ನಿಂತ ನೀರಾದ ಟೇಕಲ್- ಮಾಸ್ತಿ ರಸ್ತೆ ಕಾಮಗಾರಿ
ಟೇಕಲ್: ಟೇಕಲ್- ಮಾಸ್ತಿ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿರುವುದರಿಂದ ವಾಹನ ಸವಾರರಿಗೆ, ವರ್ತಕರಿಗೆ, ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ರಸ್ತೆಗೆ ಜಲ್ಲಿ ಹಾಕಿ ಸುಮಾರು 8 ತಿಂಗಳಾದರೂ ಸರಿಯಾದ ಮಣ್ಣು ಮತ್ತು ಡಾಂಬರು ಹಾಕುವ ವ್ಯವಸ್ಥೆಯಾಗಿಲ್ಲ. ಸುಮಾರು ಒಂದೂವರೆ ವರ್ಷಗಳ ಹಿಂದೆ ಕೊತ್ತಪಲ್ಲಿ ಮಾಸ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಹಾಗೂ ಅಗಲೀಕರಣ ಕೈಗೊಳ್ಳಲಾಯಿತು. ಆದರೆ ಆಮೆಗತಿಯಲ್ಲಿ ಪ್ರಾರಂಭವಾದ ಕಾಮಗಾರಿ ಪ್ರಾರಂಭವಾದಲ್ಲೇ ನಿಂತಿದೆ. ಟೇಕಲ್ ವೃತ್ತದ ಬಳಿಯ ಹಳ್ಳ ಕೊಳ್ಳಗಳಿಂದ ಕೂಡಿದ್ದು, ಪ್ರಯಾಣಿಕರಣೆ ನರಕಯಾತನೆಯಾಗಿದೆ. ರಸ್ತೆ ಕೆ.ಜಿ. ಹಳ್ಳಿ, ಕಣಗಲ, ಶೆಟ್ಟಹಳ್ಳಿ ಕ್ರಾಸ್‌ವರೆಗೂ ರಸ್ತೆಗೆ ದೊಡ್ಡ ಜಲ್ಲಿಯಾಕಿ ಸುಮಾರು 8 ತಿಂಗಳಾಗಿ ಕೇಳುವವರೇ ಇಲ್ಲದಂತಾಗಿದೆ.
ರೋಗಿಗಳು, ಗರ್ಭಿಣಿಯರು ಈ ರಸ್ತೆ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಸೇವೆಯ 108 ಆಂಬ್ಯುಲೆನ್ಸ್‌ಬಹಳ ಕಟ್ಟಪಟ್ಟು ಓಡಾಡುತ್ತಿದೆ. ಆದಾಗ್ಯೂ ಕೆಲವು ಬಾರಿ ಈ ರಸ್ತೆಯ ಜಲ್ಲಿಯ ಬರುವುದಕ್ಕೆ ಆಗುವುದಿಲ್ಲ. ಒಂದು ಕಡೆ ಜಲ್ಲಿಯಾದರೆ ಇನ್ನೊಂದೆಡೆ ಧೂಳುಮಯವಾಗಿದೆ.
ಈ ಭಾಗದಲ್ಲಿ ಅತೀ ಹೆಚ್ಚು ಜಲ್ಲಿ ಕ್ರಷರ್‌ಗಳಿದ್ದು ದಿನವಹಿ 500 ರಿಂದ 1000 ಜಲ್ಲಿ ತುಂಬಿದ ಟಿಪ್ಪರ್ ಲಾರಿಗಳು ಓಡಾಡುತ್ತಿದ್ದು, ನಿಜಕ್ಕೂ ರಸ್ತೆಯ ಕಿರಕಿರಿ ಕೇಳತೀರದಾಗಿದೆ. ಟಿಪ್ಪರ್ ಲಾರಿಯ ಹಿಂದೆ ದ್ವಿಚಕ್ರ ವಾಹನ ಹೋದರೆ ಆತ ಗುರ್ತು ಸಿಗದಂತೆ ಇರುತ್ತಾನೆ. ಅತೀ ಮುಖ್ಯವಾಗಿ ಕಾಮಗಾರಿ ಮಾಡುವವರು ಪ್ರತಿದಿನ ಜಲ್ಲಿಯ ಮೇಲೆ ನೀರು ಹಾಯಿಸಬೇಕು ಅದು ಯಾವ ಕಾರ್ಯವು ನಡೆಯದೆ ಧೂಳು ಮಯವಾಗಿದೆ.
ನಿರ್ಲಕ್ಷ್ಯ: ತಾಲೂಕು ಮತ್ತು ಜಿಲ್ಲಾ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದು, ಗುತ್ತಿಗೆದಾರರಾದ ವೆಂಕಟರಾಮರೆಡ್ಡಿ ಅವರಿಗೆ ಈ ಬಗ್ಗೆ ಸಾರ್ವಜನಿಕರು ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾಮಗಾರಿಯ ಟೆಂಡರ್ ಅವಧಿ ಮುಗಿದಿದ್ದರೂ ಜಿಲ್ಲಾಧಿಕಾರಿಗಳು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಮಾರ್ಚಿಯೊಳಗೆ ಇದರ ಕೆಲಸ ಮುಗಿಸಬೇಕೆಂದು ಗಡುವು ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಒಟ್ಟಾರೆ ಒಂದು ವಾರದೊಳಗಾಗಿ ಟೇಕಲ್ ಮಾಸ್ತಿ ರಸ್ತೆ ದೊಡ್ಡ ಜಲ್ಲಿಯ ಬಾಧೆ ತಪ್ಪಿಸದಿದ್ದಲ್ಲಿ ಟೇಕಲ್‌ನಲ್ಲಿ ರಸ್ತೆ ತಡೆ ನಡೆಸಲಾಗುವುದೆಂದು ಕೆ.ಜಿ. ಹಳ್ಳಿ ವರ್ತಕರ ಸಂಘ, ಶೆಟ್ಟಹಳ್ಳಿ ಕಣಗಲ ವಾಹನ ಸವಾರರು, ಟೇಕಲ್ ದಿನ್ನೆ ಮನೆಗಳವರು ಎಚ್ಚರಿಕೆ ನೀಡಿದ್ದಾರೆ.
-- ಟೇಕಲ್ ಲಕ್ಷ್ಮೀಶ