ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಕ್ಕಬಳ್ಳಾಪುರ ವಿವಿಧೆಡೆ ವೈಕುಂಠ ಏಕಾದಶಿ

Vishwanath S
Updated On : 12 Jan 2014, 1:29 am

ಚಿಕ್ಕಬಳ್ಳಾಪುರ: ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ನಗರದ ಕಂದವಾರ ಪೇಟೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಏಳು ದ್ವಾರಗಳ ನಿರ್ಮಾಣ ವ್ಯವಸ್ಥೆಯು ಎಲ್ಲರ ಗಮನ ಸೆಳೆಯಿತು. ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರವನ್ನು ಕೈಗೊಳ್ಳಲಾಗಿತ್ತು.
ಇನ್ನೂ ಐತಿಹಾಸಿಕ ಶ್ರೀ ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ದೇವಾಲಯ ಶನಿವಾರ ಭಕ್ತರಿಂದ ತುಂಬಿ ತುಳುಕಾಡಿತು. ವೈಕುಂಠ ಏಕಾದಶಿಯ ದಿನದಂದು ಶ್ರೀ ವಿಷ್ಣುವಿನ ದರ್ಶನವನ್ನು ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ನಿರತರಾದರು. ದೇವಾಲಯದ ಆವರಣದಲ್ಲಿ ಭಜನಾ ಮಂಡಳಿಯಿಂದ ದೇವರ ಆರಾಧನೆಯ ಗಾಯನ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳಿಗಾಗಿ ಪ್ರಸಾದ ವಿನಿಯೋಗಿಸಲಾಯಿತು.
ವೈಕುಂಠ ಏಕಾದಶಿ: ಸ್ವಾಮಿಗೆ ವಿಶೇಷ ಅಲಂಕಾರ
ಬಂಗಾರಪೇಟೆ: ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಎಲ್ಲಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತಾದಿಗಳು ಸಾಲಾಗಿ ಬಂದು ದೇವರ ದರ್ಶನ ಪಡೆದರು. ತಾಲೂಕಿನ ಯಲಬುರ್ಗಿ ಗ್ರಾಮದಲ್ಲಿ ಇತ್ತೀಚಿಗಷ್ಟೇ ಲೋಕಾರ್ಪಣೆಗೊಂಡಿರುವ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠದಲ್ಲಿ ವೆಂಕಟರಮಣಸ್ವಾಮಿ ಮಲಗಿರುವಂತೆ ಮಾಡಿದ್ದ ಹೂವಿನ ಅಲಂಕಾರ ಭಕ್ತರ ಮನ ಸೆಳೆಯಿತು.
ಅದೇ ರೀತಿಯಲ್ಲಿ ಶಾಂತಿನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿಯೂ ಅತ್ಯಂತ ವೈಭವದಿಂದ ದೇವರಿಗೆ ಬಣ್ಣ ಬಣ್ಣದ ಹೂವಿಗಳಿಂದ ಅಲಂಕರಿಸಿದ್ದರು. ಕೋದಂಡರಾಮಸ್ವಾಮಿ ದೇವಾಲಯದಲ್ಲಿಯೂ ಮುಜರಾಯಿ ಇಲಾಖೆಯಿಂದ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಸೊಗಸಾಗಿತ್ತು. ತಹಸೀಲ್ದಾರ್ ಉಷಾ, ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮುಂಜಾನೆಯೇ ತೆರಳಿ ಪೂಜೆ ಸಲ್ಲಿಸಿದರು. ಮುಜರಾಯಿ ಇಲಾಖೆ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಮುಜರಾಯಿ ದೇವಾಲಯಗಳಿಗೆ ಉಚಿತ ಲಾಡು ಹಂಚಿದ್ದು ಈ ಬಾರಿ ವಿಶೇಷವಾಗಿತ್ತು.
ಜೀವನದಲ್ಲಿ ಜಿಗುಪ್ಸೆ; ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  2ನೇ ಬ್ಲಾಕ್ ನಿವಾಸಿ ಮುರುಗೇಶನ್ (32) ಎಂಬುವರಿಗೆ ಆಗಾಗ ಹೊಟ್ಟೆ ನೋವು ಕಾಣಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡಿದರೂ ಫಲಕಾರಿಯಾಗದ ಕಾರಣ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಂಡ್ರಸನ್‌ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ನೇಹಿತನೊಂದಿಗೆ ಮಲಗೆಂದ ಪತಿ!
ಮುಳಬಾಗಲು: ತನ್ನ ಹೆಂಡತಿಯನ್ನೇ ಗಂಡ ಆತನ ಸ್ನೇಹಿತನೊಡನೆ ಅನೈತಿಕ ಸಂಬಂಧಕ್ಕೆ ಒತ್ತಾಯಿಸಿ ವಿಫಲವಾದ ಪ್ರಕರಣ ತಾಯಲೂರು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.  ಬಂಗಾರುಪೇಟೆ ತಾಲೂಕಿನ ಸುವರ್ಣಹಳ್ಳಿ ಗ್ರಾಮದ ಆಂಜಪ್ಪ ತನ್ನ ಪತ್ನಿಯನ್ನು ಸ್ನೇಹಿತ ನಾರಾಯಣಸ್ವಾಮಿ ಕಾರಿನಲ್ಲಿ ಆಜ್ಞಾನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ನಂತರ ಆಕೆಯ ಮೇಲೆ ಅತ್ಯಾಚಾರಕ್ಕೆ ನಾರಾಯಣಸ್ವಾಮಿ ಯತ್ನಿಸಿದ್ದಾನೆ. ಇದಕ್ಕೆ ಪತಿ ಆಂಜಪ್ಪ ಬೆಂಬಲಿಸಿ ಆಕೆಯ ಮೇಲೆ ಹಲ್ಲೆಗೂ ಸಹ ಮುಂದಾಗಿದ್ದಾನೆ.  ಅವರಿಂದ ತಪ್ಪಿಸಿಕೊಂಡು ಹೋದ ಆಕೆ ಕೂಗಿಕೊಂಡಾಗ ಸುತ್ತಮುತ್ತಲವರು ಮಧ್ಯೆ ಪ್ರವೇಶಿಸಿ ಆಕೆಗೆ ರಕ್ಷಣೆ ನೀಡಿ ಮುಳಬಾಗಲು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯನಿರತರಾದ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆಂಜಪ್ಪ ನಾಪತ್ತೆಯಾಗಿದ್ದು, ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ನವಜಾತ ಶಿಶು ಪತ್ತೆ
ಕೆಜಿಎಫ್: ಆಗತಾನೆ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಯಾರೋ ಮಹಾತಾಯಿ ಒಂದು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಇಟ್ಟು ಹೋಗಿರುವ ಘಟನೆ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಟಿ. ಬ್ಲಾಕ್ ಬಡಾವಣೆಯಲ್ಲಿ ಪತ್ತೆಯಾಗಿದೆ.
ಸ್ಥಳಿಯರು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement