ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ
ಚಿಂತಾಮಣಿ: ತಾಲೂಕಿನ ಪುಣ್ಯಕ್ಷೇತ್ರ ಆಲಂಬಗಿರಿಯಲ್ಲಿ ನೆಲೆಸಿರುವ ಉದ್ಭವಮೂರ್ತಿ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಅಧ್ಯಕ್ಷ ಡಾ.ಎಂ.ಆರ್.ಜಯರಾಮು ತಿಳಿಸಿದ್ದಾರೆ.
ವೈಕುಂಠ ಏಕಾದಶಿಯಂದು ವೆಂಕಟೇಶ್ವರಸ್ವಾಮಿಯ ದರ್ಶನ ಅತ್ಯಂತ ಪುಣ್ಯಕರ. ಈ ಹಿನ್ನೆಲೆಯಲ್ಲಿ ಆಲಂಬಗಿರಿ ದೇವಾಲಯದಲ್ಲಿ ವಿಶೇಷವಾಗಿ ಅಲಂಕಾರ ಮತ್ತು ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ. ಜ.11 ಶನಿವಾರ ಬೆಳಿಗ್ಗೆ 3.30 ಗಂಟೆಗೆ ಘಂಟನಾದ, ಸುಪ್ರಭಾತ ಸೇವೆ, ಗೋಪೂಜೆ, ವೈಕುಂಠ ದ್ವಾರ ಪ್ರವೇಶ, ವಿಶ್ವರೂಪ ದರ್ಶನ, 6 ಗಂಟೆಗೆ ಮೂಲಸ್ವಾಮಿಗೆ ಅಭಿಷೇಕ, 9 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ರಾತ್ರಿ 8 ಗಂಟೆಗೆ ಆಲಂಬಗಿರಿ ಗ್ರಾಮಸ್ಥರಿಂದ ಪಂಡರಿ ಭಜನೆ ಮತ್ತು ಹರಿಕೀರ್ತನೆ ಏರ್ಪಡಿಸಿಲಾಗಿದೆ.
12 ರಂದು ಭಾನುವಾರ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಘಂಟನಾದ, ಸುಪ್ರಭಾತ ಸೇವೆ, ಗೋಪೂಜೆ, ವೈಕುಂಠ ದ್ವಾರ ಪ್ರವೇಶ, ವಿಶ್ವರೂಪ ದರ್ಶನ, ಬೆಳಿಗ್ಗೆ 5.30 ಕ್ಕೆ ಗರುಡೋತ್ಸವ ಸೇವೆ ಹಾಗೂ ವಿಶೇಷ ನಾದಸ್ವರ ಸಹ ಏರ್ಪಡಿಸಲಾಗಿದೆ ಎಂದು ಹೇಳಿದರು.