'ಸುದ್ದುಕುಂಟೆಗೆ ಕುಡಿವ ನೀರು ಒದಗಿಸಿ'
ಚಿಂತಾಮಣಿ: ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ಸುದ್ದುಕುಂಟೆ ನಿವಾಸಿಗಳಿಗೆ ಕಳೆದ 15 ದಿನಗಳಿಂದ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಒದಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು.
ನಗರದ ಆಶ್ರಯ ಬಡಾವಣೆಯ ಮತ್ತು ಸುದ್ದುಕುಂಟೆ ನಿವಾಸಿಗಳಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಇಲ್ಲಿನ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ನಿರ್ಲಕ್ಷ ತೋರಿದ ಪರಿಣಾಮ ಶುಕ್ರವಾರ ನಗರಸಭೆಯ ಅಧಿಕಾರಿಗಳಾದ ನೀರು ಸರಬರಾಜು ಅಭಿಯಂತರರಿಗೆ ಹಾಗೂ ಎ.ಡಬ್ಲಿಯೂ.ಡಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಕುಡಿಯುವ ನೀರು ಕಲ್ಪಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನೂರ್ ಅಹಮದ್ ಮಾತನಾಡಿ, ನಗರಸಭೆ ಚುನಾವಣೆ ನಂತರ ಸುದ್ದುಕುಂಟೆ ನಿವಾಸಿಗಳನ್ನು ಕಡೆಗಣಿಸಿ ಪ್ರತಿಷ್ಠ ಬಡಾವಣೆಗಳಿಗೆ ನೀರು ಕಲ್ಪಿಸಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆಂದು ಕಿಡಿಕಾರಿದರು.
ಇಲ್ಲಿನ ಬಡಾವಣೆಯ ನೂರಾರು ಮಹಿಳೆಯರು ದಲಿತ ಮತ್ತು ಅಲ್ಪ ಸಂಖ್ಯಾತ ಹಿಂದುಳಿದ ಬಡವರಾಗಿದ್ದು, ಜೀವನ ನಡೆಸಲು ಬೆಳಗ್ಗೆಯಿಂದ ಸಂಜೆಯವರೆಗೂ ಕೂಲಿಯಿಂದ ಕುಟುಂಬಗಳು ನಿರ್ವಹಿಸಬೇಕಾದ ಪರಿಸ್ಥಿತಿಯಲ್ಲಿ ಪ್ರತಿ ಬಿಂದಿಗೆಗೆ 5 ನೀಡಿ ನೀರು ಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ ಎಂದು ಪರಿಸ್ಥಿತಿ ಮನವರಿಕೆ ಮಾಡಿದರು.
ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭಾ ಆಯುಕ್ತರು ಗಮನ ಹರಿಸಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ನೂರ್ ಅಹಮದ್, ಸುಬ್ರಮಣಿ, ಬಾಬು, ಗುಲ್ಜಾರಿ, ಶಾಂತಮ್ಮ ಸೇರಿದಂತೆ ಇನ್ನೂ ಹಲವಾರು ನಿವಾಸಿಗಳು ಉಪಸ್ಥಿತರಿದ್ದರು.