ಬೆಸ್ಕಾಂ ಸಂವಾದ ಕಾರ್ಯಕ್ರಮ ಸ್ಥಗಿತ
ಬಂಗಾರಪೇಟೆ: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕಾರಂದ್ಲಾಜೆ ಜಾರಿಗೆ ತಂದಿದ್ದ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗ್ರಾಹಕರೊಂದಿಗೆ ಸಂವಾದ ಕಾರ್ಯಕ್ರಮ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಥಗಿತಗೊಂಡಿದೆ.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಹಕರು ವಿದ್ಯುತ್ನಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವು ಸಕಾಲಕ್ಕೆ ಗ್ರಾಹಕರಿಗೆ ಈಡೇರಲು ತಿಂಗಳಾನುಗಟ್ಟಲೆ ಬೇಕಾಗಿದ್ದು ಪ್ರತಿದಿನ ಗ್ರಾಹಕರು ಬೆಸ್ಕಾಂ ಕಚೇರಿಗೆ ಅಲೆಯುತ್ತಿದ್ದು ಇದನ್ನು ನಿಯಂತ್ರಿಸಲು ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಪ್ರತಿ ತಿಂಗಳು ಎರಡನೇ ವಾರ ಆಯಾ ವ್ಯಾಪ್ತಿಯ ಬೆಸ್ಕಾಂ ಕಚೇರಿಗಳಲ್ಲಿ ಗ್ರಾಹಕರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ವಿನೂತನ ಯೋಜನೆ ಜಾರಿಗೆ ತಂದಿದ್ದರು. ಪ್ರಾರಂಭದಲ್ಲಿ ಸಂವಾದ ಕಾರ್ಯಕ್ರಮಕ್ಕೆ ಹೆಚ್ಚಾಗಿ ವಿದ್ಯುತ್ ಗ್ರಾಹಕರು ಸೇರುತ್ತಿದ್ದರು.
ಸಂವಾದ ಸಭೆಯಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವವರು ಸ್ಥಳೀಯ ಅಧಿಕಾರಿಗಳೇ ಆಗಿರುವುದರಿಂದ ಸಭೆ ಹಳ್ಳ ಹಿಡಿಯಲು ಕಾರಣವಾಗಿದೆ. ರೈತರು, ವರ್ತಕರು ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ದೂರು ನೀಡಿದರೂ ಕ್ಯಾರೇ ಎನ್ನುತ್ತಿರಲಿಲ್ಲ, ಇದರಿಂದ ನೊಂದು ವಿದ್ಯುತ್ ಇಲಾಖೆಯೆಂದರೆ ಮೂಗು ಮುರಿಯುವಂತಾಗಿತ್ತು. ಇನ್ನು ಸಂವಾದ ಸಭೆಯಲ್ಲಿ ಮೇಲಾಧಿಕಾರಿಗಳು ಹಾಜರಿದ್ದರೆ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ನೀಗಬಹುದಿತ್ತು, ಆದರೆ ಈ ಹಿಂದೆ ದೂರು ಸ್ವೀಕರಿಸಿದ್ದ ಅಧಿಕಾರಿಗಳೇ ಮತ್ತೆ ಸಮಸ್ಯೆಗಳನ್ನು ಆಲಿಸುವುದರಿಂದ ಈಡೇರುವ ಮಾತು ಎಲ್ಲಿಂದ ಬಂತು ಎಂದು ಗ್ರಾಹಕರು ನಂತರದ ದಿನಗಳಲ್ಲಿ ಸಭೆಗೆ ಬರುವುದನ್ನೇ ನಿಲ್ಲಿಸಿದ್ದರು. ಸರ್ಕಾರ ಆದೇಶದ ಪ್ರಕಾರ ಅಧಿಕಾರಿಗಳು ಸಭೆ ನಡೆಸಲೇಬೇಕು, ಸಭೆ ನಡೆದಿರುವ ಹಾಗೆ ಒಂದಿಬ್ಬರಿಂದ ಸಹಿ ಮಾಡಿಸಿಕೊಂಡು ಕೈ ತೊಳೆಯುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸದ್ದಿಲ್ಲದೆ ಸಂವಾದ ಸಭೆಯನ್ನೇ ಗ್ರಾಹಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ. ಇಲಾಖೆಯಲ್ಲಿ ಗ್ರಾಹಕರಿಗೆ ಬೆಟ್ಟದಷ್ಟು ಸಮಸ್ಯೆಗಳಿವೆಯಾದರೂ ಯಾಒಬ್ಬ ಅಧಿಕಾರಿಯೂ ಸ್ಪಂದಿಸುವುದಿಲ್ಲ, ಇಂಧನ ಖಾತೆಯ ನೂತನ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ತಮ್ಮ ಇಲಾಖೆಯಲ್ಲಿ ಇರುವ ನ್ಯೂನತೆಯನ್ನು ಸರಿಪಡಿಸುವತ್ತ ಗಮನಹರಿಸುವರೇ ಕಾದು ನೋಡಬೇಕು.