ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮರ್ಯಾದೆ ಹೋದೀತು... ಕೆಲಸ ಮಾಡಿ

Vishwanath S
Updated On : 10 Jan 2014, 1:03 am

ಕನ್ನಡಪ್ರಭ ವಾರ್ತ್ಣೆ ಕೋಲಾರ  ,  ಜ.9
ಜಿಲ್ಲೆಯಲ್ಲಿ ನಿರ್ಮಲ ಭಾರತ ಅಭಿಯಾನದಡಿ ಕೇವಲ ಶೇ.20ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ಜಿಲ್ಲಾ ಪಂಚಾಯಿತಿ ತಲೆ ತಗ್ಗಿಸುವಂತಾಗಿದೆ.
ಅಧಿಕಾರಿಗಳು ಫೆ.15ರೊಳಗೆ ಸಚಿವರು ನೀಡಿರುವ ಗಡುವಿನಲ್ಲಿ ಶೌಚಾಲಯಗಳ ನಿರ್ಮಾಣದಲ್ಲಿ ಪ್ರಗತಿ ಸಾಧಿಸದಿದ್ದರೆ ವಿಧಾನಸೌಧದಲ್ಲಿ ಜಿಲ್ಲೆಯ ಮಾರ್ಯದೆಗೆ ಧಕ್ಕೆ ಉಂಟಾಗುತ್ತದೆ ಎಂದು ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಗೌರವ ಉಳಿಯಲ್ಲ: ನಗರದ ಜಿಪಂ ಸಭಾಂಗಣದಲ್ಲಿ ಅವರು ಗುರುವಾರ ಜಿಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಬಹಳಷ್ಟು ಇದೆ. ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ನಿಮಗೂ ಬೆಲೆ ಸಿಗಲ್ಲ, ಜನಪ್ರತಿನಿಧಿಗಳಿಗೂ ವಿಧಾನಸೌಧದಲ್ಲಿ ಕವಡೆ ಕಾಸಿನ ಗೌರವ ಉಳಿಯಲ್ಲವೆಂದು ಹೇಳಿದರು.
ವಿಧಾನಸೌಧದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳ ಮೇಲೆ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ. ಕೋಲಾರ ಜಿಲ್ಲೆಯ ಹೆಸರು ಹೇಳಿದರೆ ಸಚಿವರು, ಹಿರಿಯ ಅಧಿಕಾರಿಗಳು ಮೂಗು ಮುರಿಯುತ್ತಾರೆ. ಇದಕ್ಕೆ ಕಾರಣ ಜಿಲ್ಲೆ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆ ಉಳಿರುವುದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅನುದಾನ ಹೆಚ್ಚಳ: ಎಸ್ಸಿ, ಎಸ್ಟಿ ವರ್ಗಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು 9 ರಿಂದ 15 ಸಾವಿರಕ್ಕೆ ಹೆಚ್ಚಿಸಲಾಗಿದೆ.
 ಆದರೆ ಇತ್ತೀಚಿಗೆ ಸಚಿವರ ಬಳಿ ಮನವಿ ಮಾಡಿದ ಪರಿಣಾಮ ಅನುದಾನ ಹೆಚ್ಚಿಸಲು ಸಮ್ಮತಿಸಿರುವುದರಿಂದ ಗುರಿ ಸಾಧನೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್ ಮಾತನಾಡಿ, ಆಯಾ ಕ್ಷೇತ್ರಗಳಲ್ಲಿ ಜಿಪಂ ಸದಸ್ಯರು, ಇಒ, ಪಿಡಿಒಗಳ ಸಭೆ ನಡೆಸಿ ನಿರ್ಮಲ ಭಾರತ ಅಭಿಯಾನಕ್ಕೆ ವೇಗ ಹೆಚ್ಚಿಸಬೇಕು ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.
ಅಧ್ಯಯನ ಪ್ರವಾಸ: ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ಜಿಲ್ಲೆಯ ಪ್ರಗತಿ ಪರಿಶೀಲನಾ ವೇಳೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಲ ಭಾರತ ಅಭಿಯಾನದಲ್ಲಿ ಆಗಿರುವ ಪ್ರಗತಿಯನ್ನು ನೋಡಿಕೊಂಡು ಬರುವಂತೆ ಸಲಹೆ ನೀಡಿರುವುದರಿಂದ ಜಿಪಂ ಸದಸ್ಯರು, ತಾಪಂ ಇಒಗಳು ಮತ್ತು ಪಿಡಿಒಗಳ ಪ್ರವಾಸಕ್ಕೆ ಕಾರ್ಯಕ್ರಮ ರೂಪಿಸುವಂತೆ ತಿಳಿಸಿದರು.
  ಬಂಗಾರಪೇಟೆ ತಾಲೂಕಿನ ತುಮಟೆಗೆರೆ ಗ್ರಾಮದಲ್ಲಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೂನ್ಯತೆ ಕಂಡು ಬಂದಿದ್ದು, ಈ ಬಗ್ಗೆ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಬಂಗಾರಪೇಟೆ ತಾಲೂಕು ನೋಡಲ್ ಅಧಿಕಾರಿಗಳಿಗೆ ಮನವಿ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಮೋಹನ್ ಆರೋಪಿಸಿದರು.
ಆಹಾರ ತಯಾರಿಕಾ ಘಟಕದ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುವ ಸುವರ್ಣಕುಮಾರಿಯ ನೇಮಕಾತಿಯ ಬಗ್ಗೆ ಯಾವುದೇ ದಾಖಲಾತಿಗಳು ಇರುವುದಿಲ್ಲ. ಇವರು ಸರ್ಕಾರದ ಸುಮಾರು 92 ಲಕ್ಷ ಅನುದಾನವನ್ನು ಖರ್ಚು ಮಾಡಿದ್ದಾರೆ. ಆದರೆ ಯಾವುದಕ್ಕೂ ಲೆಕ್ಕವಿಲ್ಲ. ಈ ಬಗ್ಗೆ ಸದಸ್ಯರು ಪ್ರಶ್ನೆ ಕೇಳುವರೆಂಬ ಭಯದಂದಲೇ ಇಂದಿನ ಸಾಮಾನ್ಯ ಸಭೆಗೆ ಮಹಿಳಾ ಮತ್ತು ಮಕ್ಕಲ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಗೈರು ಹಾಜರಾಗಿದ್ದಾರೆ ಎಂದು ದೂರಿದರು. ಜಿಪಂ ಉಪಾಧ್ಯಕ್ಷೆ ಅಲವೇಲಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement