ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾಸ್ಪತ್ರೆಗೆ 24 ಗಂಟೆ ವಿದ್ಯುತ್ ಪೂರೈಕೆಗೆ ಸೂಚನೆ

Vishwanath S
Updated On : 11 Jan 2014, 1:23 am

ಕ.ಪ್ರ.ವಾರ್ತೆ , ಕೋಲಾರ , ಜ.10
ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗ ಹಾಗೂ ಬೆಸ್ಕಾಂ ನಡುವಿನ ಹೊಂದಾಣಿಕೆ ಕೊರತೆಯಿಂದ ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ದೊರೆಯದಂತಾಗಿದೆ. ಎರಡೂ ಇಲಾಖೆಗಳ ಅಧಿಕಾರಿಗಳು ಆಸ್ಪತ್ರೆಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ಗಮನ ನೀಡದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ತಮ್ಮ ಇಲಾಖೆಗೆ ಒಳಪಟ್ಟ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ತಮಗೆ ಬಂದಿರುವ ದೂರುಗಳ ಬಗ್ಗೆ ಪ್ರಸ್ತಾಪಿಸಿ ಆಸ್ಪತ್ರೆಗೆ ಬೇಕಾಬಿಟ್ಟಿ ವಿದ್ಯುತ್ ಸರಬರಾಜು ಮಾಡಿದರೆ ರೋಗಿಗಳ ಗತಿ ಏನು ಎಂದು ಬೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ವಿಳಂಬ ಧೋರಣೆ ಬೇಡ: ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ರಮೇಶ್ ಬಾಬು ಅವರಿಂದ ಮಾಹಿತಿ ಪಡೆದ ಸಚಿವರು, ಆರೋಗ್ಯ ಅಗತ್ಯ ಸೇವೆಯಾಗಿದ್ದು ಎಸ್.ಎನ್.ಆರ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ದಿನದ 24 ಗಂಟೆ ಕಡ್ಡಾಯವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಬೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.  
ನೀರಿನ ಸಮಸ್ಯೆ ಕಲ್ಪಿಸಲು ಕೊಳವೆ ಬಾವಿಗಳನ್ನು ಕೊರೆದು ಸುಮಾರು ತಿಂಗಳಾದರೂ ವಿದ್ಯುತ್ ಸಂಪರ್ಕ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ ಹಾಗೂ ಬೆಸ್ಕಾಂ ನಡುವೆ ಸಂಪರ್ಕ ಸಂಯೋಜನೆಯ ಕೊರತೆ ಕಾಣುತ್ತಿದೆ ಇದರ ಪರಿಣಾಮ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಆದೇಶಿಸಿದರು.
ಅನುದಾನ ಬಿಡುಗಡೆ: ಆರ್.ಟಿ.ಇ ಯೋಜನೆಗೆ ಸರ್ಕಾರ 3 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಇನ್ನೊಂದು ತಿಂಗಳಲ್ಲಿ ಎಲ್ಲಾ ತಾಲೂಕುವಾರು ಬಿ.ಇ.ಒಗಳ ಮೂಲಕ ಖಾಸಗಿ ಶಾಲೆಗಳಿಗೆ ಬಾಕಿ ಹಣ ಬಿಡುಗಡೆ ಮಾಡಲಾಗುವುದು ಎಂದು ಡಿ.ಡಿ.ಪಿ.ಐ ಪದ್ಮನಾಭ್ ತಿಳಿಸಿದರು.
ಯಾವುದೇ ಅನುದಾನವಿರಲಿ ನಿಗದಿತ ವೇಳೆಗೆ ವಿಲೇವಾರಿ ಮಾಡಬೇಕೆಂದು ಸಚಿವರು ಸೂಚಿಸಿದರಲ್ಲದೆ, ಕ್ಷೀರಭಾಗ್ಯ ಯೋಜನೆಯಲ್ಲಿ ಯಾವುದೇ ಲೋಪದೋಗಳು ಇಲ್ಲದೆ ಅನುಷ್ಠಾನ ಮಾಡಬೇಕು, ಒಂದು ವೇಳೆ ವ್ಯತ್ಯಾಸ ಕಂಡು ಬಂದಲ್ಲಿ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲು ತೀರ್ಮಾನಿಸಿದ್ದು, ಸಭೆಯಲ್ಲಿ ಗೊಂದಲಕ್ಕೆ ಅವಕಾಶವಿಲ್ಲದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಮಾಹಿತಿ ಒದಗಿಸಲು ಸೂಚಿಸುವಂತೆ ತಾಕೀತು ಮಾಡಿದರು.
ಬೇಸಿಗೆ ಸಮೀಪಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುವ ಸಂಭವವಿದ್ದು, ಅಧಿಕಾರಿಗಳು ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ಕಡೆ ರಸ್ತೆಗಳು ಹಾಳಾಗಿವೆ. ಸಾರ್ವಜನಿಕರು ಪ್ರತಿಭಟನೆ ನಡೆಸುವ ಮುನ್ನವೇ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಲೋಕೋಪಯೋಗಿ ಇಲಾಖೆಯ ಇಇಗೆ ತಿಳಿಸಿದರು.
ಫೆಬ್ರವರಿ ತಿಂಗಳ ಕೊನೆಯ ವಾರಕ್ಕೆ ಎಲ್ಲಾ ಉಳಿಕೆ ಕಾಮಗಾರಿಗಳನ್ನು ಮುಗಿಸಲಾಗುತ್ತದೆ, ಈಗಾಗಲೇ ರಸ್ತೆಗಳ ಗುಂಡಿ ಮುಚ್ಚಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿಆಂಜನಪ್ಪ ತಿಳಿಸಿದರು. ಇದೇ ವೇಳೆ ವಿಶೇಷ ಘಟಕ ಯೋಜನೆಯಲ್ಲಿ ಹಾಗೂ ಗಿರಿಜನ ಉಪಯೋಜನೆ ಅಡಿ ಪರಿಶಿಷ್ಟ ಜಾತಿಯವರಿಗೆ ಗುತ್ತಿಗೆ ನೀಡಲಾಗುತ್ತಿದೆಯೇ ಎಂದು ಕೇಳಿದಾಗ ಎಸ್.ಸಿ.ಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ 7.78 ಕೋಟಿ ಅನುದಾನ ಲಭ್ಯವಿದೆ. ಆ ಸಮುದಾಯಗಳ ಗುತ್ತಿಗೆದಾರರು ಬಂದರೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರೇ ಹೆಚ್ಚಾಗಿದ್ದರೂ ಅವರು ಬರುವವರೆಗೂ ಕಾಯುವುದು ಸಮಂಜಸವಲ್ಲ. ಕೂಡಲೇ ಪ್ರತಿ ತಾಲೂಕಿನಿಂದಲೂ 5 ಜನ ಪ.ಜಾ ಗುತ್ತಿಗೆದಾರರನ್ನು ಗುರುತಿಸಿ ಅನುದಾನ ಬಳಕೆ ಮಾಡಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಇತ್ತೀಚೆಗೆ ಶ್ರೀನಿವಾಸಪುರದಲ್ಲಿ 6 ಸಾವಿರ ಫಲಾನುಭವಿಗಳಿಗೆ ಮಾಸಾಶನ ಪತ್ರಗಳನ್ನು ವಿತರಿಸಲಾಗಿದೆ. ಅದೇ ರೀತಿ ಎಲ್ಲಾ ತಾಲೂಕುಗಳಲ್ಲಿ ಮಾಸಾಶನ ಅದಾಲತ್‌ಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 75 ಸಾವಿರ ಪಡಿತರ ಚೀಟಿಗಾಗಿ ಅರ್ಜಿಗಳು ಬಂದಿದ್ದು, ಅವುಗಳಲ್ಲಿ 14250 ಪಡಿತರ ಚೀಟಿಗಳನ್ನು ನೀಡಲಾಗಿದೆ. ಅಲ್ಲದೆ 15000 ಎ.ಪಿ.ಎಲ್. ಪಡಿತರ ಚೀಟಿಗಳನ್ನು ಸಹಾ ವಿತರಿಸಲಾಗಿದೆ ಎಂದು ಹೇಳಿದರು. ಜಿಪಂ ಸಿಇಒ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ಕಳೆದ ತಿಂಗಳು 3ನೇ ಸ್ಥಾನದಲ್ಲಿತ್ತು ಆದರೆ ಪ್ರಸಕ್ತ ತಿಂಗಳು 5ನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ತೂಪಲ್ಲಿ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್ ಉಲ್ಲಾ ಇದ್ದರು.
ಪೋಲಿಯೊ ಯಶಸ್ವಿಗೊಳಿಸಲು ಆದೇಶ
ಕೋಲಾರ: ಇದೇ 16ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಪೋಲಿಯೊ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ, ತಾಪಂ ಇಒ ಡಿ. ಜಾನಕಿರಾಂ, ರೋಟರಿ ಸಂಸ್ಥೆಯ ಅಧ್ಯಕ್ಷ ಬಿ. ಗೋಪಾಲಕೃಷ್ಣ ರೆಡ್ಡಿ, ಪಲ್ಸ್ ಪೋಲಿಯೊ ಜಿಲ್ಲಾ ಉಪಾಧ್ಯಕ್ಷ ವಿ.ಪಿ. ಸೋಮಶೇಖರ್, ನಿರ್ಮಲ ಭಾರತ ಅಭಿಯಾನ ತಾಲೂಕು ಸಂಯೋಜಕ ಜಿ. ಶ್ರೀನಿವಾಸ್, ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement