ಭ್ರಷ್ಟಾಚಾರ ತಡೆಯಲು ರಾಜಕೀಯಕ್ಕೆ ಬನ್ನಿ: ದೊರೆಸ್ವಾಮಿ
ಕೋಲಾರ: ಭ್ರಷ್ಟಾಚಾರ ತಡೆಗಟ್ಟಲು ಯುವಕರು ರಾಜಕೀಯಕ್ಕೆ ಪ್ರವೇಶ ಮಾಡಬೇಕು. ಇದರಿಂದ ಸದೃಢ ಭಾರತ ನಿರ್ಮಾಣ ಸಾಧ್ಯವೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದೊರೆಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಬಡತನ, ನಿರುದ್ಯೋಗ ಸೇರಿದಂತೆ ಅನೇಕ ಸಮಸ್ಯೆಗಳಿದ್ದು ಯುವ ಜನತೆ ರಾಜಕೀಯಕ್ಕೆ ಪ್ರವೇಶ ಮಾಡಿ ಉತ್ತಮ ಆಡಳಿತ ನೀಡಿದಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ರಾಷ್ಟ್ರವಾಗುತ್ತದೆ ಎಂದರು.
ಉತ್ತಮ ರಾಜಕೀಯ ಮಾಡಿ: ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಉತ್ತಮ ನಾಯಕತ್ವ ಬೆಳಸಿಕೊಂಡು ಮುಂದಿನ ದಿನಗಳಲ್ಲಿ ಒಳ್ಳೆ ರಾಜಕೀಯ ಪಟುಗಳು ಆಗಬೇಕು ಎಂದು ಆಶಿಸಿದರು.
ಪಿಯು ಬಾಲಕರ ಕಾಲೇಜಿನ ಪ್ರಾಂಶುಪಾಲ ವೆಂಕಟಸ್ವಾಮಿ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಇದ್ದರು. ನಂತರ ನಡೆದ ಯುವ ಸಂಸತ್ ಅಣುಕು ಕಲಾಪದಲ್ಲಿ ವಿದ್ಯಾರ್ಥಿಗಳ ಮಾತಿನ ಝಳಕು ಜೋರಾಗಿಯೇ ನಡೆಯಿತು. ಅನ್ನಭಾಗ್ಯ ಯೋಜನೆ ಕೇವಲ ಅಷ್ಟೇ. ಇದರಿಂದ ಬಡವರ ಹೊಟ್ಟೆ ತುಂಬಲ್ಲ ಎಂದು ವಿಪಕ್ಷದ ಸಾಲಿನಲ್ಲಿದ್ದ ಮಕ್ಕಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಲೋಕ ತಂತ್ರ: ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ಮಾಡಿ ಜನರನ್ನು ಸೋಮಾರಿಗಳನ್ನಾಗಿ ಮಾಡಿದೆ. ಬಡತನ ನಿರ್ಮೂಲನೆ ಮಾಡುವ ಹೆಸರಿನಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ತಂತ್ರ ರೂಪಿಸಿದೆ ಎಂದು ಆರೋಪಿಸಿದರು.
ಆದರೆ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡ ಆಡಳಿತ ಪಕ್ಷದವರು ನಮ್ಮ ರಾಜ್ಯದಲ್ಲಿ ಯಾವುದೇ ಒಬ್ಬ ಬಡ ವ್ಯಕ್ತಿ ಹಸಿವಿನಿಂದ ಬಳಲಬಾರದೆಂಬ ಕಾರಣದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು ವಿರೋಧ ಪಕ್ಷಗಳು ಹತಾಶೆಯಿಂದ ಟೀಕೆ ಮಾಡುತ್ತಿವೆ. ನಮ್ಮ ಸರ್ಕಾರ ರಚನಾತ್ಮಕ ಟೀಕೆಗಳಿಗೆ ಮಾತ್ರ ಉತ್ತರ ನೀಡುತ್ತದೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ವಿಧಾನ ಸಭೆಯಲ್ಲಿ ನಡೆಯುವ ಕಲಾಪಗಳ ರೀತಿಯಲ್ಲಿ ವಿಪಕ್ಷ ಮತ್ತು ಆಡಳಿತರೂಢ ವಿದ್ಯಾರ್ಥಿಗಳು ವಾದ-ವಿವಾದಗಳನ್ನು ಮಂಡಿಸುವುದರ ಮೂಲಕ ತಮ್ಮಲ್ಲಿರುವ ನಾಯಕತ್ವ ಗುಣಗಳನ್ನು ಹೊರಚೆಲ್ಲಿದರು. ಸಿಇಟಿ ಬಿಕ್ಕಟ್ಟು, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಚಾರ, ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಅಣುಕು ಯುವ ಸಂಸತ್‌ನಲ್ಲಿ ಚರ್ಚೆ ನಡೆಸಿ ಗಮನ ಸೆಳೆದರು.