ಮಾಲೂರಿನ ವಿವಿಧೆಡೆ...
ಮಾಲೂರು: ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಹಲವು ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಪಟ್ಟಣದ ಕೋಂದಡರಾಮ ದೇವಾಲಯದಲ್ಲಿ ಸಪ್ತದ್ವಾರ ಮೂಲಕ ಸ್ವಾಮಿಯ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವದಿಂದಲೇ ಭಕ್ತರ ದಂಡು ದೇವಾಲಯದತ್ತ ಧಾವಿಸಿತ್ತು. ಭಕ್ತರು ಸಾಲಿನಲ್ಲಿ ನಿಂತು ಉತ್ತರ ದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದರು. ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಹಾಗೂ ದಿ. ವೆಂಕೋಬರಾವ್ ಅವರ ಟ್ರಸ್ಟ್ ಪ್ರಸಾದವಾಗಿ ಲಾಡುಗಳನ್ನು ವಿತರಿಸಿದರು.
ದೇವಾಲಯ ಸಮಿತಿ ಪುಟ್ಟಪ್ಪ ಅವರಿಂದ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಸಮಿತಿ ರಮೇಶ್, ಎಂ.ಕೆ. ವೆಂಕಟೇಶ್, ಶ್ರೀನಾಥ್, ಆರ್. ಕೃಷ್ಣಪ್ಪ, ಶ್ರೀ ಹರಿ, ನಾಗಭೂಷಣ್ ಇದ್ದರು.
ವೆಂಕಟೇಶ್ವರ ದೇವಾಲಯ: ಇಲ್ಲಿನ ಗೋಲ್ದ್ ರಂಗಪ್ಪ ಬೀದಿಯಲ್ಲಿರುವ ಶ್ರೀದೇವಿ- ಭೂದೇವಿ ಸಮೇತ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಾಲಯ ಸಮಿತಿ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಿದರು. ಸಮಿತಿ ಅಧ್ಯಕ್ಷ ಗೋಲ್ದ್ ನರಸಿಂಹಯ್ಯ, ಗೋಲ್ದ್ ರಂಗಪ್ಪ, ಲಕ್ಷ್ಮಿಪತಿ, ಪದ್ಮಶಾಲಿ ಸಂಘದ ಅಧ್ಯಕ್ಷ ಜಿ.ಸಿ. ಕೃಷ್ಣಮೂರ್ತಿ, ರವಿ, ಆಂಜಿನಪ್ಪ ಇದ್ದರು.
ಶ್ರೀ ವೀರಾಂಜನೇಯಸ್ವಾಮಿ ದೇವಾಲಯ: ಪಟ್ಟಣದ ರೇಲ್ವೆ ಸೇತುವೆ ಬಳಿಯ ವಾಲ್ಮೀಕಿ ವೃತ್ತದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶನಿವಾರದಂದು ವೈಕುಂಠ ದ್ವಾರ ದರ್ಶನ ಏರ್ಪಡಿಸಿದರು. ಮುಖ್ಯ ಆರ್ಚಕ ವೇಣುಗೋಪಾಲ್‌ಚಾರ್ ಪ್ರಧಾನಾಚಾರ್ಯತ್ವ ದಲ್ಲಿ ಉದಯ ಪೂರ್ವ 3 ಗಂಟೆಗೆ ಸುಪ್ರಭಾತ ಸೇವೆ, ಏಕಾಂತ ಸೇವೆ, ವಿಶ್ವರೂಪದರ್ಶನ, ತೋಮಾಲ ಸೇವೆ, ಮಹಾ ನೈವೇದ್ಯ ಶಾತ್ಮೋರೈ, ಪ್ರಬಂಧ ಪಾರಾಯಣ ನಡೆಯಿತು.
ಧರ್ಮರಾಯಸ್ವಾಮಿ ದೇವಾಲಯ: ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ ಸಪ್ತದ್ವಾರ ದರ್ಶನವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಪ್ರಖ್ಯಾತ ನಾಟ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಾಲಯ ಸಮಿತಿಯ ಎಂ.ಪಿ. ವಿಜಯ ಕುಮಾರ್, ಎಂ.ಸಿ. ಚಂದ್ರು, ಎಂ.ವಿ. ಕೃಷ್ಣಪ್ಪ, ಪಿ. ವೆಂಕಟೇಶ್, ಶ್ರೀನಿವಾಸ್, ಎ. ವೆಂಕಟಸ್ವಾಮಿ, ಮುನಿಯಪ್ಪ, ಎಂ.ಸಿ. ಸೋಮಶೇಖರ್, ಕುಟ್ಟಿ ಮುನಿರಾಜು, ಎಂ.ಕೆ. ಚೇತನ್, ವಿ. ಚೆನ್ನಪ್ಪ ಇದ್ದರು.
ವೈಕುಂಠ ದರ್ಶನಕ್ಕೆ ಭಕ್ತ ಸಾಗರ
ಕೋಲಾರ: ವೈಕುಂಠ ಏಕಾದಶಿ ಪ್ರಯುಕ್ತ ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.
ಸಾವಿರಾರು ಭಕ್ತರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಗರದ ಕಠಾರಿಪಾಳ್ಯದ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲಯ, ಅಮ್ಮರಪೇಟೆಯ ವರದರಾಜ ಸ್ವಾಮಿ ಗುಡಿ, ಡೂಮ್ಲೈಟ್ ವೃತ್ತದ ಕೆಇಬಿ ವಿದ್ಯಾ ಗಣಪತಿ ದೇವಾಲಯ, ಕುಂಬಾರ ಬೀದಿಯಲ್ಲಿನ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಕಿಲಾರ ಪೇಟೆಯ ಶ್ರೀ ವೇಣುಗೋಪಾಲಸ್ವಾಮಿ ದೇಗುಲ ಸೇರಿದಂತೆ ವಿವಿಧ ಕಡೆ ವೈಕುಂಠ ದರ್ಶನಕ್ಕಾಗಿ ಭಕ್ತ ಸಾಗರ ಕಂಡು ಬಂದಿತು. ಬೆಳಿಗ್ಗೆ 5 ಗಂಟೆಯಿಂದಲೇ ಜನರು ದೇವರ ದರ್ಶನ ಪಡೆಯಲಾರಂಭಿಸಿದರು. ರಾತ್ರಿ 10 ಗಂಟೆ ನಂತರವೂ ದೇಗುಲಗಳ ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತ್ತಿದ್ದರು.
ಕೆಜಿಎಫ್ ತಾಲೂಕಿನ ಅಲ್ಲಲ್ಲಿ ವೈಕುಂಠ ಏಕಾದಶಿ
ಕೆಜಿಎಫ್: ವೈಕುಂಠ ಏಕಾದಶಿ ಪ್ರಯುಕ್ತ ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮದ ಸಮೀಪದ ಗುಟ್ಟಹಳ್ಳಿ ಗ್ರಾಮದಲ್ಲಿ ನೆಲಸಿರುವ ಸುಪ್ರಸಿದ್ಧ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಬಂಗಾರು ತಿರುಪತಿ, ವಿಜಯೇಂದ್ರ ಸ್ವಾಮಿ ದೇವಾಲಯ, ಶ್ರೀ ಪ್ರಸನ್ನ ಲಕ್ಮೀ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಯರ್ರಗಾನಹಳ್ಳಿ ವೆಂಕಟೇಶ್ವರಸ್ವಾಮಿ ದೇವಾಲಯ ಸೇರಿದಂತೆ ಕ್ಷೇತ್ರದ ವಿವಿಧ ದೇವಸ್ಥಾನಗಳಲ್ಲಿಗೆ ಶನಿವಾರ ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಆಗಮಿಸಿದ ಭಕ್ತಾದಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಅದರಲ್ಲಿ ಬಂಗಾರು ತಿರುಪತಿ ದೇವಾಲಯದ ವೆಂಕಟರಮಣಸ್ವಾಮಿ ದೇವರನ್ನು ನೇರವಾಗಿ ದರ್ಶನ ಮಾಡುವಂತಿಲ್ಲ. ಆರು ಬಾಗೀಲಿನ ಒಂದು ಸಣ್ಣ ಕಿಂಡಿಯ ಮೂಲಕವೇ ದೇವರನ್ನು ನೋಡುವುದು ಇಲ್ಲಿನ ವಿಶೇಷ.
ಅದೇ ರೀತಿ ಬೇತಮಂಗಲ ಗ್ರಾಮದಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಅರ್ಜುನನು ಪ್ರತಿಷ್ಠಾಪಿಸಿದ ಶ್ರೀ ಪ್ರಸನ್ನ ವಿಜಯೇಂದ್ರಸ್ವಾಮಿ ದೇವರು ಆರಾಧ್ಯದೈವವಾಗಿ ನೆಲಸಿದ್ದಾರೆ. ಶ್ರೀ ಮಹಾವಿಷ್ಣುವಿನ ಅವತಾರ, ಶ್ರೀ ವೆಂಕಟೇಶ್ವರನ ಪ್ರತಿರೂಪವಾದ ಶ್ರೀ ವಿಜಯೇಂದ್ರಸ್ವಾಮಿ ಅಪರೂಪವಾಗಿ ಪಶ್ಮಿಮಾಮುಖವಾಗಿ ಸಿಂಹದ ಮೇಲೆ ಕುಳಿತಿರುವುದು ವಿಶೇಷ.