ಸಂತ್ರಸ್ತ ರೈತರಿಗೆ ಪರಿಹಾರ ವಿತರಿಸಿ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ನ್ಯಾಯಯುತ ಪರಿಹಾರವನ್ನು ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಮುಖಂಡರು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಪ್ರಗತಿ ಪರಿಶೀಲಿಸಿದ ಸಚಿವರನ್ನು ಭೇಟಿ ಮಾಡಿದ ರೈತ ಮುಖಂಡರು, ರಾಷ್ಟ್ರೀಯ ಹೆದ್ದಾರಿ-7 ಕ್ಕಾಗಿ ಭೂಮಿ ಕಳೆದುಕೊಂಡು ಪರಿಹಾರ ಸಿಗದೇ ತೊಂದರೆಯನ್ನು ಅನುಭವಿಸುತ್ತಿರುವ ರೈತರ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ರಾಷ್ಟ್ರೀಯ ಹೆದ್ದಾರಿ 7 ಕ್ಕೆ 2006-07ನೇ ಸಾಲಿನಲ್ಲಿ ರೈತರ ಭೂಮಿಗಳನ್ನು ಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಕ್ತ ಮಾರುಕಟ್ಟೆಯಲ್ಲಿ ವಿವಿಧ ಸ್ಥಳಗಳಿಗನುಗುಣವಾಗಿ 1 ಎಕರೆಗೆ 30 ಲಕ್ಷದಿಂದ 60 ಲಕ್ಷ ರು.ವರೆಗೂ ಇದ್ದ ರೈತರ ಭೂಮಿಗಳಿಗೆ ಅತ್ಯಂತ ಕಡಿಮೆ ಬೆಲೆಯನ್ನು ನಿಗದಿಪಡಿಸಿದೆ. ಇದರಿಂದ ಅನೇಕ ಪ್ರತಿಭಟನೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಒಂದು ಎಕರೆಗೆ 20 ಲಕ್ಷರೂ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದು ಇದುವರೆಗೂ ಕೆಲ ರೈತರಿಗೆ ಪರಿಹಾರವೇ ಸಿಕ್ಕಿಲ್ಲ. ಅಲ್ಲದೇ ಕಾಮಗಾರಿ ಪೂರ್ಣಗೊಂಡ ನಂತರ ಪ್ರಾಧಿಕಾರವು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಪರಿಹಾರ ಸಿಗಲು ಇನ್ನೂ ವಿಳಂಬವಾಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಭೂಮಿ ಕಳೆದುಕೊಂಡ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು,ಅತ್ತ ಭೂಮಿಯು ಇಲ್ಲದೇ ಇತ್ತ ಪರಿಹಾರವೂ ಇಲ್ಲದೇ ಕೂಲಿ ಮಾಡುವ ಸ್ಥಿತಿ ಬಂದಿದ್ದಾರೆ. ಈ ಕುರಿತು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಹಿಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮತ್ತು ಸರ್ಕಾರದ ಮುಖ್ಯ ಕಾರ್ಯದಶಿ ಎಸ್.ವಿ.ರಂಗನಾಥ್ ಅವರಿಗೆ ಮನವಿ ಪತ್ರಗಳನ್ನು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು ವಿಷಾದ ವ್ಯಕ್ತಪಡಿಸಿದರು.
ಕಳೆದ ಡಿ.2 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ರೈತರು ಅಹೋರಾತ್ರಿ ಧರಣಿಯನ್ನು ನಡೆಸಿದ್ದು ಆಗ ಕೆಲವರು ವಿಷ ಕುಡಿಯಲು ವಿಷದ ಬಾಟಲಿಗಳೊಂದಿಗೆ ಬಂದಾಗ ಪೊಲೀಸರು ವಿಷದ ಬಾಟಲಿಗಳನ್ನು ವಶಪಡಿಸಿಕೊಂಡು ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದರು. ಇಂತಹ ಅನಾಹುತಗಳು ಮುಂದೆ ಸಂಭವಿಸದಿರಲು ತ್ವರಿತವಾಗಿ ಪರಿಹಾರವನ್ನು ವಿತರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸೊಣ್ಣೇಗೌಡ, ಹರೀಶ್, ಬೈರೇಗೌಡ, ಮನೋಹರ್, ನಾರಾಯಣಸ್ವಾಮಿ, ಆನಂದ್, ನಾರಾಯಣಸ್ವಾಮಿ, ನಾಗರಾಜ್, ರಾಮಕೃಷ್ಣಪ್ಪ, ಮುನಿಸ್ವಾಮಿ, ರತ್ನಪ್ಪ, ಧನಂಜಯ ಮುಂತಾದವರು ಉಪಸ್ಥಿತರಿದ್ದರು.