ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೂರು ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ

Vishwanath S
Updated On : 11 Jan 2014, 1:23 am

ಕೋಲಾರ: ಗುಜರಾತ್‌ನಲ್ಲಿ ಸರ್ದಾರ್ ಪಟೇಲ್ ಅವರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಿರುವುದು ನಮಗೆ ಸ್ಫೂರ್ತಿದಾಯಕವಾಗಿದ್ದು, ಅದೇ ರೀತಿ ಕೋಲಾರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂರು ಅಡಿಗಳ ಮಹಾ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಪ್ರಧಾನ ಕಾರ್ಯದರ್ಶಿ ಹಾರೋಹಳ್ಳಿ ವಿ. ನಾರಾಯಣಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರ ಚಿಂತನೆ, ವಿಚಾರ ಧಾರೆಗಳ ಆಧಾರದ ಮೇಲೆ ಕೋಲಾರ ಜಿಲ್ಲೆಯ ಅನೇಕ ದಲಿತ ಮುಖಂಡರು ಸಾಮಾಜಿಕ ಹೋರಾಟಗಳನ್ನು ಆರಂಭಿಸಿ ರಾಜ್ಯದ ಉದ್ದಗಲಕ್ಕೂ ಅಂಬೇಡ್ಕರ್ ಆದರ್ಶಗಳನ್ನು ಬಿತ್ತಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಉನ್ನತ ಮಟ್ಟದ ನಾಯಕರನ್ನು ಬೆಳೆಸಿದ ಜಿಲ್ಲೆ ಎಂಬ ಕೀರ್ತಿಯು ಕೋಲಾರ ಜಿಲ್ಲೆಗಿದೆ. ಈ ಎಲ್ಲಾ ಸಾಮಾಜಿಕ ಪರಿವರ್ತನಾ ಹಾದಿಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರೇರಣೆಯೇ ಆಗಿರುವುದರಿಂದ ಜಿಲ್ಲಾ ಕೇಂದ್ರದಲ್ಲಿ ಅವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸುವುದರ ಮೂಲಕ ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಉಳಿಸುವ ಪ್ರಯತ್ನವಾಗಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.
100 ಅಥವಾ 108 ಅಡಿ: ದೇಶದ 456 ಜಿಲ್ಲೆಗಳ ಪೈಕಿ ಕೋಲಾರ ಜಿಲ್ಲೆಯಲ್ಲಿ ದಲಿತ ಜನಾಂಗವೂ ಅತ್ಯಾಧಿಕ ಸಂಖ್ಯೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ದಲಿತರಿಗೆ ದಾರಿದೀಪವಾಗಿರುವ ಅಂಬೇಡ್ಕರ್ ಅವರ 100 ಅಥವಾ 108 ಅಡಿಗಳ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲು ಜಿಲ್ಲೆಯಲ್ಲಿ ಸ್ಥಾಪಿಸಲು ದಲಿತ ಸಂಘಟನೆಗಳು ಕೈ ಜೋಡಿಸಿವೆ ಎಂದು ತಿಳಿಸಿದರು.
ಸಹಕಾರಕ್ಕೆ ಮನವಿ: ನಗರದ ಪ್ರವಾಸಿ ಮಂದಿರದಲ್ಲಿ ಜ.11ರಂದು ಸಭೆ ನಡೆಸಿ ಪ್ರತಿಮೆ ಕ್ರಿಯಾಯೋಜನೆ ಮತ್ತು ಸಮಿತಿಗಳನ್ನು ರಚನೆ ಮಾಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಮೀಸಲಾತಿಯಿಂದ ಆಯ್ಕೆಗೊಂಡಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಕೊತ್ತೂರು ಜಿ. ಮಂಜುನಾಥ್, ಶಾಸಕ ಕೆ.ಎಂ. ನಾರಾಯಣಸ್ವಾಮಿ, ರಾಮಕ್ಕ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಸೇರಿದಂತೆ ಜಿ.ಪಂ., ತಾ.ಪಂ. ಗ್ರಾ.ಪಂ. ಸದಸ್ಯರು ಮತ್ತು ಅಧಿಕಾರ ವರ್ಗ ಮುಂಚೂಣಿಯಲ್ಲಿ ನಿಂತು ಪ್ರತಿಮೆಯನ್ನು ಸ್ಥಾಪಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಸಹಕರಿಸಿದ ಜನಪ್ರತಿನಿಧಿಗಳನ್ನು ಗ್ರಾಮ ಮಟ್ಟದಲ್ಲಿ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ದಲಿತ ಸಂಘಟನೆಗಳು ಸಂಯುಕ್ತ ರಂಗದ ಅಧ್ಯಕ್ಷ ಎಂ. ಮುನಿರಾಜು, ಮುಖಂಡರಾದ ಸೂಲಿಕುಂಟೆ ರಮೇಶ್, ನಾಗನಾಳ ಮುನಿಯಪ್ಪ, ಶ್ರೀನಿವಾಸ್, ಸೂಲಿಕುಂಟೆ ಆನಂದ್, ನಾರಾಯಣಸ್ವಾಮಿ, ಶ್ರೀರಂಗ, ರವಿಕುಮಾರ್, ಶಿವಾನಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement