ಬಸ್ ಸಿಬ್ಬಂದಿ ಬೇಜವಾಬ್ದಾರಿ ಖಂಡಿಸಿ ರೈತರ ಪ್ರತಿಭಟನೆ
ಚಿಂತಾಮಣಿ: ಬಸ್ಸಿನಲ್ಲಿದ್ದ ತರಕಾರಿ ಮೂಟೆಗಳನ್ನು ಮಾರುಕಟ್ಟೆಯಲ್ಲಿ ಇಳಿಸದೆ ಮತ್ತೆ ಗ್ರಾಮಕ್ಕೆ ವಾಪಸ್ ತಂದ ಖಾಸಗಿ ಬಸ್ ಸಿಬ್ಬಂದಿ ಬೇಜವಾಬ್ದಾರಿತನ ಕಂಡ ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪೆರಮಾಚನಹಳ್ಳಿ ಗೇಟ್ ಬಳಿ ನಡೆದಿದೆ.
ಚಿಂತಾಮಣಿ- ಬೆಂಗಳೂರು ಮಾರ್ಗದ ಪೆರಮಾಚನಹಳ್ಳಿ ಗ್ರಾಮದ ಮುನಿರಾಜು ಎಂಬ ರೈತ ತರಕಾರಿ ಮೂಟೆಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಬುಧವಾರ ಬೆಳಗ್ಗೆ ಇಳಿಸಬೇಕು ಎಂದು ಹೇಳಿ ಕಳುಹಿಸಿದ್ದರೂ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಹಾಗಾಗಿ ರೈತನಿಗೆ ಸಾವಿರಾರು ರುಪಾಯಿ ನಷ್ಟವುಂಟಾಗಿದೆ ಎಂದು ರೈತ ಮುನಿರಾಜು ಹೇಳಿದ್ದಾನೆ.
ಈ ಹಿನ್ನೆಲೆಯಲ್ಲಿ ರೈತರು ಬಸ್ ಸಿಬ್ಬಂದಿ ವಿರುದ್ಧ ಧಿಕ್ಕಾರಗಳನ್ನು ಕೂಗಿ ನಷ್ಟ ಹೊಂದಿದ ರೈತನಿಗೆ ಕ್ಷಮೆಯಾಚಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಬಸ್ಸನ್ನು ಗಂಟೆಗೂ ಹೆಚ್ಚು ತಡೆದು ಪ್ರತಿಭಟನೆ ನಡೆಸಿದರು.
ಕ್ಷಮೆಯಾಚಿಸಿದ ಬಸ್ ಸಿಬ್ಬಂದಿ: ಘಟನೆ ಬಗ್ಗೆ ರೈತರಿಗೆ ಕ್ಷಮೆಯಾಚಿಸಿ ಇನ್ನು ಮುಂದೆ ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳುತ್ತೇವೆಂದು ಚಾಲಕ ಹಾಗೂ ನಿರ್ವಾಹಕರು ಕ್ಷಮೆಯಾಚಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಧು, ರಾಘವೇಂದ್ರ, ಸತ್ತಿ,ದಾಸು, ವೆಂಕಟೇಶ್, ಮಂಜುನಾಥರೆಡ್ಡಿ, ಅಂಬರೀಷ್, ಮಂಜುನಾಥ, ರಮೇಶ್, ಬೈಸಿಕಲ್ ಬಾಬು, ಪ್ರಭಾ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.