ಅಕ್ರಮ ಮರಳು ದಂಧೆ ತಡೆಗೆ ಆಗ್ರಹ
ಬಂಗಾರಪೇಟೆ: ಕ್ಷೇತ್ರದಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಮರಳು ಲೂಟಿಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದೆ ಲೂಟಿಕೋರರಿಗೆ ಬೆಂಬಲವಾಗಿ ನಿಂತಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಖಂಡಿಸಿ ದಂಧೆಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ರೇಲ್ವೆ ನಿಲ್ದಾಣದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪರಿಸರವನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿ ತಲುಪಿದರು.
ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕ್ಷೇತ್ರದಲ್ಲಿ ಮೊದಲೇ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಮನುಷ್ಯರ ಜೊತೆ ಜಾನುವಾರುಗಳೂ ಪರದಾಡುವಂತಾಗಿದೆ. ಇಂತಹ ವೇಳೆಯಲ್ಲಿ ಕೆರೆಗಳಲ್ಲಿ ತುಂಬಿರುವ ಸಮೃದ್ಧವಾದ ಮರಳನ್ನು ಕೆಲವು ಮಾಫಿಯದವರು ಎಗ್ಗಿಲ್ಲದೆ ಮಾರಾಟದ ದಂಧೆಯಲ್ಲಿ ತೊಡಗಿದ್ದರೂ ಅವರನ್ನು ನಿಯಂತ್ರಿಸುವ ಗೋಜಿಗೆ ತಾಲೂಕು ಆಡಳಿತ ಮುಂದಾಗಿಲ್ಲ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಬಡವರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕೆಲವರು ರಾಜರೋಷವಾಗಿ ಅರ್ಹರಿಗೆ ತಲುಪಿಸದೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಂತಹವರ ಅಕ್ರಮವನ್ನು ಸಂಘಟನೆ ಇತ್ತೀಚಿಗೆ ಪತ್ತೆ ಹಚ್ಚಿದ ಕಾರಣ ಕೆಲವು ರಾಜಕಾರಣಿಗಳು ವರ್ತಕರ ಪರವಾಗಿ ನಿಂತು ಬೆಂಬಲ ನೀಡುತ್ತಿರುವುದು ದುರಾದೃಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ತೆ ಹಚ್ಚಿದ ಸಂಘಟನೆಗೆ ಪೊಲೀಸರ ಮೂಲಕ ಬೆದರಿಕೆ ಹಾಕಿ ಸಂಘಟನೆಯನ್ನು ಮಟ್ಟಹಾಕಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಸಂಘಟನೆ ಹೆದರುವುದಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಈ ಎಲ್ಲಾ ಅಕ್ರಮಗಳನ್ನು ನಿಯಂತ್ರಿಸಬೇಕೆಂದು ತಾಲೂಕು ಆಡಳಿತವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಾಮೇಗೌಡ, ನಾರಾಯಣಸ್ವಾಮಿ, ಆಂಜಿ, ಲಕ್ಷ್ಣಣ್, ಚಲಪತಿ, ಮುನಿಸ್ವಾಮಿಗೌಡ ಮತ್ತಿತರರು ನೇತೃತ್ವವಹಿಸಿದ್ದರು.