ವಿಧಾನಸೌಧಕ್ಕೆ ಲಗ್ಗೆ ಹಾಕುವ ಸಾಹಿತಿಗಳಿದ್ದಾರೆ
ಕ.ಪ್ರ.ವಾರ್ತೆ , ಕೋಲಾರ , ಜ. 12
ರಾಜ್ಯದ ಕೆಲ ಸಾಹಿತಿಗಳು ಜನತೆಯ ಆಶೋತ್ತರಗಳಿಗೆ ಪೂರಕವಾದ ಸಾಹಿತ್ಯ ರಚಿಸಿ ಅದರ ಮೂಲಕ ನಾಡಕಟ್ಟುವ ಕೆಲಸ ಮಾಡದೆ ಸರ್ಕಾರದ ಸವಲತ್ತುಗಳಿಗಾಗಿ ವಿಧಾನಸೌಧಕ್ಕೆ ಲಗ್ಗೆ ಹಾಕುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆಂದು ಹಂಪಿ ವಿವಿಯ ಪ್ರೊಫೆಸರ್, ಸಾಹಿತಿ ಹಾಗೂ ವಿಮರ್ಷಕ ಡಾ.ಕೆ.ಸಿ. ಶಿವಾರೆಡ್ಡಿ ಛೇಡಿಸಿದರು.
ಮನ್ವಂತರ ಪ್ರಕಾಶನದಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಕವಿ, ಸಾಹಿತಿ ಸ. ರಘುನಾಥ್ ಅವರಿಗೆ ಹಮ್ಮಿಕೊಂಡಿದ್ದ ಕವಿನಮನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೆಲವರು ಸಾಹಿತಿಗಳೆಂಬ ಮುಖವಾಡ ಧರಿಸಿ ಸವಲತ್ತುಗಳಿಗಾಗಿ ವಿಧಾನಸೌಧಕ್ಕೆ ಲಗ್ಗೆ ಇಟ್ಟು ಸಾಹಿತ್ಯ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆಂದು ಟೀಕಿಸಿದರು.
ಸಾಹಿತಿಗಳಾಗಿದ್ದುಕೊಂಡು ರಾಜಕಾರಣ ಮಾಡುತ್ತಿರುವವರ ಪುಸ್ತಕಗಳು ಕಪಾಟುಗಳಲ್ಲಿ ರಾಜಾಜಿಸುವ ಸನ್ನಿವೇಶವನ್ನು ಬೆಂಗಳೂರಿನಲ್ಲಿ ನೋಡಬಹುದಾಗಿದೆ ಎಂದು ವ್ಯಂಗ್ಯವಾಡಿದ ಅವರು, ಗ್ರಾಮೀಣ ಸೊಗಡಿನ ಸಾಹಿತಿ, ಕವಿ ಸ. ರಘುನಾಥ್ ಅವರಂತಹ ಸಾಹಿತಿಗಳ ಒಂದು ಕವನ ಸಂಕಲನ, ಕೃತಿಗಳೂ ಬೆಂಗಳೂರಿನ ಪುಸ್ತಕ ಅಂಗಡಿಗಳಲ್ಲಿ ತಮಗೆ ಸಿಗಲಿಲ್ಲ. ಆದರೆ ಅವರ ಸಾಹಿತ್ಯ ಸೇವೆ ಮಾತ್ರ ದೊಡ್ಡದು ಎಂಬುದಕ್ಕೆ ಅವರಿಗೆ ಕವಿನಮನ ಸಲ್ಲಿಸುತ್ತಿರುವುದಕ್ಕಿಂತ ದೊಡ್ಡದಾದ ಪುರಸ್ಕಾರ ಇನ್ನೊಂದಿಲ್ಲ ಎಂದರು.
ಖಾಸಗೀತನ ಭಗ್ನ: ನಾವಿಂದು ಕ್ಯಾಮರಾ ಕಣ್ಣಿನಲ್ಲಿ ಸಿಲುಕಿ ಖಾಸಗೀತನವನ್ನು ಭಗ್ನಗೊಳಿಸಿಕೊಂಡಿದ್ದೇವೆ. ಇದು ನಾವೇ ಮಾಡಿದ ಅಪರಾಧ . ಖಾಸಗಿತನ ಭಗ್ನವಾದರೆ ನಮಗೆ ಬದುಕಿಲ್ಲ. ಇದೆಲ್ಲದರ ನಡುವೆಯೂ ನೆಮ್ಮದಿಯಿಂದ ಇದ್ದೇವೆ ಎಂದು ಹೇಳುವುದೇ ದೊಡ್ಡ ದುರಂತ. ಸಾಹಿತಿಗಳಿಗೆ ಇವು ಕಾಡುತ್ತಿಲ್ಲ, ಇವ್ಯಾವುದೂ ಸಾಹಿತ್ಯದ ವಸ್ತುಗಳಾಗಲೇ ಇಲ್ಲ ಎಂದು ವಿಷಾದಿಸಿದರು.
ಜಿ.ಎಸ್. ಶಿವರುದ್ರಪ್ಪ ದೊಡ್ಡ ಕವಿ. ಅವರ ಅನುಪಸ್ಥಿತಿಯಲ್ಲಿ ಅವರಿಗೇ ಗೊತ್ತಿಲ್ಲದ ಹಾಗೆ ನಾಟಕ ನಡೆದು ಹೋಯಿತು. ವಿಶ್ವವಿದ್ಯಾಲಯದಂತಹ ಸ್ಥಳದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಜಾಗಬೇಕು ಎಂದು ಕೆಲವರು ಸರ್ಕಾರದ ಮುಂದೆ ಅಂಗಲಾಚಿದರು. ಶಿವರುದ್ರಪ್ಪ ಅವರು ಖಂಡಿತ ಇಂತಹ ಬಯಕೆ ಹೊಂದಿರಲು ಸಾಧ್ಯವೇ ಇಲ್ಲ. ಅವರಿಗೆ ಜಂಗಮ ತತ್ವ ಗೊತ್ತಿರಲಿಲ್ಲವೇ ಆದರೆ ಕೆಲವರು ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳಲು ಸ್ಮಾರಕ ಕಟ್ಟಬೇಕು ಎಂದು ಕವಿ ಸತ್ತಾಗ ಹೇಳಿದ್ದು ಅವರಿಗೆ ತೋರಿದ ಅಗೌರವ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೊಡ್ಡ ಅಪರಾಧ: ರಾಷ್ಟ್ರಕವಿಯೊಬ್ಬರು ತೀರಿಕೊಂಡಾಗ ಅವರ ಶವವನ್ನು ಮೂರು ದಿನ ಶವಪೆಟ್ಟಿಗೆಯಲ್ಲಿಟ್ಟಿದ್ದು ದೊಡ್ಡ ಅಪರಾಧ, ಶಿವರುದ್ರಪ್ಪನವರು ತಮ್ಮ ಅಂತ್ಯ ಸಂಸ್ಕಾರ ಇಂತಹ ಜಾಗದಲ್ಲೇ ನಡೆಯಬೇಕೆಂದು ಎಲ್ಲೂ ಉಲ್ಲೇಖ ಮಾಡಿರಲು ಸಾಧ್ಯವೇ ಇಲ್ಲ. ಆದರೆ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬೇಡಿಕೆಗಳನ್ನು ಇಟ್ಟು ನಾಗರಿಕ ಸಮಾಜ ನಾಚುವಂತೆ ಮಾಡದರೆಂದು ತಿಳಿಸಿದರು. ಮಹಾನ್ ಕವಿಗಳು, ಸಾಹಿತಿಗಳು ತೀರಿಕೊಂಡಾಗ ಅವರು ಸೇವೆ ಮಾಡಿರುವ ವಿಶ್ವವಿದ್ಯಾಲಯಗಳ ಕಡೆ ಹೂಳುತ್ತಾ ಹೋಗಲು ವಿಶ್ವವಿದ್ಯಾಲಯಗಳು ನಮ್ಮದಲ್ಲ. ಮಕ್ಕಳು, ಮೊಮ್ಮಕ್ಕಳ ಆಸ್ತಿ. ಆದರೆ ಕೆಲವರು ಸತ್ತವರ ಹೆಸರು ದುರುಪಯೋಗ ಮಾಡಿಕೊಂಡು ಮಾದ್ಯಮಗಳಲ್ಲಿ ಸುಳ್ಳು ಬಂಬಿಸಿ, ನಮ್ಮ ಕಣ್ಣು ತೇವ ಆಗುವ ಹಾಗೆ ಮಾಡಿರುವುದು, ಒಂದೇ ಒಂದು ಪ್ರತಿರೋಧ ಮಾಡದೆ ಮುಂಬರುವ ಮಕ್ಕಳ ಆಸ್ತಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ನಿಜವಾಗಿಯೂ ಒಳ್ಳೆಯ ಕ್ರಮ ಅಲ್ಲ. ಅದು ಕವಿಗೆ ತೋರಿದ ಗೌರವ ಅಲ್ಲದೇ ಮತ್ತೇನು ಪ್ರಶ್ನಿಸಿದರು.
ವಿವಿಗಳು ಸ್ಮಶಾನವಾಗುವುದಿಲ್ಲವೇ: ರಾಷ್ಟ್ರಕವಿ ಕುವೆಂಪು ಅವರು ನಿಧನರಾದಾಗಲೂ ಇಂತಹದ್ದೇ ಜಿಜ್ಞಾಸೆ ನಡೆದಿತ್ತು. ಕುವೆಂಪು ಅವರ ಸ್ನೇಹಿತರು ವಿವಿಯಲ್ಲಿ ಹೂಳಲು ಹೊರಟಿದ್ದರು. ಕಡೆಗೆ ಕುಪ್ಪಹಳ್ಳಿಯಲ್ಲೇ ಹೂಳಲಾಯಿತು. ಇದನ್ನು ತೇಜಸ್ವಿ ಅವರೇ ತಮ್ಮಲ್ಲಿ ಹೇಳಿದ್ದನ್ನು ಸ್ಮರಿಸಿದ ಡಾ. ಶಿವಾರೆಡ್ಡಿ, ಹಾಗೆ ಮಾಡಿದರೆ ಎಲ್ಲ ವಿವಿಗಳಲ್ಲಿ ಹೂಳುವ ಸನ್ನಿವೇಶ ನಿರ್ಮಾಣವಾಗಿ ವಿವಿಗಳು ಸ್ಮಶಾನವಾಗುವುದಿಲ್ಲವೇ ಎಂದು ಕಳವಳ ವ್ಯಕ್ತಪಡಿಸಿದರು.
ಲೇಖಕ ನಾಗತಿಹಳ್ಳಿ ರಮೇಶ್ ಮಾತನಾಡಿ, ರ. ರಘುನಾಥ್ ಅವರಿಗೆ ಪ್ರಶಸ್ತಿಗಳು ಬರದಿರಬಹುದು. ಆದರೆ, ಅವರ ಸಾಹಿತ್ಯ ಜನರ ಮನದಾಳ ಗೆದ್ದಿದೆ. ಮನ್ವಂತರ ಪ್ರಕಾಶನ ಇಂತಹ ಗುಣಾತ್ಮಕ ಹಾಗೂ ಸಮಾಜಮುಖಿ ಸಾಹಿತಿಯನ್ನು ಗುರುತಿಸಿ ಕವಿನಮನ ಅರ್ಪಿಸುತ್ತಿರುವುದು ಸರ್ಕಾರಗಳು ನೀಡುವ ಪ್ರಶಸ್ತಿಗಿಂತ ದೊಡ್ಡದು ಎಂದರು. ರಾಜಧಾನಿಯಲ್ಲಿ ಕುಳಿತು ನಾವೇ ದೊಡ್ಡ ಸಾಹಿತಿಗಳು ಎಂದು ಭಾವಿಸಿ ಸರ್ಕಾರದ ಸವಲತ್ತುಗಳಿಗಾಗಿ ಸಾಹಿತ್ಯವನ್ನು ಹರಾಜು ಹಾಕುವುದಕ್ಕೆ ಹೊರಟಿರುವ ಸಾಹಿತಿಗಳು ಸಮಾಜಕ್ಕೆ ನೀಡಿರುವ ಸಂದೇಶ ಮತ್ತು ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.