ಅವಿಶ್ವಾಸ ಮಂಡನೆಗೆ ಸದಸ್ಯರು ಗೈರು
ಚಿಕ್ಕಬಳ್ಳಾಪುರ: ಜಿಪಂ ಅಧ್ಯಕ್ಷ ಚಿನ್ನಪ್ಪ ಮತ್ತು ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಸಭೆಗೆ ಯಾವುದೇ ಸದಸ್ಯರು ಹಾಜರಾಗದ ಕಾರಣ ರದ್ದಾಯಿತು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ 12 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರವನ್ನು ಸಿಇಒಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಅವಿಶ್ವಾಸ ನಿರ್ಣಯ ಕುರಿತ ವಿಶೇಷ ಸಭೆಯನ್ನು ಕರೆದಿದ್ದರು. ಆದರೆ, ಮಧ್ಯಾಹ್ನ 1 ಗಂಟೆಯಾದರೂ ಯಾವುದೇ ಸದಸ್ಯರು ಸಭೆಯತ್ತ ಬರಲಿಲ್ಲ. ಅವಿಶ್ವಾಸ ನಿರ್ಣಯ ಮಂಡಿಸಲು ಕನಿಷ್ಠ 9 ಮಂದಿ ಸದಸ್ಯರಾದರೂ ಹಾಜರಿರಬೇಕು. ಹಾಗಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
27 ಮಂದಿ ಸದಸ್ಯರನ್ನೊಳಗೊಂಡಿರುವ ಜಿಪಂನಲ್ಲಿ 21 ಸ್ಥಾನವನ್ನು ಗಳಿಸುವ ಮೂಲಕ ಕಾಂಗ್ರೆಸ್ ಬಹುಮತ ಪಡೆದಿದೆ. ಆದರೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವಿಶ್ವಾಸ ನಿರ್ಣಯ ಮಂಡನೆ ಸಭೆ ಕರೆಯುವಂತೆ ಒತ್ತಾಯಿಸಿದ್ದರು.
ಹಾಜರಾಗದಂತೆ ಸೂಚನೆ: ಈ ನಡುವೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪರ ಪಕ್ಷದ ಸದಸ್ಯರು ಮತ ಚಲಾಯಿಸಬಾರದು. ಈ ನಿಟ್ಟಿನಲ್ಲಿ ಸಭೆಗೆ ಗೈರು ಹಾಜರಾಗುವಂತೆ ಸದಸ್ಯರಿಗೆ ಸೂಚನೆ ನೀಡಲಾಗಿತ್ತು. ಆದರೂ ಸಹ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿಂದ ನಿರ್ಮಾಣವಾಗಿರುವ ಎರಡು ಬಣಗಳ ನಡುವಿನ ಪೈಪೋಟಿಯಿಂದ ಸಭೆಯ ಬಗ್ಗೆ ಕುತೂಹಲ ಮೂಡಿತ್ತು.
ಕೆಲ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ತುದಿಗಾಲಿನ ಮೇಲೆ ನಿಂತಿದ್ದರು ಎನ್ನಲಾಗಿದ್ದರೂ ಹಿರಿಯ ಮುಖಂಡರ ಆದೇಶದ ಹಿನ್ನೆಲೆಯಲ್ಲಿ ಹಿಂದೇಟು ಹಾಕಿದ್ದಾರೆ. ಮೊದಲೇ ಚರ್ಚಿಸಿದಂತೆ ಸಭೆಗೆ ಯಾರೂ ಹಾಜರಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಲವರ ಕುತಂತ್ರವಷ್ಟೇ: ಅವಿಶ್ವಾಸ ನಿರ್ಣಯ ಸಭೆ ರದ್ದಾಗುತ್ತಿದ್ದಂತೆ ಹರ್ಷದಲ್ಲಿ ಕಂಡು ಬಂದ ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಕಾಂಗ್ರೆಸ್ನಲ್ಲಿ ಭಿನ್ನಮತವಿಲ್ಲ. ಆದರೆ, ಕೆಲವು ಸದಸ್ಯರ ಕುತಂತ್ರದಿಂದ ಇಷ್ಟೆಲ್ಲಾ ರಾದ್ಧಾಂತ ನಡೆದಿದ್ದು, ಪಕ್ಷದ ಸದಸ್ಯರನ್ನು ಪಕ್ಷದವರ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ವಿಫಲವಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಗೆ ನಿರ್ಲಕ್ಷ್ಯವಿಲ್ಲ: ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿಲ್ಲ. ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿಯೇ ಸೂಚನೆ ನೀಡಲಾಗುತ್ತಿದೆ. ಅಲ್ಲದೇ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಸದಸ್ಯರಿಗೆ ಸಮಾನವಾಗಿ ಹಂಚಲಾಗುತ್ತಿದೆ. ಬದಲಿಗೆ ರಾಜಕೀಯ ಮಾಡುತ್ತಿಲ್ಲ. ಒಬ್ಬೊಬ್ಬ ಸದಸ್ಯರ ಮುಖವನ್ನು ನೋಡಿ ಒಂದೊಂದು ರೀತಿಯಲ್ಲಿ ಅನುದಾನವನ್ನು ನೀಡಿ ತಾರತಮ್ಯ ಮಾಡುತ್ತಿಲ್ಲ ಎಂದರು. ಪ್ರಸ್ತುತ ನಡೆದ ವಿದ್ಯಮಾನಗಳನ್ನು ಮರೆತು ಪ್ರತಿಯೊಬ್ಬರೂ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಮಾಜಿ ಅಧ್ಯಕ್ಷ ಎಂ.ವಿ. ಕೃಷ್ಣಪ್ಪ ಉಪಸ್ಥಿತರಿದ್ದರು.