ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವೇಕಾನಂದರ ಜನ್ಮದಿನಾಚರಣೆ

Vishwanath S
Updated On : 13 Jan 2014, 1:11 am

ಮಾಲೂರು: ಭಾನುವಾರ ರಜೆ ದಿನವಾಗಿದ್ದರೂ ಇಲ್ಲಿನ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದರ ಜನ್ಮದಿನಾಚರಣೆ ಆಚರಿಸುವ ಮೂಲಕ ರಾಷ್ಟ್ರಪ್ರೇಮ ಮರೆದಿದ್ದಾರೆ.ಶಾಲೆಯ ಮುಖ್ಯೋಪಾಧ್ಯಾಯಿನಿ ಮುನಿಲಕ್ಷ್ಮಮ್ಮ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಿಸಿದ ಮಹಾನ್ ಸನ್ಯಾಸಿ ವಿವೇಕಾನಂದನವರು ಬ್ರಿಟಿಷ್‌ರ ದಾಸ್ಯದಲ್ಲಿದ್ದ ಕಾಲದಲ್ಲಿ ಜನಸಿದವರು. ಸಣ್ಣ ವಯಸ್ಸಿನಲ್ಲೇ ಅದ್ಯಾತ್ಮಿಕ ಕಡೆ ವಾಲಿದ ವಿವೇಕಾನಂದರು ದೇಶ ಕಂಡ ಅಪ್ರತಿಮ ದೇಶ ಭಕ್ತರಾಗಿದ್ದರು ಎಂದರು. ಶಿಕ್ಷಕರಾದ ಮಂಜುಳಮ್ಮ, ನಾಗರಾಜ್, ಸುಧಾಕರ್ ಮಾತನಾಡಿದರು. ವಿವೇಕಾನಂದರ ಬಗ್ಗೆ ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ ಮತ್ತು ಸಹನಾ ಮಾತನಾಡಿದರು. ಭೋಧಕ ವರ್ಗದವರಿಂದ ಮಕ್ಕಳಿಗೆ ಹಾಲು ಹಾಗೂ ಸಿಹಿ ಹಂಚಲಾಯಿತು.
ಕೊಲೆ ಬೆದರಿಕೆ; ಖಂಡನೆ
ಮಾಲೂರು; ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರವೀಣ್ ಮುತಾಲಿಕ್ ಮೇಲಿನ ಕೊಲೆ ಬೆದರಿಕೆಯನ್ನು ಖಂಡಿಸುವುದಾಗಿ ಶ್ರೀರಾಮ ಸೇನೆಯ ತಾಲೂಕು ಸಂಚಾಲಕ ಭರತ್‌ಭೂಷಣ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಲೋಕಸಭೆಯಲ್ಲಿ  ಪ್ರಹ್ವಾದ್ ಜೋಷಿ ವಿರುದ್ಧ ಸ್ವರ್ಧೆ ನೀಡಬಾರದೆಂದು ಪೋನಿನ ಮೂಲಕ ಬೆದರಿಕೆ ಹಾಕಿದ ಬೆಳಗಾವಿಯ ವಿನೋದ್ ಕುಮಾರ್‌ನನ್ನು ಬಂಧಿಸಬೇಕು ಎಂದರು.
ಕರಕುಶಲ ವಸ್ತು ಪ್ರದರ್ಶನ
ಚಿಂತಾಮಣಿ: ರಾಯಲ್ ವಿದ್ಯಾ ಸಂಸ್ಥೆಯಲ್ಲಿ ಬೆಳ್ಳಿ ರಜತ ಮಹೋತ್ಸವದ ಅಂಗವಾಗಿ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಸಾರ್ವಜನಿಕರ ಗಮನ ಸೆಳೆಯಿತು. ನಗರದ ಪ್ರತಿಷ್ಠಿತ ರಾಯಲ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಪ್ರದರ್ಶನದಲ್ಲಿ ವಿಶೇಷವಾಗಿ ವಾಯುಮಾಲಿನ್ಯದ ಮೇಲೆ ಬೀರುವ ದುಷ್ಪರಿಣಾಮಗಳು, ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಬಗ್ಗೆ ಅರಿವು, ವಿವಿಧ ತರಕಾರಿಗಳ ಪ್ರದರ್ಶನ, ಬಿದಿರಿನಲ್ಲಿ ಮಾಡಿರುವ ವಿವಿಧ ವಿಶಿಷ್ಠತೆಗಳು ಸೇರಿದಂತೆ ಇನ್ನೂ ಮುಂತಾದವುಗಳು ಪ್ರದರ್ಶನದಲ್ಲಿ ಜನರ ಆಕರ್ಷಣೆಯಾಗಿತ್ತು. ಈ ವೇಳೆ ರಾಯಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಮಕೃಷ್ಣರೆಡ್ಡಿ ಮಾತನಾಡಿ, ಕಳೆದ 25 ವರ್ಷಗಳಿಂದ ಗ್ರಾಮೀಣ ಪ್ರದೇಶದಿಂದ ನಗರದವರೆಗೂ ಶೈಕ್ಷಣಿಕ ರಂಗದಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವ ಬಗ್ಗೆ ನೆಮ್ಮದಿ ಇದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆ ಶಾಲೆಯ ಪ್ರಾಂಶುಪಾಲ ಪ್ರೇಮಲತಾ, ಶಿಕ್ಷಕರಾದ ಶಿ.ಮು.ಮಂಜುನಾಥ, ಗೋವಿಂದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದರು.
ಪ್ರೋತ್ಸಾಹ ಧನ ಹೆಚ್ಚಿಸಲು ಆಗ್ರಹ
ಮಾಲೂರು; ರಾಜ್ಯ ಸರ್ಕಾರ ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಹೆಣ್ಣು ಮಕ್ಕಳ ವಿಧ್ಯಾಭ್ಯಾಸದ ಉತ್ತೇಜನಕ್ಕಾಗಿ ನೀಡುತ್ತಿರುವ ಪ್ರೋತ್ಸಾಹ ಧನ 2 ರು.ಗಳಿಂದ 5 ರು.ಗಳಿಗೆ ಹೆಚ್ಚಿಸಬೇಕು ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು. ಇಲ್ಲಿನ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೆಣ್ಣು ಮಕ್ಕಳಿಗೆ 2 ರು.ಗಳ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು. ಇದೇ ಸಂಧರ್ಭದಲ್ಲಿ  ಶಾಸಕರು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಸುಬ್ರಮಣ್ಯ,ಪ್ರಾಂಶುಪಾಲ ವೆಂಕಟೇಶಪ್ಪ ಇದ್ದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ
ಕೆಜಿಎಫ್: ಕೋಲಾರ ಜಿಲ್ಲೆಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಹೀದ್ ಸಾಜ್ಜಾದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಜಯಗಳಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರೊಂದಿಗೆ ಆಂಡ್ರಸನ್‌ಪೇಟೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗಾಂಧಿ ವೃತ್ತದಲ್ಲಿರು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಭ್ರಮಾಚರಿಸಿದರು. ಈ ವೇಳೆ ಮಾತನಾಡದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಾಹಿದ್, ಚುನಾವಣೆಯಲ್ಲಿ ತಮ್ಮನ್ನು ವಿಜೇತರನ್ನಾಗಿ ಮಾಡಿದ ಕೆಜಿಎಫ್ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ತಮ್ಮ ಬೆಂಬಲಿಗರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕಬೀರ್, ವಿವೇಕ್, ವಿಷ್ಣು, ಸಾದೀಕ್, ಮನ್ಸೂರ್ ಇದ್ದರು.
ಬೀಚಗಾನಹಳ್ಳಿಯಲ್ಲಿ ಕಲಿಕೋತ್ಸವ
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಲಾಕ್ ಹಂತದ ಕಲಿಕೋತ್ಸವ ಕಾರ್ಯಕ್ರಮವನ್ನು ಬೀಚಗಾನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎನ್. ಶ್ರೀನಿವಾಸ್ ಉದ್ಘಾಟಿಸಿದರು.
ಕಲಿಕೋತ್ಸವದಲ್ಲಿ ಸರ್ಕಾರಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ಮಕ್ಕಳು ಭಾಗವಹಿಸಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಲುಗುಂಬ ಜಿಎಚ್‌ಪಿಎಸ್ ವಿದ್ಯಾರ್ಥಿಗಳು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ವಿಜೇತರಾಗಿ ಬಹುಮಾನ ಪಡೆದರು.
ಈ ವೇಳೆ ಬಿಇಒ ವೈ.ಸಿ. ರವಿಕುಮಾರ್, ಪ್ರಭಾರಿ ಸಮನ್ವಾಯಾಧಿಕಾರಿ ಅಮೀರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಮುನಿಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಶ್ವತ್ಥ್ ನಾರಾಯಣಪ್ಪ, ಸಿಆರ್‌ಪಿ ರಾಮನಾಥ್, ಪಿಡಿಒ ಗಣೇಶ ಬಾಬು ಸೇರಿದಂತೆ ಹಲವರು ಇದ್ದರು.
ವಿವೇಕಾನಂದರ 150 ನೇ ಜನ್ಮದಿನಾಚರಣೆ
ಮಾಲೂರು: ಯುವಜನತಯೇ ರಾಷ್ಟ್ರದ ಶಕ್ತಿ ಎಂದು ನಂಬಿದ ಸ್ವಾಮಿ ವಿವೇಕಾನಂದರ ಜೀವನ ಶೈಲಿ ಇಂದಿನ ಯುವಕರ ಮಾರ್ಗದರ್ಶನವಾಗಬೇಕು ಎಂದು ಬಿಜಿಪಿ ಮುಖಂಡ ಜಿ.ಇ. ರಾಮೇಗೌಡ ಹೇಳಿದರು.
ತಾಲೂಕು ಬಿಜೆಪಿ ಯುವಮೋರ್ಚಾ ಪಟ್ಟಣದ ಬಸ್‌ನಿಲ್ದಾಣದ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಅತಿ ಸಣ್ಣ ವಯಸ್ಸಿನಲ್ಲೇ ರಾಷ್ಟ್ರೀಯತೆ ಗುಣ ಬೆಳೆಸಿಕೊಂಡಿದ್ದ ವಿವೇಕಾನಂದರು ಯುವಕರಿಂದಲೇ ದೇಶದ ಏಳಿಗೆ ಸಾಧ್ಯ ಎಂದು ಅರಿತವರು. ಈ ನಿಟ್ಟಿನಲ್ಲಿ ಅವರು ನೀಡಿರುವ ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತು ಇಂದಿನ ಯುವಕರಿಗೆ ಆದರ್ಶವಾಗಿದೆ ಎಂದರು.
ರಾ.ಹಿಂ.ಪ.ನ ಗೋವಿಂದ್ ರಾಜು ಮಾತನಾಡಿ, ವಿಶ್ವಧರ್ಮ ಸಮ್ಮೇಳನದಲ್ಲಿ ದೇಶದ ಕುರಿತು ಪಾಶ್ಚಾತ್ಯರಿಗೆ ಇದ್ದ ದೃಷ್ಟಿಕೋನವನ್ನು ತಮ್ಮ ಮಾತಿನ ಮೂಲಕ ಬದಲಾಯಿಸಿದ ಮಹನೀಯ ವಿವೇಕಾನಂದರು. ಭಾರತದ ಕುರಿತು ನವಚಿಂತನೆ ಮಾಡಿದವರಲ್ಲಿ ಅಗ್ರ ಗಣ್ಯರು ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್, ಯುವಮೋರ್ಚಾ ಅಧ್ಯಕ್ಷ ಅಪ್ಪಿರಾಜು, ವಿವೇಕಾನಂದರ ಜನ್ಮದಿನಾಚರಣೆ ಸಮಿತಿಯ ಪರಮೇಶ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಗೋಪಾಲ್‌ಗೌಡ, ಪುರಸಭೆ ಸದಸ್ಯ ಲಿಂಗೇಶ್ವರಯ್ಯ, ಬಿಜೆಪಿ ಮುಖಂಡ ಬಿ.ಆರ್. ವೆಂಕಟೇಶ್, ಸುಬ್ರಮಣ್ಯ ರೆಡ್ಡಿ, ಕುಟ್ಟಿ ಮುನಿರಾಜು, ಮುನಿಶ್ಯಾಮಿ, ಗೋಪಾಲ್, ಆಂಜಿ ಇದ್ದರು.
ಮಟ್ಕಾ: ಇಬ್ಬರ ಬಂಧನ; ನಗದು ವಶ
ಚಿಂತಾಮಣಿ: ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ಸಾವಿರಾರು ರು. ನಗದು, ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮಸಂದ್ರ, ಕೋನಪ್ಪಲ್ಲಿ ಗ್ರಾಮಗಳಲ್ಲಿ ಇಂದು ಸಂಜೆ ನಡೆದಿದೆ. ತಾಲ್ಲೂಕಿನ ಚಿಂತಾಮಣಿ- ಶಿಡ್ಲಘಟ್ಟ ಮಾರ್ಗದ ತಿಮ್ಮಸಂದ್ರ ಕೋನಪ್ಪಲ್ಲಿ ಗ್ರಾಮಗಳಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಅನ್ವರ್ ಮತ್ತು ಮುನಿ ನಾರಾಯಣಪ್ಪ ಎಂಬ ಇಬ್ಬರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದಾಗ ಆರೋಪಿಗಳ ಬಳಿ ರು. 1500 ನಗದು ಹಣ ಮತ್ತು ಮಟ್ಕಾ ಚೀಟಿ ದೊರೆತಿರುವುದಾಗಿ ಪೋಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
14ರಂದು ಮಾದಿಗ ದಂಡೋರಾ ಕಾರ್ಯಕ್ರಮ
ಚಿಂತಾಮಣಿ: ಕರ್ನಾಟಕ ಮಾದಿಗ ದಂಡೋರ ಹೋರಾಟ ಸಮಿತಿಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯ ರೂಪುರೇಷೆ ನಿರ್ಧರಿಸಲು ಜ. 14ರಂದು ರಾಜ್ಯಾಧ್ಯಕ್ಷ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ಚಿಕ್ಕಬಳ್ಳಾಪುರ ಮಾದಿಗ ದಂಡೋರಾ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ. ಕೃಷ್ಣಪ್ಪ  ತಿಳಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 14 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಗುರುಭವನದಲ್ಲಿ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಆದಿ ಜಾಂಬವಂತನ ಜಯಂತಿ ಹಾಗೂ 2014 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆಯನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಚಾಲನೆ ನೀಡಲಿದ್ದಾರೆ. ಭಾಷಣಗಾರರಾಗಿ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಬುಳಳ್ಳಿ ರಾಜಪ್ಪ ವಹಿಸಲಿದ್ದಾರೆ.
ಬಾಲಕಿ ಅಪಹರಣ
ಕೆಜಿಎಫ್: ಅಪ್ರಾಪ್ತ ಬಾಲಕಿಯನ್ನು ವ್ಯಕ್ತಿಯೊಬ್ಬ ಎರಡನೇ ಮದುವೆ ಆಗುವ ಉದ್ದೇಶದಿಂದ ಅಪಹರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಂಡ್ರಸನ್‌ಪೇಟೆ ಠಾಣಾ ವ್ಯಾಪ್ತಿಯ ನೀಲಗಿರಿಹಳ್ಳಿ ಗ್ರಾಮದ ನಿವಾಸಿ ಜಯರಾಮಪ್ಪ ಎಂಬವರ ಮಗಳಾದ ಗೌರಮ್ಮ(16) ರನ್ನು ಜಯರಾಮಪ್ಪ ಅವರ ಅಳಿಯ ರವಣಪ್ಪ ಎಂಬವರು ಕಳೆದ ಡಿ.22 ರಂದು ಎರಡನೇ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಿಸಿರುವುದಾಗಿ ಬಾಲಕಿಯ ತಂದೆ ಜಯರಾಮಪ್ಪ ಆಂಡ್ರಸನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪಘಾತ: ವ್ಯಕ್ತಿ ಸಾವು
ಬಾಗೇಪಲ್ಲಿ: ಕಾರು ರಸ್ತೆ ಬದಿಯ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದು ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣಕ್ಕೆ ಸಮೀಪದಲ್ಲಿರುವ ರಾ.ಹೆ.7ರಲ್ಲಿನ ಸಾಯಿಬಾಬಾ ಶಾಲೆ ಬಳಿ ಭಾನುವಾರ ನಡೆದಿದೆ. ಮೃತಪಟ್ಟಿರುವವರನ್ನು ಚಿಕ್ಕಬಳ್ಳಾಪುರ ನಗರದ ಅಯಾಜ್ ಬಾಷಾ(32) ಎಂದು ಗುರುತಿಸಲಾಗಿದೆ.
ಬಾಷಾ ಮತ್ತು ಅವರ ಸಂಬಂಧಿಕರಾದ ಹಸೀನಾ ಮತ್ತು ಆಸೀಫ್ ಎಂಬವರು ನ್ಯಾನೋ ಕಾರಿನಲ್ಲಿ ಚಿಕ್ಕಬಳ್ಳಾಪುರ ನಗರದಿಂದ ಬೆಳಗಿನ ಜಾವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಗೊಂಡ ನಗರಕ್ಕೆ ಪ್ರಯಾಣ ಬೆಳೆಸಿದ್ದರು.
ಆದರೆ ಪಟ್ಟಣಕ್ಕೆ ಸಮೀಪದಲ್ಲಿರುವ ರಾ.ಹೆ.7ರಲ್ಲಿನ ಸಾಯಿಬಾಬಾ ಶಾಲೆ ಬಳಿ ವಾಹನ ಬರುತ್ತಿದ್ದಂತೆ ರಸ್ತೆ ಬದಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂಗೊಂಡು ಚಾಲನೆ ಮಾಡುತ್ತಿದ್ದ ಕಾರಿನ ಮಾಲೀಕ ಅಯಾಜ್ ಬಾಷಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕಾರಿನಲ್ಲಿದ್ದ ಹಸೀನಾ ತೀವ್ರವಾಗಿ ಗಾಯಗೊಂಡಿದ್ದಾರೆ.  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement