ಇಂದು ಕವಿ ನಮನ ಕಾರ್ಯಕ್ರಮ
ಕೋಲಾರ: ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಮನ್ವಂತರ ಪ್ರಕಾಶನದಿಂದ ಖ್ಯಾತ ಕವಿ, ಚಿಂತಕ ಸ. ರಘುನಾಥ ಅವರಿಗೆ ಕವಿ ನಮನ ಹಾಗೂ ವಿಶಿಷ್ಠ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 22 ಮಂದಿ ಆಯ್ದ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಮನಗರ ಜಿಲ್ಲಾಧಿಕಾರಿ ಡಿ.ಎಸ್. ವಿಶ್ವನಾಥ್ ಅಧ್ಯಕ್ಷತೆ ವಹಿಸುವರು. ಹಂಪಿ ವಿವಿಯ ಡಾ. ಕೆ.ಸಿ. ಶಿವಾರೆಡ್ಡಿ, ಗಡಿನಾಡ ಕನ್ನಡಿಗ ನಂದ್ಯಾಲ ನಾರಾಯಣರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಕು.ಎಂ.ಬಿ. ಶ್ವೇತ ಅವರಿಂದ ಭಾವಗೀತೆ ಮತ್ತು ಜನಪದ ಗೀತೆ ಗಾಯನ ಏರ್ಪಡಿಸಲಾಗಿದೆ.
ನಕಲಿ ದಾಖಲೆ ವಿರುದ್ಧ ಕ್ರಮ: ಡಿಸಿ
ಕೋಲಾರ: ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗೆ ನಕಲಿ ದಾಖಲೆ ನೀಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಜಿಲ್ಲಾಧಿಕಾರಿ ಡಿ.ಕೆ. ರವಿ ನಿರ್ಧರಿಸಿದ್ದಾರೆ. ಇತ್ತೀಚೆಗೆ ಅಂಗನವಾಡಿ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದ್ದು ಹಲವರು ನಕಲಿ ದಾಖಲೆ ನೀಡಿ ಹುದ್ದೆ ಗಿಟ್ಟಿಸಿಕೊಂಡಿರುವ ಬಗ್ಗೆ ದೂರು ಬಂದಿರುವ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ದ ತನಿಖೆ ಕೈಗೊಂಡು ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಅಂಗನವಾಡಿ ಸಿಬ್ಬಂದಿ ನೇಮಕಾತಿಗಾಗಿ ಆನ್ಲೈನ್ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ, ಇದರಿಂದ ಪಾರದರ್ಶಕತೆ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದಾಖಲೆ ಪರಿಶೀಲಿಸಿ ಕ್ರಮ: ಸಚಿವ ಖಾದರ್
ಕೋಲಾರ: ಮುಳಬಾಗಿಲು ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ವಿರುದ್ಧ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ದಿಢೀರ್ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು, ಡಾ. ಪ್ರಕಾಶ್ ಅವರು ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿರುದ್ಧ ಇತ್ತೀಚೆಗೆ ಮುಳಬಾಗಿಲಿನಲ್ಲಿ ಪ್ರತಿಭಟನೆ ನಡೆಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಇಲಾಖೆಯಲ್ಲಿ ಯಾವುದೇ ಆಶಿಸ್ತು ಮತ್ತು ಅಧಿಕಾರ ದುರುಪಯೋಗಕ್ಕೆ ಅವಕಾಶವಿಲ್ಲ, ವೈದ್ಯರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಿಂಕೆಗಳ ಜೀವಕ್ಕಿಲ್ಲ ರಕ್ಷಣೆ: ಗಣೇಶಗೌಡ
ಕೋಲಾರ: ಜಿಂಕೆಗಳು ನೀರಿಗಾಗಿ ಅಲೆದಾಡುತ್ತಾ ಅಪಘಾತಕ್ಕೀಡಾಗಿ ಹಾಗೂ ಬಾವಿಯಲ್ಲಿ ಬಿದ್ದು ಧಾರುಣವಾಗಿ ಸಾಯುತ್ತಿದ್ದರೂ ಸಹ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆಂದು ಹಸಿರುಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಆರೋಪಿಸಿದ್ದಾರೆ. ತಾಲೂಕಿನ ಮಡೇರಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವ ಚುಂಚದೇನಹಳ್ಳಿಯಲ್ಲಿ ನೀರಿಗಾಗಿ ಬಂದ ಜಿಂಕೆ ಬಾವಿಗೆ ಬಿದ್ದು ಧಾರುಣವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಪ ಮಾಡಿರುವ ಅವರು ಜಿಂಕೆಗಳು ನೀರು ಕುಡಿಯಲು ಒಂದು ಎಕರೆ ಪ್ರದೇಶದಲ್ಲಿ ನೀರಿನ ತಾಣಗಳನ್ನು ನಿರ್ಮಿಸಬೇಕು. ಜೊತೆಗೆ ಅರಣ್ಯ ಪ್ರದೇಶದಲ್ಲಿ ಒಂದು ಸ್ಥಳವನ್ನು ನಿಗದಿಮಾಡಿ ಜಿಂಕೆ ಉದ್ಯಾನವನ ಸ್ಥಾಪಿಸಬೇಕು. ಇದರಿಂದಾಗಿ ಜಿಂಕೆಗಳ ಸಂತತಿ ಉಳಿಯುವುದು ಇಲ್ಲದೇ ಹೋದರೆ ಅಳಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ
ಸಾರಿಗೆ ಕೊರತೆ ನೀಗಿಸಲು ಸೈಕಲ್ ವಿತರಣೆ: ರಾಜಣ್ಣ
ಶಿಡ್ಲಘಟ್ಟ: ಸರ್ಕಾರದ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ಉನ್ನತ ಶಿಕ್ಷಣಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಎಂ. ರಾಜಣ್ಣ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿನ ಹೆಣ್ಣುಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳು ಸಾರಿಗೆಯ ಕೊರತೆಯಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸಿ ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಗ್ರಾಪಂ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿ ಗ್ರಾಮಸ್ಥರ ಮುಂದೆ ವೇದಿಕೆಯಲ್ಲಿದ್ದ ಕಾರ್ಯದರ್ಶಿ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಕೊರೆಯಿಸಿರುವ ಕೊಳವೆಬಾವಿಯಲ್ಲಿ ನೀರಿದೆ. ಆದರೆ ಇದುವರೆಗೂ ಮೋಟಾರು ಅಳವಡಿಸಿಲ್ಲ, ಗ್ರಾ.ಪಂ. ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಂತರ ಮೋಟಾರು ನೀಡುವುದಾಗಿ ಹೇಳಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಭೆಯನ್ನೇ ನಡೆಸಿಲ್ಲ ಎಂದಾಗ ಶಾಸಕರು ಸಿಡಿಮಿಡಿಗೊಂಡರು.
ಆರ್ಥಿಕ ಸಬಲೀಕರಣಕ್ಕೆ ತರಬೇತಿ ಅಗತ್ಯ: ವೆಂಕಟಪ್ಪ
ಗುಡಿಬಂಡೆ: ಮಹಿಳೆಯರು ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಕೌಶಲ್ಯಾಧಾರಿತ ತರಬೇತಿಗಳು ಅತ್ಯಗತ್ಯವೆಂದು ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ವೆಂಕಟಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ನ್ಯೂ ಪಬ್ಲಿಕ್ ಕಂಪ್ಯೂಟರ್ ಕೇಂದ್ರದಲ್ಲಿ ಕೋಲಾರದ ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರಪಿತ ಯುವಜನ ಸೇವಾ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ ಶಿಬಿರ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ.ಜಾತಿ ವಿಭಾಗದ ತಾಲೂಕು ಅಧ್ಯಕ್ಷ ಸುಬ್ಬರಾಯಪ್ಪ ಕಷ್ಟಪಟ್ಟರೇ ಕಂಡಿತ ಫಲ ದೊರೆಯುತ್ತದೆ ಎಂದರು. ಪ.ಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಮಾತನಾಡಿದರು.. ರಾಜಶೇಖರ್, ಜಿ.ವಿ. ವಿಶ್ವನಾಥ್, ವೆಂಕಟೇಶ್ ಮೂರ್ತಿ, ಮಂಜುನಾಥ್ ನಾಗರಾಜ್ ಸೇರಿದಂತೆ ಉಪಸ್ಥಿತರಿದ್ದರು.
ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ
ಶಿಡ್ಲಘಟ್ಟ: ಸಮರ್ಪಕವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಪಟ್ಟಣದಿಂದ ಬೆಂಗಳೂರು ಮಾರ್ಗದ ವಿಜಯಪುರ, ದೇವನಹಳ್ಳಿ, ಯಲಹಂಕ ಮುಂತಾದ ಕಡೆಗಳಿಗೆ ಸಂಚಾರ ಮಾಡಲು ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಸಂಚಾರಿ ನಿಯಂತ್ರಕರ ಕಚೇರಿಯ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಳೆದ ಕೆಲ ದಿನಗಳಿಂದ ಧರಣಿ ನಡೆಸುತ್ತಿರುವ ಖಾಸಗಿ ಬಸ್ಸುಗಳ ಮಾಲೀಕರು ಹೇಗಾದರೂ ಮಾಡಿ ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಲು ವಿದ್ಯಾರ್ಥಿಗಳನ್ನು ಬಳಕೆಮಾಡಿಕೊಂಡು ಈ ರೀತಿಯ ನಾಟಕವಾಡುತ್ತಿದ್ದಾರೆ ಎಂದು ನಾಗರಿಕರು ಆರೋಪ ಮಾಡಿದ್ದಾರೆ.
ಶ್ರೀರಾಮ್ ಮೂಡಿಯನೂರು ಗ್ರಾಪಂ ಹಂಗಾಮಿ ಅಧ್ಯಕ್ಷ
ಮುಳಬಾಗಲು: ತಾಲೂಕಿನ ಮೂಡಿಯನೂರು ಗ್ರಾಪಂ ಹಂಗಾಮಿ ಅಧ್ಯಕ್ಷರಾಗಿ ರಚ್ಚಬಂಡಹಳ್ಳಿ ಶ್ರೀರಾಮ್ ಶನಿವಾರ ಅಧಿಕಾರ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷೆ ನಾರೆಮ್ಮ ಅವರ ರಾಜಿನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ಖಾಲಿಯಾಗಿದ್ದು, ಹಾಲಿ ಉಪಾಧ್ಯಕ್ಷರಾಗಿರುವ ಶ್ರೀರಾಮ್ ಅಧಿಕಾರ ವಹಿಸಿಕೊಳ್ಳುವಂತೆ ಉಪ ವಿಭಾಗಾಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ವಹಿಸಿಕೊಂಡಿದ್ದಾರೆ. ನಂತರ ಮಾತನಾಡಿದ ಅವರು, ಈ ಹಿಂದೆ ಗ್ರಾ.ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿರುವ ಕಾರಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಮಾಜಿ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್, ಸದಸ್ಯ ಶಂಕರಾಚಾರಿ ಮುಂತಾದವರು ಭಾಗವಹಿಸಿದ್ದರು.
ಕೆನರಾ ಬ್ಯಾಂಕ್ ಎಟಿಎಂಗೆ ಚಾಲನೆ
ಮುಳಬಾಗಲು: ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಎಟಿಎಂ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕೆಪಿಸಿಸಿ ಸದಸ್ಯ ಉತ್ತನೂರು ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಉತ್ತನೂರು ಗ್ರಾಮದಲ್ಲಿ ಶನಿವಾರ ಕೆನರಾ ಬ್ಯಾಂಕ್ ವತಿಯಿಂದ ನಿರ್ಮಿಸಲಾದ ಎಟಿಎಂ ಕೇಂದ್ರವನ್ನು ಹಣ ಡ್ರಾ ಮಾಡುವುದರ ಮೂಲಕ ಉದ್ಪಾಟಿಸಿ ಮಾತನಾಡಿದರು. ಉತ್ತನೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಧರಿಗೆ ಅನುಕೂಲವಾಗುವುದು, ದಿವಸದ 24 ಗಂಟೆಯೂ ಹಣ ಪಡೆಯಬಹುದು ಎಂದರು. ಬ್ಯಾಂಕ್ ವ್ಯವಸ್ಧಾಪಕ ಜ್ಞಾನೇಶ್ವರ್ ಮಾತನಾಡಿ, ಉತ್ತನೂರು ಕೆನರಾ ಬ್ಯಾಂಕ್ ಶಾಖೆ 20 ಕೋಟಿಗಳಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದ್ದು, 11 ಸಾವಿರದ 500ಕ್ಕೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ ಎಂದರು. ಪ್ರತಿ ದಿವಸ 10 ಲಕ್ಷಗಳ ವ್ಯವಹಾರ ನಡೆಯುತ್ತಿದ್ದು, ರೈತರಿಗೆ ಕಿಸಾನ್ ಕಾರ್ಡ್ ಸೌಲಭ್ಯ ನೀಡಲಾಗಿದೆ ಎಂದರು. ರೈತರು ಒಂದೂವರೆ ಲಕ್ಷಗಳವರೆವಿಗೂ ಬೆಳೆ ಸಾಲ ಪಡೆಯಬಹುದು ಹಾಗೂ ಮೂರು ಲಕ್ಷವರೆಗೆ ಚಿನ್ನದ ಮೇಲೆ ಸಾಲ ಪಡೆಯಬಹುದಾಗಿದೆ ಎಂದರು.
ಪ್ರಯಾಣಕ್ಕೆ ಹೆಚ್ಚುವರಿ ಶುಲ್ಕ: ಪ್ರತಿಭಟನೆ
ಮಾಲೂರು: ಪಟ್ಟಣದಿಂದ ಬೆಂಗಳೂರಿಗೆ ಸಾಗುವ ಪ್ರಯಾಣಿಕರಿಂದ ಸರ್ಕಾರಿ ಬಸ್ಗಳು ಟೋಲ್ ಶುಲ್ಕಗಾಗಿ ಹೆಚ್ಚುವರಿಯಾಗಿ 2 ಪಡೆಯುತ್ತಿರುವುದನ್ನು ಖಂಡಿಸಿ ಇಲ್ಲಿನ ಜಯ ಕರ್ನಾಟಕ ಸಂಘದವರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಜಯ ಕರ್ನಾಟಕ ಅಧ್ಯಕ್ಷ ದಿನೇಶ್ಗೌಡ ಮಾತನಾಡಿ, ಮಾಲೂರಿನಿಂದ ಟೋಲ್ ಇರುವ ಹೊಸಕೋಟೆವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲಿಂದ ಮುಂದಿನ 6 ಕಿ.ಮೀ ಕ್ರಮಿಸಲು ಮಾತ್ರ ಟೋಲ್ ಶುಲ್ಕ ಪಾವತಿಸಬೇಕಾಗಿದೆ ಎಂದರು. ಪ್ರಯಾಣಿಕರಿಂದ ಹೆಚ್ಚುವರಿಯಾಗಿ 2 ಪಡೆಯುತ್ತಿದ್ದು, ಇದು ಕೆಎಸ್ಆರ್ಟಿಸಿ ಹಗಲು ದರೋಡೆಯಾಗಿದೆ ಎಂದು ಆಪಾದಿಸಿದ ಅವರು, ತಕ್ಷಣದಿಂದಲೇ ಈ ಕ್ರಮವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಡಿಪೋ ವ್ಯವಸ್ಥಾಪಕ ಶ್ರೀನಿವಾಸ್ ಮೇಲಧಿಕಾರಿಗಳ ಆದೇಶದಂತೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಮಾಲೂರು ಜನತೆಯ ಅಭಿಪ್ರಾಯವನ್ನು ಮೇಲಿನಾಧಿಕಾರಿಗಳೂಡನೆ ಮಾತನಾಡಿ ಸಮಸ್ಯೆ ಬಗ್ಗೆ ಪರಿಸುವುದಾಗಿ ತಿಳಿಸಿದ ಮೇಲೆ ಸೋಮವಾರದ ವರೆಗೆ ಗಡುವು ನೀಡಿ ಜಯ ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟರು.
ಅಂಡರ್ಪಾಸ್ ವಿಸ್ತರಣೆಗೆ ಆಗ್ರಹಿಸಿ ಹರತಾಳ
ಬಂಗಾರಪೇಟೆ: ಪಟ್ಟಣದಿಂದ ಕೋಲಾರಕ್ಕೆ ಹೋಗುವ ರೈಲು ಮಾರ್ಗದಲ್ಲಿ ಬರುವ ಹತ್ತಕ್ಕೂ ಹೆಚ್ಚು ರೇಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ಗಳನ್ನು ಬಂದ್ ಮಾಡಿ ಅಂಡರ್ಪಾಸ್ ನಿರ್ಮಾಣ ಕಾಮಗಾರಿಯಿಂದ ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು ಕೂಡಲೆ ಅಂಡರ್ಪಾಸ್ ರಸ್ತೆಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ನೂರಾರು ರೈತರು ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟಿಸಿದರು. ಪಟ್ಟಣದಿಂದ ಕೋಲಾರಕ್ಕೆ ಹೋಗುವ ರೈಲು ಮಾರ್ಗದಲ್ಲಿ ಸುಮಾರು 10 ಗೇಟ್ಗಳಿದ್ದು, ರೈಲ್ವೆ ಇಲಾಖೆ ಈಗ ಯಾವುದೇ ರೈಲು ಅಪಘಾತಗಳು ನಡೆಯದಂತೆ ತಡೆಯಲು ಲೆವೆಲ್ಕ್ರಾಸಿಂಗ್ ಗೇಟ್ಗಳನ್ನು ಬಂದ್ ಮಾಡಿ ಅಂಡರ್ ಪಾಸ್ ರಸ್ತೆಗಳನ್ನು ನಿರ್ಮಾಣಕ್ಕೆ ಮುಂದಾಗಿದೆ. ಈ ಅಂಡರ್ ಪಾಸ್ ರಸ್ತೆಗಳು ತುಂಬಾ ಕಿರಿದಾಗಿದ್ದು, ಇವುಗಳ ಮೂಲಕ ದ್ವಿಚಕ್ರ ವಾನಗಳನ್ನು ಬಿಟ್ಟರೆ ಬಸ್, ಲಾರಿ, ಟೆಂಪೋ, ಕಾರ್ ಮತ್ತಿತರ ಯಾವುದೇ ವಾಹನಗಳು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರ ಮನವೊಲಿಕೆ ಯತ್ನ ವಿಫಲವಾಯಿತು. ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಹ ಈ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು.
ಪಾಶ್ಚಾತ್ಯ ಸಂಸ್ಕೃತಿಯಿಂದ ಹೊಡೆತ: ಶಿವಪ್ರಸಾದ್
ಮಾಲೂರು: ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಸಂಸ್ಕೃತಿಗೆ ಹೊಡೆತ ಬೀಳುತ್ತಿದ್ದು, ಸಂಸ್ಕೃತಿ ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಟಿವಿ ಮಾಧ್ಯಮಗಳಲ್ಲಿ ಬರುವ ಧಾರಾವಾಹಿಗಳು ಕುಟುಂಬವನ್ನು ಬೆರೆಸುವ ಬದಲು ಒಡೆಯುವ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲೇ ಅತಿ ಹೆಚ್ಚು ಗೌರವ ಪಡೆಯುವ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶವನ್ನು, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನಗಳು ನಡೆಯಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಸ್. ಮಂಜುನಾಥ್ ಮಾತನಾಡಿ, ಕಾಲೇಜಿನ ಲ್ಯಾಬನ್ನು ದುರಸ್ತಿ ಪಡೆಸುವುದಲ್ಲದೇ ಕುಡಿಯುವ ನೀರಿನ ವ್ಯವಸ್ಥೆ, ಪಠ್ಯ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಹೇಳಿದರು. ಜೀವಶಾಸ್ತ್ರ ಉಪಾನ್ಯಾಸಕ ಎಂ.ವಿ.ನಾಗರಾಜಯ್ಯ ಅವರನ್ನು ವಿದ್ಯಾರ್ಥಿಗಳು- ಬೋಧಕ ವರ್ಗ ಸನ್ಮಾನಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ; ಶಿವಶಂಕರರೆಡ್ಡಿ
ಚಿಕ್ಕಬಳ್ಳಾಪುರ: ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಲು ಪೂರಕ ವಾತಾವರಣ ನಿರ್ಮಾಣ ಅಗತ್ಯ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸ್ವಸಹಾಯ ಸಂಘದ ಸದಸ್ಯರಿಂದ ತಯಾರಿಸಲ್ಪಟ್ಟಿರುವ ಉತ್ಪನ್ನಗಳ ಮಾರಾಟ ಮೇಳದಲ್ಲಿ ಅವರು ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ಹೆಚ್ಚು ಒತ್ತು ಕೊಡುತ್ತಿವೆ. ಶೋಷಣೆ, ದೌರ್ಜನ್ಯದಿಂದ ಮುಕ್ತರಾಗಿ ಮಹಿಳೆಯರು ಸ್ವಾವಲಂಬಿಗಳಾಗಲು ಅಗತ್ಯವಿರುವ ನೆರವನ್ನು ಒದಗಿಸುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಕೆ. ಸುಧಾಕರ್, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು. ಆದರೂ ಸಹ ಇಂದಿಗೂ ಮಹಿಳೆಯರು ನಾನಾ ರೀತಿಯಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು.
ಪಿಯು ಪರೀಕ್ಷಾ ಶುಲ್ಕ ಏರಿಕೆ: ವಿದ್ಯಾರ್ಥಿಗಳ ಧರಣಿ
ಬಂಗಾರಪೇಟೆ: ಪದವಿ ಪೂರ್ವ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ದಿಢೀರನೆ ಏರಿಕೆ ಮಾಡಿರುವ ಸರ್ಕಾರದ ಆದೇಶವನ್ನು ಖಂಡಿಸಿ ಈ ಕೂಡಲೇ ಏರಿಕೆ ಮಾಡಿರುವ ಶುಲ್ಕವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.
ಬಡ ವಿದ್ಯಾರ್ಥಿಗಳಿಗೆ ಕಷ್ಟ: ಪದವಿ ಪೂರ್ವ ಪರೀಕ್ಷೆ ಶುಲ್ಕವನ್ನು ಏಕಾಏಕಿಯಾಗಿ ಏರಿಕೆ ಮಾಡುವ ಮೂಲಕ ಸರ್ಕಾರ ಬಡ ಮಕ್ಕಳು ಉತ್ತನ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡಿದೆ. ಪಟ್ಟಣದಲ್ಲಿರುವ ಕೆ.ಸಿ.ರೆಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುವವರೇ ಅಧಿಕವಾಗಿದ್ದು, ಉತ್ತಮ ಶಿಕ್ಷಣವೆಂಬುದು ಇಂದು ವ್ಯಾಪಾರೀಕರಣವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಒಂದು ಕಡೆ ಸರ್ಕಾರ ಎಲ್ಲರೂ ವಿದ್ಯಾವಂತರಾಗಬೇಕು ಎಂದು ಹೇಳುವರು ಮತ್ತೊಂದು ಕಡೆ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ದೂರ ಉಳಿಯುವಂತೆ ಮಾಡುತ್ತಿದೆ ಎಂದರು.
ಗ್ರಾಪಂ ಸದಸ್ಯನಿಂದ ಅತ್ಯಾಚಾರ ಯತ್ನ
ಚಿಂತಾಮಣಿ: ತಾಲೂಕಿನ ಕತ್ತಿರಿಗುಪ್ಪೆ ಗ್ರಾಪಂ ಸದಸ್ಯರೊಬ್ಬರು ಗೃಹಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಜನರು ಛೀಮಾರಿ ಹಾಕಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕ್ವಾಡಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕ್ವಾಡಿಗಾನಹಳ್ಳಿ ಗ್ರಾಮದ ಗೃಹಿಣಿಯು ಇಬ್ಬರ ಮಕ್ಕಳ ತಾಯಿ. ಜ.10ರಂದು ಶುಕ್ರವಾರ ಸಂಜೆ ತೋಟದಲ್ಲಿ ಕೆಲಸ ಮುಗಿಸಿಕೊಂಡು ಒಬ್ಬಂಟಿಯಾಗಿ ಬರುತ್ತಿರುವಾಗ ಗ್ರಾಪಂ ಸದಸ್ಯ ಶ್ರೀನಿವಾಸಪ್ಪ ಪೊದೆಯೊಂದರಲ್ಲಿ ಹೊಂಚುಹಾಕಿ ಕುಳಿತುಕೊಂಡು ಏಕಾಏಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಲ್ಲಿಂದ ಮಹಿಳೆ ಓಡಿ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ವಿವೇಕಾನಂದರನ್ನು ಜನ ಇಂದಿಗೂ ಆರಾಧಿಸುತ್ತಾರೆ'
ಚಿಂತಾಮಣಿ: ದೇಶದಲ್ಲಿನ ಅಸ್ಪೃಶ್ಯತೆ ಹಾಗೂ ಬಡತನವನ್ನು ಹೋಗಲಾಡಿಸಿ ಯುವಕರಲ್ಲಿ ಜಾಗೃತಿ ಮೂಡಿಸಿ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದಸ್ವಾಮಿ ವಿವೇಕಾನಂದರನ್ನು ಇಂದಿಗೂ ಜನ ಆರಾಧಿಸುತ್ತಿದ್ದಾರೆಂದು ಮುಖ್ಯ ಶಿಕ್ಷಕ ಓಬಯ್ಯ ಹೇಳಿದರು. ನಗರದ ಗುರುಭವನ ಮುಂಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸ್ವರ ಕ್ಷೇಮ ಸಂಗೀತ ತಂಡದ ಮುಖ್ಯಸ್ಥ ಲಕ್ಷ್ಮಣ್ ಹಾಗೂ ಅವರ ತಂಡ ದೇಶಭಕ್ತಿ ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಹೆಚ್. ಮಂಜುನಾಥ್, ಸಾಹಿತಿ ಕಾಗತಿ ವಿ. ವೆಂಕಟರತ್ನಂ, ಸಹ ಶಿಕ್ಷಕರಾದ ಸುಬ್ಬಾರೆಡ್ಡಿ ಹಾಜರಿದ್ದರು.