ಕುಂಬಾರ ವಧು-ವರರ ನೋಂದಣಿ ಕೇಂದ್ರ ಪ್ರಾರಂಭ
ಮಾಲೂರು: ಕುಂಬಾರ ವಧು-ವರರ ನೋಂದಣಿ ಕೇಂದ್ರವನ್ನು ಮಾಲೂರಿನ ಕುಂಬಾರ ಪೇಟೆಯಲ್ಲಿ ಪ್ರಾರಂಭಿಸಲಾಗಿದೆ. ಕುಂಬಾರ ಜನಾಂಗದಲ್ಲಿ ಕುಲಾಲ, ಮೂಲ್ಯ, ಗುಣಗ ಹಾಗೂ ಸಮಾಜದ ಇತರೆ ಒಳಪಂಗಡಗಳ ವಧು-ವರರ ಮಾಹಿತಿ ಮಾರ್ಗದರ್ಶಿ ಕೇಂದ್ರವನ್ನು ಪಟ್ಟಣದ ಮಿಠಾಯಿ ಬೀದಿಯಲ್ಲಿ ಪ್ರಾರಂಭಿಸಲಾಗಿದೆ. ಅರ್ಜಿ ಪಡೆದು ಭಾವಚಿತ್ರ ಸಹಿತ ವಿವರಗಳನ್ನು ಭರ್ತಿ ಮಾಡಿ ಅವಶ್ಯವುಳ್ಳವರು ನೀಡಬಹುದಾಗಿದೆ. ಉತ್ತಮ ಸಂಗಾತಿ ಆಯ್ಕೆಗೆ ನೆಟ್ವರ್ಕ್ ಸಹಾಯದಿಂದ ರಾಜ್ಯಾದ್ಯಂತ ಇರುವ ವಧು-ವರರ ಮಾಹಿತಿಗಳು ಇಲ್ಲಿನ ಕೇಂದ್ರದಲ್ಲೇ ಲಭ್ಯವಾಗಲಿದೆ ಎಂದು ಮಾಹಿತಿ ಕೇಂದ್ರದ ವ್ಯವಸ್ಥಾಪಕ ವಾಸವಿ ಮಂಜು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9141217847, 9620025288 ನ್ನು ಸಂಪರ್ಕಿಸಲು ಕೋರಿದ್ದಾರೆ.
ಚಿನ್ನ-ಬೆಳ್ಳಿ ಅಂಗಡಿ ವರ್ತಕರ ಮನವಿ
ಮಾಲೂರು: ಪರವಾನಗಿ ಪಡೆಯುವಂತೆ ಪುರಸಭೆ ನೋಟಿಸ್ ನೀಡಿರುವುದನ್ನು ಖಂಡಿಸಿ ಪಟ್ಟಣದ ಚಿನ್ನ-ಬೆಳ್ಳಿ ಅಂಗಡಿ ವರ್ತಕರ ನಿಯೋಗವು ಪುರಸಭೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ರಮೇಶ್ಬಾಬು ಕುಮಾರ್, ರಾಜ್ಯದೆಲ್ಲಡೆ ಚಿನ್ನಬೆಳ್ಳಿ ಮಾರಾಟಗಾರರು ಸ್ಥಳೀಯ ಆಡಳಿತದಿಂದ ವ್ಯಾಪಾರ ಪರವಾನಗಿ ಪಡೆಯುವ ಅವಕಾಶವಿಲ್ಲದಿದ್ದರೂ ಮಾಲೂರಿನ ಪುರಸಭೆ ವ್ಯಾಪಾರದ ಪರವಾನಗಿ ಪಡೆಯೇಬೇಕು ಎಂದು ವರ್ತಕರಿಗೆ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಹೇಳಿದರು. ಈ ಬಗ್ಗೆ ಸರ್ಕಾರದ 1964ರ ಕಲಂ 256 ಕಾನೂನು ನಲ್ಲಿ ನಮೂದಿಸಲಾಗಿದ್ದರೂ ಪುರಸಭೆ ಅಧಿಕಾರಿಗಳ ಬಲವಂಥ ಮಾಡುತ್ತಿರುವುದು ಖಂಡನೀಯ ಎಂದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ಈ ಸಂದರ್ಭದಲ್ಲಿ ಮಾತನಾಡಿ, ಯಾವುದೇ ವ್ಯಾಪಾರವು ಪಟ್ಟಣದ ವ್ಯಾಪ್ತಿಯೊಳಗೆ ಪ್ರಾರಂಭಿಸಬೇಕಾದರೆ ಪುರಸಭೆ ಪರವಾನಗಿ ಪಡೆಯಲೇಬೇಕು. ಕಳ್ಳತನವಾದಾಗ ಪೊಲೀಸರಿಗೆ ಇಲ್ಲಿನ ವ್ಯಾಪಾರ ಪರವಾನಗಿ ನೀಡಿದಾಗ ಮಾತ್ರ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವಾರ್ಷಿಕ ಪರವಾನಗಿ ಪಡೆದು ಪಟ್ಟಣದ ಅಬಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಈ ಬಗ್ಗೆ ಡಿಎಂಇ ಅವರ ಮಾರ್ಗದರ್ಶನ ಪಡೆದು ಇನ್ನೊಂದು ವಾರದಲ್ಲಿ ಚಿನ್ನಬೆಳ್ಳಿ ವರ್ತಕರ ಸಭೆ ಕರೆಯುವುದಾಗಿ ತಿಳಿಸಿದ ಮುಖ್ಯಾಧಿಕಾರಿ, ಅಲ್ಲಿಯ ತನಕ ಪುರಸಭೆ ಅಧಿಕಾರಿಗಳನ್ನು ಅಂಗಡಿ ಬಳಿ ಕಳುಹಿಸುವುದಿಲ್ಲ ಎಂಬ ಭರವಸೆ ನೀಡಿದರು. ಕಂದಾಯ ಅಧಿಕಾರಿಗಳಾದ ಜ್ಯೋತಿ, ರಮೇಶ್, ಆರೋಗ್ಯಾಧಿಕಾರಿ ಉದಯ್, ಚಿನ್ನಬೆಳ್ಳಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ವಂಸತ ಕುಮಾರ್, ನವರತನ್, ಕಿಶೋರ್, ಸುರೇಶ್ಬಾಬು, ಪಪ್ಪು, ರೆಡ್ಡಿ, ಬಾಬು ಇದ್ದರು.
ಪೂರ್ವಭಾವಿ ಸಭೆ
ಚಿಂತಾಮಣಿ: ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಕರೆ ನೀಡಿದರು. ನಗರಸಭೆ ಸಭಾಂಗಣದಲ್ಲಿ 26ರಂದು ಆಚರಿಸುವ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರ ಸಹಕಾರ ಮುಖ್ಯ ಎಂದರು.
ಸಿದ್ದರಾಮೇಶ್ವರ ಜಯಂತಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜ.13ರಂದು ಚಿಂತಾಮಣಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಂಡಾಧಿಕಾರಿಗಳು ತಿಳಿಸಿದರು. ಜಯಂತಿ ಆಚರಣೆಗೆ ಎಲ್ಲಾ ಅಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಯ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಾದ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ, ಆಂಜನೇಯರೆಡ್ಡಿ, ಕೃಷ್ಣಪ್ಪ, ವೆಂಕಟರವಣಪ್ಪ, ವಕೀಲ ಗೋಪಿ, ಬೋವಿ ಸುಬ್ರಮಣಿ, ಕರವೇ ಅಂಬರೀಷ್, ಗಂಗುಲಪ್ಪ ಉಪಸ್ಥಿತರಿದ್ದರು.
ಬಾಲಕಿ ಮೇಲೆ ಅತ್ಯಾಚಾರ?
ಚಿಂತಾಮಣಿ: ಹುಲ್ಲುಗುಮ್ಮನಹಳ್ಳಿ ಗ್ರಾಮದಲ್ಲಿ ಆರು ವರ್ಷದ ಬಾಲಕಿ ಮೇಲೆ ವೃದ್ಧನೋರ್ವ ಚಾಕೋಲೇಟ್ ಕೊಡುವುದಾಗಿ ನಂಬಿಸಿ ಮನೆಯೊಳಗೆ ಕರೆದೊಯ್ದು ಬುಧವಾರ ಅತ್ಯಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಗ್ರಾಮದ ರಾಮಪ್ಪ (65) ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಘಟನೆ ಬುಧವಾರ ಸಂಜೆ ನಡೆದಿದ್ದು, ಗುರುವಾರ ಸಂಜೆ ಬಾಲಕಿ ಮೈಮೇಲೆ ಗಾಯಗಳ ಗುರುತು ಕಂಡಿದ್ದರಿಂದ ಗಾಬರಿಗೊಂಡ ಪೋಷಕರು ಸುತ್ತಮುತ್ತಲು ವಿಚಾರಿಸಿದಾಗ ವೃದ್ಧನ ಮೇಲೆ ಅನುಮಾನ ಮೂಡಿದೆ. ಊರಿನ ಗ್ರಾಮಸ್ಥರಿಗೆ ವಿಷಯ ತಿಳಿದಿದೆ. ಇದೇ ಸಂದರ್ಭದಲ್ಲಿ ರಾಮಪ್ಪ ತಲೆ ಮರೆಸಿಕೊಂಡಿದ್ದಾನೆ. ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೈದ್ಯಕೀಯ ಪರೀಕ್ಷೆ: ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವನ್ನು ಪೊಲೀಸರ ಸಮಕ್ಷಮದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರವಷ್ಟೇ ಅತ್ಯಾಚಾರ ಆಗಿದೆಯೇ? ಇಲ್ಲವೇ ಎಂಬುದು ತಿಳಿಯಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ವಿಚಾರಣೆ ಕೈಗೊಂಡಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಗೆ ಇಂದು ಚಾಲನೆ
ಕೋಲಾರ: ನರೇಂದ್ರ ಕೋ ನಮನ್ ಕಾರ್ಯಕ್ರಮದಡಿ ಬಿಜೆಪಿ ಯುವ ಮೋರ್ಚಾದಿಂದ ಜ.11ರಂದು 10.30ಕ್ಕೆ ನಗರದ ಪವನ್ ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಬಿಜೆಪಿಗೆ ಯುವಕರನ್ನು ಸೆಳೆದು ಲೋಕಸಭಾ ಚುನಾವಣೆಗೆ ಸಜ್ಜಾಗಲು ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದ್ದು ರಣಜಿ ಕ್ರಿಕೆಟ್ ಆಟಗಾರ ಕೆ.ಪಿ. ಪವನ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ರಾಜ್ಯ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪಿ.ಮುನಿರಾಜು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೃಷ್ಣಾರೆಡ್ಡಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಇತರರು ಭಾಗವಹಿಸಲಿದ್ದಾರೆ.