಾರಿಗೆ ಖಂಡನೆ
ಕೋಲಾರ: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ 5 ಲಕ್ಷವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಸರ್ಕಾರದ ಆದೇಶವಿದ್ದರೂ ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ವಿಭಾಗದ ಅಧಿಕಾರಿಗಳು ಆದೇಶ ಉಲ್ಲಂಘಿಸಿ ಪ್ಯಾಕೇಜ್ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆಂದು ಜಿಪಂ ಸದಸ್ಯ ಡಿ.ವಿ. ಹರೀಶ್ ಆರೋಪಿಸಿದರು.
ಗರುವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಯಡಿಯಲ್ಲಿ 5 ಲಕ್ಷವರೆಗಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತುಂಡು ಗುತ್ತಿಗೆ ಮತ್ತು ಪ್ಯಾಕೇಜ್ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಜಿಪಂ ಅಧ್ಯಕ್ಷರನ್ನು ಒತ್ತಾಯಿಸಿದರು.
ಜಿಪಂ ಎಂಜನಿಯರಿಂಗ್ ವಿಭಾಗದ ಅಧಿಕಾರಿಗಳು ಬೇರೋಬ್ಬರ ಒತ್ತಾಯಕ್ಕೆ ಮಣಿದು ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಡಿ.ವಿ. ಹರೀಶ್ ಆರೋಪಿಸಿದರು.
ಕಾನೂನು ಉಲ್ಲಂಘನೆ ಮಾಡಿರುವ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸದಸ್ಯ ಹರೀಶ್ ಒತ್ತಾಯಿಸಿದಾಗ ಇತರೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಅಧಿಕಾರಿ ಸ್ಪಷ್ಟನೆಗೆ ಅಕ್ಷೇಪ: ಜಿಲ್ಲೆಯಲ್ಲಿ 1600 ಕುಡಿಯುವ ಕಾಮಗಾರಿಗಳು 5 ಲಕ್ಷ ಮೀರಿಲ್ಲ. ಇನ್ನುಳಿದ 900 ಕಾಮಗಾರಿಗಳು 5 ಲಕ್ಷ ಮೇಲ್ಪಟ್ಟು ಇದೆ ಟೆಂಡರ್ ಕರೆದರೆ ಕಾಮಗಾರಿಗಳು ವಿಳಂಬವಾಗುತ್ತದೆ ಎಂಬ ಕಾರಣದಿಂದ ಕೆಲವು ಕಾಮಗಾರಿಗಳನ್ನು ಒಟ್ಟಾಗಿ ಸೇರಿಸಿಕೊಂಡು ಪ್ಯಾಕೇಜ್ ಮಾಡಲಾಗಿದೆ ಎಂದು ಜಿಪಂ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ದೇವರಾಜ್ ಸ್ಪಷ್ಟನೆ ನೀಡಿದಾಗ ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಸದಸ್ಯರ ಆಕ್ರೋಶ ಅರ್ಥ ಮಾಡಿಕೊಂಡು ಮಾತನಾಡಿ, ಸದಸ್ಯರ ಅಧಿಕಾರವನ್ನು ಮೊಟುಕುಗೊಳಿಸುವ ಕೆಲಸ ಜಿಪಂ ಎಂಜನಿಯರಿಂಗ್ ವಿಭಾಗದಲ್ಲಿ ನಡೆಯುತ್ತಿದೆ. ಶಾಸಕರನ್ನು ಮತ್ತು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುಬಾರದು ಎಂದು ತಾವು ಹೇಳುತ್ತಿಲ್ಲ, ಆದರೆ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ನಿಯಮಗಳನ್ನು ಮೀರಿ ತಮಗಿಷ್ಟಬಂದಂತೆ ಕಾಮಗಾರಿಗಳನ್ನು ನಡೆಸುತ್ತಿರುವುದು ಖಂಡನೀಯ ಎಂದರು.
ಜಿಪಂ ಸದಸ್ಯರನ್ನು ಅನುಸರಿಸಿಕೊಂಡು ಕೆಲಸ ಮಾಡುತ್ತೀರಾ ಅಥವಾ ತಮ್ಮ ಚಾಳಿಯನ್ನು ಇದೇ ರೀತಿ ಮುಂದುವರಿಸುತ್ತೀರಾ ಎಂದು ಇಇ ದೇವರಾಜ್ ಅವರನ್ನು ಪ್ರಶ್ನಿಸಿದರಾದರೂ ಉತ್ತಮ ಮಾತ್ರ ಸಿಗಲಿಲ್ಲ.