ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕವಿನಮನ ನಡೆಸಲು ಸಿದ್ಧತೆ

Vishwanath S
Updated On : 11 Jan 2014, 1:24 am

ಕೋಲಾರ: ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಕೇಂದ್ರವಾದ ಮನ್ವಂತರ ಪ್ರಕಾಶನದಿಂದ ಜ.12ರಂದು ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿರುವ ಸಾಹಿತಿ, ಕವಿ, ಚಿಂತಕ ಸ.ರಘುನಾಥ ಅವರಿಗೆ ಕವಿನಮನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ.
2009, ಆ.18ರಂದು ನಾಡಿನ ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಅವರಿಗೆ ಕವಿ ನಮನ ಕಾರ್ಯಕ್ರಮ ನಡೆಸುವ ಜಿಲ್ಲೆಯಲ್ಲಿನ ಯುವಕರಲ್ಲಿ ಸಾಹಿತ್ಯಾಭಿಮಾನ ಮೂಡಿಸುತ್ತಾ ಬಂದಿರುವ ಮನ್ವಂತರ ಪ್ರಕಾಶನ ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಉದಯಕುಮಾರ್ ಹಾಗೂ ನಗರಸಭೆಯ ಸದಸ್ಯ ಪ್ರಸಾದ್ ಬಾಬು ಸೇರಿದಂತೆ ಇನ್ನಿತರರ ಸಹಕಾರದಿಂದ ಸ.ರಘುನಾಥ ಅವರಿಗೆ ಕವಿ ನಮನವನ್ನು ಹಾಗೂ ಸ್ವರಚಿತ, ಅನುವಾದಿತ, ಇಷ್ಟಪಡುವ ಕವಿಗಳ ಕವಿತೆಯ ವಾಚನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತುಂಬಲು ಸಿದ್ಧತೆ ನಡೆಸುತ್ತಿದ್ದು 22 ಮಂದಿ ಆಯ್ದ ಕವಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮಾಲೂರು ತಾಲೂಕಿನವರಾದ ಸ.ರಘುನಾಥ ಅವರು ಸಾಹಿತ್ಯ ರಚನೆಯಲ್ಲಿ ಕಳೆದ 35 ವರ್ಷಗಳಿಂದ ಸಕ್ರಿಯರಾಗಿದ್ದು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಮಾಲೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಶ್ರೀನಿವಾಸಪುರ ತಾಲೂಕಿನ ಕಾಶೆಟ್ಟಿಹಳ್ಳಿಯಲ್ಲಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಇವರು ಇನ್ನು 8 ತಿಂಗಳಲ್ಲಿ ನಿವೃತ್ತಿ ಆಗಲಿದ್ದಾರೆ.
ಮಕ್ಕಳ ಸಾಹಿತ್ಯ ರಚನೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಮಕ್ಕಳಿಗೆ ಸಾಹಿತ್ಯ ಬಗ್ಗೆ ಆಸಕ್ತಿ ಮೂಡಿಸಲು ನಿರಂತರವಾಗಿ ಕಾಯಕ ನಡೆಸುತ್ತಿದ್ದಾರೆ. ಜ.12ರಂದು ಭಾನುವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿರುವ ಕವಿನಮನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಿ.ಕೆ.ರವಿ ಉದ್ಘಾಟಿಸಲಿದ್ದು, ಸಾಹಿತಿ, ರಾಮನಗರ ಜಿಲ್ಲಾಧಿಕಾರಿಯೂ ಆಗಿರುವ ಡಾ.ಡಿ.ಎಸ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸ.ರಘುನಾಥರವರ ಸಾಹಿತ್ಯ ಕೃಷಿ ಕುರಿತು ಹಿಂಪಿ ವಿಶ್ವ ವಿದ್ಯಾಲಯದ ಪ್ರೊಫೆಸರ್ ಕೆ.ಸಿ.ಶಿವಾರೆಡ್ಡಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ಗಡಿನಾಡ ಕನ್ನಡ ಸೇವಕರಾಗಿರುವ ನಂದ್ಯಾಲ ನಾರಾಯಣರೆಡ್ಡಿ ಅವರನ್ನು ಸನ್ಮಾನಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಆಗಮಿಸಿಬೇಕೆಂದು ಮನ್ವಂತರ ಪ್ರಕಾಶನದ ಗೌರವ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ, ಓಂಶಕ್ತಿ ಚಲಪತಿ, ಮಾಲೂರು ಅಶ್ವತ್ಥರೆಡ್ಡಿ, ರವೀಂದ್ರ ಸಿಂಗ್,ಪ್ರಕಾಶ್,ನಾಗರಾಜ್, ಬದರಿನಾಥ್,ಗೋಪಿನಾಥ್,ಗಣೇಶ್, ಉದಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement