ನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ಚುರುಕು
ಚಿಕ್ಕಬಳ್ಳಾಪುರ: ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವ ಸಲುವಾಗಿ ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರ ಜಾಗವನ್ನು ಈಗಾಗಲೇ ತಮ್ಮ ವಶಕ್ಕೆ ಪಡೆದುಕೊಂಡಿರುವ ರಾಜ್ಯ ಸಾರಿಗೆ ಸಂಸ್ಥೆಯು, ನಿಲ್ದಾಣ ನಿರ್ಮಾಣ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
ಇದರ ಭಾಗವಾಗಿ ಮೊದಲಿಗೆ ಪ್ರವಾಸಿ ಮಂದಿರದ ಆವರಣದ ಸುತ್ತಮುತ್ತಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. 2007 ಆಗಸ್ಟ್ 23ರಂದು ಚಿಕ್ಕಬಳ್ಳಾಪುರ ಪ್ರತ್ಯೇಕವಾಗಿ ಜಿಲ್ಲೆಯಾಗಿ ರೂಪುಗೊಂಡು ಹಂತ ಹಂತವಾಗಿ ಜಿಲ್ಲಾ ಮಟ್ಟದ ಕಚೇರಿಗಳು ಕಾರ್ಯಾರಂಭಿಸುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
ಪ್ರಮುಖ ರಾಜ್ಯಗಳನ್ನು ಸಂಪರ್ಕಿಸುವ ರಾ.ಹೆ.7 ಚಿಕ್ಕಬಳ್ಳಾಪುರ ತಾಲೂಕಿನ ನಡುವೆ ಹಾದು ಹೋಗಿದೆ. ಅಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪವಿದ್ದು ಬೇರೆ ಬೇರೆ ಕಡೆಯಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಹೀಗಿದ್ದರೂ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲ ಎಂಬ ಕೊರಗು ಜನರನ್ನು ಕಾಡುತ್ತಿತ್ತು.
ನಗರದ ತಿಮ್ಮೇಗೌಡನ ಕೆರೆಯಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆಯಾದರೂ ಅಲ್ಲಿನ ಸಮಸ್ಯೆಗಳನ್ನು ನೆನೆದು ಪ್ರಯಾಣಿಕರು ಹೋಗುವುದಿಲ್ಲ. ಮಳೆ ಬಂದಾಗ ನಿಲ್ದಾಣ ಕುಂಟೆಯಾಗುತ್ತದೆ. ಬೇರೆ ಸಮಯದಲ್ಲಿ ವಾಹನಗಳು ಸಂಚರಿಸಿದಾಗ ಒಂದೇ ಸಮನೆ ಧೂಳು ಏಳುತ್ತದೆ. ಹೆಚ್ಚಿಗೆ ತಗ್ಗು ಗುಂಡಿಗಳಿಂದ ಕೂಡಿರುವುದರಿಂದಲೂ ಸಂಚಾರಕ್ಕೂ ತೊಂದರೆ. ಇದರಿಂದ ಪ್ರಯಾಣಿಕರು ಅದರ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಾರೆ. ಸ್ವಯಂ ಸರ್ಕಾರಿ ಬಸ್ಸುಗಳೇ ಅಲ್ಲಿಗೆ ಹೆಚ್ಚಿಗೆ ಹೋಗುವುದಿಲ್ಲ!
ಇನ್ನು ನಗರದ ಹಳೆಯ ಬಸ್ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರಾದರೂ ಕಿರಿದಾದ ಸ್ಥಳ. ಇಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಎರಡೂ ನಿಲುಗಡೆಯಾಗುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ.ಅಲ್ಲದೆ ಪ್ರಯಾಣಿಕರೂ ಬಸ್ಸಿಗಾಗಿ ಕಾಯಲು ಎಲ್ಲಿ ನಿಲ್ಲಬೇಕೆಂಬ ಗೊಂದಲಕ್ಕೆ ಸಿಲುಕಿಕೊಳ್ಳುತ್ತಾರೆ.
ಸ್ಥಳ ಗುರುತಿಸಲು ವಿಳಂಬ: ಪ್ರಯಾಣಿಕರ ಸಮಸ್ಯೆಗಳನ್ನು ಅರಿತು ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮುಂದಾಗಿದ್ದರ ಪ್ರಾರಂಭದಲ್ಲಿ ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗಿತ್ತು. ಮೊದಲು ನಗರದ ಹೊರ ವಲಯದಲ್ಲಿ ನಿಲ್ದಾಣ ನಿರ್ಮಿಸಬೇಕೆಂಬ ಅಭಿಪ್ರಾಯ ಕೇಳಿ ಬಂತಾದರೂ ನಗರದಿಂದ ಸುಮಾರು 2-3 ಕಿ.ಮೀ ದೂರದಲ್ಲಿ ನಿಲ್ದಾಣಕ್ಕೆ ಜಾಗ ಗುರುತಿಸಿದರೂ ಪ್ರಯಾಣಿಕರು ಸಂಚರಿಸಲು ಪರದಾಡಬೇಕಾಗುತ್ತದೆ ಎಂಬ ದೃಷ್ಟಿಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಪ್ರವಾಸಿಮಂದಿರವನ್ನು ಕೆಡವಿ ನಿಲ್ದಾಣವನ್ನು ನಿರ್ಮಿಸುವ ಯೋಜನೆ ರೂಪಿಸಲಾಯಿತು. ಆದರೆ, ಕಾರಣಾಂತರಗಳಿಂದ ಲೋಕೋಪಯೋಗಿ ಇಲಾಖೆಯಿಂದ ಸಾರಿಗೆ ಸಂಸ್ಥೆಯು ಜಾಗವನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ವಿಳಂಬವಾಯಿತು.
ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸ್ಥಳ ಹಸ್ತಾಂತರವು ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿದ್ದು ಈ ವಿಷಯದಲ್ಲಿ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕೆಂದು ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಒತ್ತಡದ ಹೇರಿದರು. ಫಲವಾಗಿ ಅಗತ್ಯವಿರುವ ಜಾಗವನ್ನು ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲು ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದು ಕಳೆದ ಸೆ.20ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಇದೀಗ ನಗರದಲ್ಲಿ ಪ್ರವಾಸ ಮಂದಿರದ 0-33 ಗುಂಟೆ ಮತ್ತು ಕಂದಾಯ ಇಲಾಖೆಯ 1.22 ಗುಂಟೆ ಜಾಗ ಸೇರಿದಂತೆ ಒಟ್ಟು 2.15 ಗುಂಟೆ ಜಾಗದಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ.
ಮರಗಳ ತೆರವಿಗೆ ಸಿದ್ಧತೆ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕಳೆದ ಅನೇಕ ದಶಕಗಳಿಂದಲೂ ದೊಡ್ಡದಾಗಿ ಬೆಳೆದ ನೀಲಗಿರಿ, ಹುಣಸೆ, ನೇರಳೆ, ಮಾವಿನ ಮರ, ಅರಳಿಮರ, ಇತರೆ ಜಾತಿಯ ಸಣ್ಣ ಮರಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮರಗಳಿವೆ. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ನಿರ್ಮಿಸಲು ಮೊದಲು ಪ್ರವಾಸಿ ಮಂದಿರವನ್ನು ಕೆಡುವುದರ ಜೊತೆಗೆ ಇಲ್ಲಿರುವ ಮರಗಳನ್ನು ಸಹ ತೆರವುಗೊಳಿಸಬೇಕಾಗಿದೆ. ಇದಕ್ಕಾಗಿ ಶೀಘ್ರವಾಗಿ ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಯನ್ನು ಸಾರಿಗೆ ಸಂಸ್ಥೆಯು ಕೋರಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದುಕೊಂಡ ನಂತರ ಬೆಲೆ ಬಾಳುವ ಮರಗಳನ್ನು ಕಡಿಯಲು ಟೆಂಡರ್ ಕರೆಯಲಾಗುತ್ತದೆ. ಇದರಲ್ಲಿ ಭಾಗವಹಿಸುವ ಟೆಂಡರ್‌ದಾರರು ನಿಗದಿಪಡಿಸಿರುವ ಮರಕ್ಕೆ ಬಿಡ್ ಕೂಗಿ ಮರವನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಮರಕ್ಕೆ ಸಂಖ್ಯೆಯನ್ನು ಕೊಟ್ಟು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ.
-ಎನ್.ವೆಂಕಟೇಶ್