ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಐಸಿಡಿಎಸ್ ಖಾಸಗೀಕರಣಕ್ಕೆ ವಿರೋಧ

Vishwanath S
Updated On : 11 Jan 2014, 1:23 am

ಕೋಲಾರ, ಜ.10
ಕೇಂದ್ರ ಸರ್ಕಾರ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಯನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಅಂಗನವಾಡಿ ನೌಕರರ ಸಂಘದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣ ತಲುಪಿದ ಅಂಗನವಾಡಿ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದೇಶದ ಮಾನವ ಸಂಪನ್ಮೂಲಗಳ ಬೆಳವಣಿಗೆಗಾಗಿ ಅಂಗನವಾಡಿ ನೌಕರರು ಕಳೆದ 38 ವರ್ಷಗಳಿಂದ ಕೆಲಸ ಮಾಡುತ್ತಾ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ, ಸಾಮಾಜಿಕ ವ್ಯವಸ್ಥೆಯ ಸ್ವಾಥ್ಯವನ್ನು ಕಾಪಾಡುತ್ತಿರುವ ನಮ್ಮನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು  ಆರೋಪಿಸಿದರು.
ಸರ್ಕಾರ ಜಾರಿಗೆ ತಂದಿರುವ ಪಿಂಚಣಿ ಯೋಜನೆಯಿಂದ ಯಾವುದೇ ಉಪಯೋಗವಿಲ್ಲದಂತಾಗಿದೆ. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕೇವಲ 2250 ಗಳಿಗೆ ಇಬ್ಬರ ಕೆಲಸವನ್ನು ಒಬ್ಬರೇ ಮಾಡುತ್ತಿದ್ದಾರೆ ಎಂದು ದೂರಿದರು.
ಅಳಲು: ಅಂಗನವಾಡಿ ಕೇಂದ್ರಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ತಿಂಗಳಿಗೆ ಸರಿಯಾಗಿ ಸೌದೆ ಹಣ, ಬಾಡಿಗೆ ಹಣ, ತಿಂಗಳ ಗೌರವ ಧನ ಸಕಾಲಕ್ಕೆ ಬರದೇ ಇರುವುದರಿಂದ ಜೀವನ ನಡೆಸುವುದು ಸಮಸ್ಯೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿಯೂ ಹೋರಾಟ ಮಾಡಿಯೇ ಪಡೆಯಬೇಕಾದ ದುಸ್ಥಿತಿಯಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಐಸಿಡಿಎಸ್ ಯೇತರ ಕೆಲಸಗಳಾದ ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮೀ ಕೆಲಸ ಮಾಡಿ ಸ್ಥಳೀಯ ರಾಜಕೀಯ ಒತ್ತಡಗಳಿಗೆ ಒಳಗಾಗಿ ಕೆಲ ಅಂಗನವಾಡಿ ನೌಕರರು ತಮ್ಮದಲ್ಲದ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಕೆಲಸದಿಂದ ತೆಗೆದವರನ್ನು ಪುನಾ ಕೆಲಸಕ್ಕೆ ತೆಗೆದುಕೊಳ್ಳಲು ಕಾನೂನು ಇಲ್ಲ ಎಂಬ ವಾದವನ್ನು ಮಂಡಿಸಲಾಗುತ್ತಿದೆ. ಈ ಸಮಸ್ಯೆಗಳ ಮಧ್ಯೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಕಾಯಂ ಬದಲಿಗೆ ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಟಿವೆ ಎಂದು ಅಪಾದಿಸಿದರು.
ಸರ್ಕಾರ ಐಸಿಡಿಎಸ್ ಯೋಜನೆ ತಕ್ಷಣ ಕೈಬಿಡಬೇಕು, ಐಸಿಡಿಎಸ್‌ನ್ನು ಎನ್‌ಜಿಓಗಳು ಕಾರ್ಪೋರೇಟ್ ಸಂಸ್ಥೆಗಳಿಗೆ ವಹಿಸಬಾರದು. ರಾಜ್ಯದ 12 ಜಿಲ್ಲೆಗಳಲ್ಲಿ ಈ ತಕ್ಷಣ ಖಾಸಗೀಕರಣ ಪ್ರಸ್ತಾಪನೆ ವಾಪಸ್ ಪಡೆಯಬೇಕು. ಈಗಿರುವ ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸಬಾರದು. ಅಂಗನವಾಡಿ ಕೇಂದ್ರದ ಕೆಲಸದ ಅವಧಿ ಹೆಚ್ಚಿರುವುದರಿಂದ ಕಾರ್ಯಕರ್ತೆಯರಿಗೆ 10 ಸಾವಿರ, ಸಹಾಯಕಿಯರಿಗೆ ಕನಿಷ್ಠ ಕೂಲಿ ಕೊಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಗೌರವಧನವನ್ನು ಏಕಕಾಲದಲ್ಲಿ ನೀಡಬೇಕು, ಮಿನಿ ಅಂಗನವಾಡಿಗಳನ್ನು ಪೂರ್ಣ ಪ್ರತಿಭಟನೆ ನೇತೃತ್ವವನ್ನು ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಗೌರವಾಧ್ಯಕ್ಷೆ ಜಿ. ಈಶ್ವರಮ್ಮ, ಅಧ್ಯಕ್ಷೆ ಮುನಿರಾಜಮ್ಮ, ಕಾರ್ಯದರ್ಶಿ ಬಿ.ಎಸ್. ನಾಗರತ್ನ, ಖಜಾಂಚಿ ಜಯಮ್ಮ, ಸರಸ್ವತಮ್ಮ, ಜಯಲಕ್ಷ್ಮಿ, ಭಾಗ್ಯ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement