ಅಂಬೇಡ್ಕರ್, ಬಸವ ಜಯಂತಿ ಅನುದಾನ ದುರ್ಬಳಕೆ; ಆರೋಪ
ಗುಡಿಬಂಡೆ: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಜಯಂತಿ ನೆಪದಲ್ಲಿ ಸುಮಾರು 43 ಸಾವಿರ ಹಣವನ್ನು ಇಒ ಇಂದ್ರೇಶ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರು ಆರೋಪಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಅಧ್ಯಕ್ಷೆ ಆನಂದಮ್ಮ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಒ ಇಂದ್ರೇಶ್ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಇತ್ತೀಚಿಗೆ ಸೋಮೇನಹಳ್ಳಿ ಗ್ರಾಪಂಗೆ ಬೆಂಕಿ ಬಿದ್ದ ವಿಷಯದಲ್ಲಿ ತಾವು ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಇಒ ಇಂದ್ರೇಶ್ ನಾನು ದಲಿತ ಎಂಬ ಕಾರಣಕ್ಕೆ ತಾಪಂ ಸದಸ್ಯರಿಬ್ಬರು ಜಾತಿನಿಂದನೆ ಮಾಡಿ, ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಸದ್ಯ ತಾನು ದಲಿತ ಹೇಳಿಕೊಳ್ಳುವ ಅವರೇ ಅಂಬೇಡ್ಕರ್ ಹೆಸರಿನಲ್ಲಿ 20,360 ಗಳನ್ನು ಅಂಬೇಡ್ಕರ್ ಜಯಂತಿ ನಡೆಸಿದ್ದೇವೆ ಎಂದು ಹಣ ದುರ್ಬಳಕೆ ಮಾಡಿಕೊಂಡಿರುವುದು ನೋವಿನ ಸಂಗತಿಯಾಗಿದೆ ಎಂದು ತಾಪಂ ಸದಸ್ಯ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಇಒ ಅಧಿಕಾರಾವಧಿಯಲ್ಲಿ ನಡೆದಿರುವ ಎಲ್ಲ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪ್ರಭಾರಿ ಇಒ ಸಿ. ಶ್ರೀನಿವಾಸರನ್ನು ತಾಪಂ ಸದಸ್ಯರು ಒತ್ತಾಯಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿ ಶಿವಪ್ರಕಾಶ್ ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿ, ಕಳೆದ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.90 ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸೈಕಲ್ ವಿತರಿಸಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳು ಯಾರು ಇಲ್ಲವೆಂದು ತಿಳಿಸಿದರು.
ನಂತರ ಕೃಷಿ ಅಧಿಕಾರಿ ಮಂಜುನಾಥ ಈ ಬಾರಿ ತಾಲೂಕಿನಲ್ಲಿ ಶೇ.27ರಷ್ಟು ಮಳೆ ಕೊರತೆಯಾಗಿದ್ದು, ಒಟ್ಟಾರೆ ಬೆಳೆ ಪ್ರಮಾಣ ಶೇ.75 ರಷ್ಟು ಇದೆಯೆಂದು ತಿಳಿಸಿದರು. ಉಳಿದಂತೆ ಇಲಾಖಾ ಸೌಲಭ್ಯಗಳನ್ನು ಎಲ್ಲಾ ಅರ್ಹ ರೈತರಿಗೆ ವಿತರಿಸಲಾಗಿದೆಯೆಂದರು.
ಸಹಕಾರ ನೀಡಿ: ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿರುವ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಸುಮಾರು 2 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲು ಸಭೆಯಲ್ಲಿ ಅನುಮೋದಿಸಲಾಯಿತು. ನಂತರ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಹಿಮಾ ವಿವರಣೆ ನೀಡಿ, ಈ ತಿಂಗಳ 19ರಿಂದ ಇಲಾಖೆ ಹಮ್ಮಿಕೊಂಡಿರುವ ಪೋಲಿಯೊ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕೆಂದು ಕೋರಿದರು.
ಸಿಡಿಪಿಒ ಇಲಾಖೆಯಿಂದ ಅಂಗನವಾಡಿಗಳಿಗೆ ಸರಬರಾಜು ಮಾಡಲಾಗುತ್ತಿರುವ ಪೌಷ್ಟಿಕ ಆಹಾರ ಕಳಪೆಯಾಗಿರುವ ಕಾರಣ ತಾಪಂ ಸದಸ್ಯ ಮುನಿರೆಡ್ಡಿ ಸಿಡಿಪಿಒ ಅಧಿಕಾರಿ ಸಿದ್ದಲಿಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಸರಬರಾಜಾಗಿರುವ ಕಳಪೆ ಪೌಷ್ಟಿಕ ಆಹಾರವನ್ನು ಏಜೆನ್ಸಿಗೆ ವಾಪಸ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಪ್ರಭಾರಿ ಇಒ ಶ್ರೀನಿವಾಸ ಮಾತನಾಡಿ, ಈಗಾಗಲೇ ಇಲಾಖೆಯಿಂದ ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆದ ತಾಲೂಕಿನ ಸ್ವ ಸಹಾಯ ಗುಂಪುಗಳು ಕ್ರಮಬದ್ದವಾಗಿ ಮರುಪಾವತಿ ಮಾಡಿದ್ದರೆ ಅಂತಹ ಸಂಘಗಳಿಗೆ ಸಂಜೀವಿನಿ ಯೋಜನೆಯಡಿ ಶೇ.4ರಷ್ಟು ಹಣವನ್ನು ವಾಪಸ್ ನೀಡಲಾಗುವುದು ಎಂದರು. ಶೌಚಾಲಯ ಇಲ್ಲದಂತಹವರು ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾತಿ ಹಾಗೂ ಪ.ಪಂಗಡದವರಿಗೆ 15 ಸಾವಿರ ಇತರೆ ಜನಾಂಗಕ್ಕೆ 11 ಸಾವಿರದೊಳಗೆ ಸಹಾಯುದನ ನೀಡಲಾಗುವುದು ಎಂದು ತಿಳಿಸಿದರು. 2005 ರಿಂದ 2014ರ ವರೆಗೆ ವಿವಿಧ ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸಿಒಡಿ ತನಿಖೆಯಾಗಬೇಕೆಂದು ಹಾಗೂ ಸಭೆ ನಡಾವಳಿಗಳಲ್ಲಿ ಈ ವಿಷಯ ನಮೂದಾಗಬೇಕೆಂದು ಪಟ್ಟುಹಿಡಿದ ಪ್ರಸಂಗ ನಡೆಯಿತು. ನಂತರ ಸಭೆಯ ನಡಾವಳಿಯ ನಮೂದಿಸಲು ಸಮ್ಮತಿಸಲಾಯಿತು.
ತನಿಖೆಗೆ ಮನವಿ: ತಾಲೂಕಿನ ಸೋಮೇನಹಳ್ಳಿ ಗ್ರಾಪಂ ನಲ್ಲಿ ಸುಮಾರು 78 ಲಕ್ಷಗಳಷ್ಟು ಅನುದಾನ ದುರುಪಯೋಗವಾಗಿದೆ ಹಾಗೂ ಎಲ್ಲಾ ಪಂಚಾಯತಿಗಳಲ್ಲೂ ಸಹ 13ನೇ ಹಣಕಾಸು ಅನುದಾನದ ಬಗ್ಗೆ ಸಮಗ್ರ ತನಿಖೆಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ತಾಪಂ ಅಧ್ಯಕ್ಷೆ ಆನಂದಮ್ಮ ತಿಳಿಸಿದರು.
ಈ ವೇಳೆ ತಾಪಂ ಉಪಾಧ್ಯಕ್ಷ ಆದಿನಾರಾಯಣರೆಡ್ಡಿ, ಸದಸ್ಯರಾದ ನಾರಾಯಣಸ್ವಾಮಿ, ಮುನಿರೆಡ್ಡಿ, ದೇವಕುಮಾರ್, ಗಂಗಾಧರ್, ಕೆ. ಮಂಜುಳ, ಲಕ್ಷ್ಮೀನರಸಮ್ಮ, ಅಮಲ, ನಾಗರತ್ನಮ್ಮ, ಮಂಜುಳ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.