ವಿವಿಧೆಡೆ ಸಿದ್ದರಾಮೇಶ್ವರ ಜಯಂತ್ಯುತ್ಸವ
ಕ.ಪ್ರ.ವಾರ್ತೆ , ಕೋಲಾರ , ಜ. 13
ಶೋಷಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಧ್ಯೇಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಕಟ್ಟಕಡೆಯ ಜನರಿಗೆ ಉತ್ತಮ ಜೀವನಕ್ಕೆ ಅವಕಾಶಗಳು ಸಿಗಬೇಕೆಂಬ ನಿಟ್ಟಿನಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಉತ್ತಮ ಸಂದೇಶ ನೀಡಿದ್ದಾರೆ. ಈ ಸಂದೇಶ ಸಕಾರಗೊಳಿಸಲು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಅನುಷ್ಠಾನಕ್ಕೆ ತರುತ್ತಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ದಲಿತರು, ಹಿಂದುಳಿದ ವರ್ಗಕ್ಕೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಸಮಾಜದಲ್ಲಿ ಪ್ರತಿಯೊಬ್ಬರು ಸೋದರತ್ವ ಭಾವನೆಯಿಂದ, ಪ್ರೀತಿಯಿಂದ ಬಾಳ್ವೆ ಮಾಡಬೇಕೆಂಬುದು ಸಿದ್ದರಾಮೇಶ್ವರರು ಆಶಯವಾಗಿತ್ತು. ಭೋವಿ ಜನಾಂಗದಲ್ಲಿ ಹುಟ್ಟಿದರು ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ತಮ್ಮ ಬದುಕು ನಡೆಸಿದ್ದಾರೆ. ಎಲ್ಲ ವರ್ಗದ ಜನರ ಒಳಿತಿಗಾಗಿ ಗುರುವಿನ ಸ್ಥಾನದಲ್ಲಿ ನಿಂತು ಕೆಲಸ ಮಾಡಿರುವುದು ಹೆಮ್ಮೆಯ ವಿಚಾರವೆಂದು ಅಭಿಪ್ರಾಯಪಟ್ಟರು.
ಸಮಸ್ಯೆ ಇಲ್ಲದ ಪ್ರದೇಶವೇ ಇಲ್ಲ, ಸಮಸ್ಯೆಗಳು ಏನೇ ಇದ್ದರೂ ಅದನ್ನು ಧೈರ್ಯವಾಗಿ ಎದುರಿಸಬೇಕು. ಕೆಲವು ಸಲ ಸಮಸ್ಯೆಗಳನ್ನು ತಾವೇ ಸೃಷ್ಟಿ ಮಾಡಿ, ನಂತರ ತಾವೇ ಬಗೆಹರಿಸುವಂತ ವಾತಾವಣ ನಿರ್ಮಿಸಿ ಪರಿಸ್ಥಿತಿಯ ಲಾಬ ಪಡೆಯುವವರ ಬಗ್ಗೆ ಎಚ್ಚರವಹಿಸಬೇಕೆಂದರು.
ಕೋಲಾರ ಜಿಲ್ಲೆ ಮುಂಚೆಗಿಂತ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಸಕಾರಗೊಳ್ಳುವಂತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಲ್ಲಿ ಜಿಲ್ಲೆಯ ಚಿತ್ರವೇ ಬದಲಾಗುತ್ತದೆ ಎಂದರು.
ಬಂಗಾರಪೇಟೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಭೋವಿ ಜನಾಂಗಕ್ಕೆ ಸಿದ್ದರಾಮೇಶ್ವರರಂತಹ ಗುರುಗಳು ಸಿಕ್ಕಿದ್ದು ಜನಾಂಗದ ಪುಣ್ಯ. ಗುರುಗಳು ನೀಡಿದ ಸಂದೇಶವನ್ನು ಪಾಲನೆ ಮಾಡುವ ಮೂಲಕ ಸಮಾಜವನ್ನು ಬಲಪಡಿಸಬೇಕಾಗಿದೆ. ಭೋವಿ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾದರೆ ಸಂಘಟನೆ, ಶಿಸ್ತು, ಶಿಕ್ಷಣ ಅತಿ ಮುಖ್ಯ ಎಂದರು.
ಭೋವಿ ಜನಾಂಗದ ಜಿಲ್ಲಾಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ, ಭೋವಿ ಜನಾಂಗದ ಗುರುಗಳಾದ ಸಿದ್ದರಾಮೇಶ್ವರರ ಜಯಂತಿಯನ್ನು ಈ ಮುಂದೆ ಬೆಂಗಳೂರಿನಲ್ಲಿ ಮಾತ್ರ ಸರ್ಕಾರ ಆಚರಿಸುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ರಾಜ್ಯ ಸರ್ಕಾರ ಸಿದ್ದರಾಮೇಶ್ವರರ ಜಯಂತಿಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಿ ಆದೇಶ ಹೊರಡಿಸಿರುವುದು ಸಂತಸವನ್ನುಂಟು ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು.
ಸರ್ಕಾರ ಸಿದ್ದರಾಮೇಶ್ವರರ ಜಯಂತಿಗಾಗಿ ನೀಡುವ ಅನುದಾನವನ್ನು ಅನಗತ್ಯವಾಗಿ ವೆಚ್ಚ ಮಾಡುವ ಬದಲು ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವುದು ಸೂಕ್ತವೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ನೀಡಿದ ಸಲಹೆ ಮೇರೆಗೆ ಕಳೆದ ವರ್ಷ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.
ಹರಿಕಥ ವಿದ್ವಾನ್ ಜ್ಞಾನಮೂರ್ತಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸಪಟ್, ಭೋವಿ ಜನಾಂಗದ ಮುಖಂಡ ಶ್ರೀಕೃಷ್ಣ, ಜಿಪಂ ಉಪ ಕಾರ್ಯದರ್ಶಿ ಬದನೂರು, ಡಾ. ಶಿವಣ್ಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಇದ್ದರು. ಗೋವಿಂದಪ್ಪ ನಿರೂಪಿಸಿ, ಜಿಲ್ಲಾಧಿಕಾರಿ ಡಿ.ಕೆ.ರವಿ ವಂದಿಸಿದರು.
ಸಿದ್ದರಾಮೇಶ್ವರರ ಕೊಡುಗೆ ಅಪಾರ
ಚಿಂತಾಮಣಿ: ಸಮಾಜಕ್ಕೆ ಸಿದ್ದರಾಮೇಶ್ವರರ ಕೊಡುಗೆ ಅಪಾರವಾದುದು ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ನಗರದ ಗುರುಭವನ ಆವರಣ ಮುಂಭಾಗದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿ, ರಾಜ ಮಹಾರಾಜರ ಕಾಲದಿಂದಲೂ ಶ್ರಮ ಜೀವಿಗಳಾದ ಬೋವಿ ಸಮುದಾಯದವರು ಕಲ್ಲು ಬಂಡೆಯನ್ನೇ ನಂಬಿ ಸಮಾಜಕ್ಕೆ ಉತ್ತಮವಾದ ಗುಡಿ ಗೋಪುರ ಹಾಗೂ ಕೆರೆಕುಂಟೆಗಳನ್ನು ನಿರ್ಮಿಸಿ ಕೊಟ್ಟ ಕೀರ್ತಿ ಪಡೆದಿದ್ದಾರೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಮಾತನಾಡಿ, ಸಿದ್ದರಾಮೇಶ್ವರ ದೇಶದ ಮಹಾನ್ ವ್ಯಕ್ತಿ, ಸಮಾಜದ ಅಸ್ಪೃಶ್ಯತೆ ಹೋಗಲಾಡಿಸಲು ತನ್ನ ವಚನ, ಕವಿತೆಗಳ ಮುಖಾಂತರ ಜನ ಜಾಗೃತಿ ಮೂಡಿಸಲು ಪ್ರಮುಖ ಪಾತ್ರ ವಹಿಸಿರುವುದಾಗಿ ವಿವರಿಸಿದರು. ವಕೀಲ ಗೋಪಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಸಿದ್ದರಾಮೇಶ್ವರ ಸ್ತಬ್ಧ ಚಿತ್ರಗಳಿಗೆ ತಾಪಂ ಅಧ್ಯಕ್ಷ ಗೌರಮ್ಮನಾಗೇಶ್ ಹಸಿರು ನಿಶಾನೆ ತೋರಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಬೋವಿ ಸಮುದಾಯದ ಸಾವಿರಾರು ಜನರು ಮೆರವಣಿಗೆ ನಡೆಸಿದರು. ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ, ನಗರಸಭಾ ಆಯುಕ್ತ ಚನ್ನೇಗೌಡ, ಕೃಷಿ ನಿರ್ದೇಶಕ ನಹೀಂ ಪಾಷಾ, ರೇಷ್ಮೆ ಸಹಾಯಕ ನಿರ್ದೇಶಕ ಕಾಳಪ್ಪ, ನಗರಸಭ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಡಿ. ಸಾದಪ್ಪ, ಪ್ರಕಾಶ್, ಮಂಜು ಇದ್ದರು.
ಬಂಗಾರಪೇಟೆಯಲ್ಲಿ...
ಬಂಗಾರಪೇಟೆ: ಬೋವಿ ಸಮಾಜದವರು ಶ್ರಮಜೀವಿಗಳಾಗಿದ್ದು, ಅವರು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಮಾತನಾಡಿದರು.ತಹಸೀಲ್ದಾರ್ ಉಷಾ, ತಾಪಂ ಇಒ ಕೆ.ಎಸ್. ಭಟ್, ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಸಿಡಿಪಿಒ ಸಿ.ವಿ. ರಾಮನ್, ಬೋವಿ ನೌಕರ ಸಂಘದ ಅಧ್ಯಕ್ಷ ತಿಮ್ಮಯ್ಯ, ತಾಲೂಕು ಅಧ್ಯಕ್ಷ ನಾರಾಯಣನ್, ವಿಕ್ಕಿ, ರವಿ, ಕಾಂತರಾಜ್, ರಾಮಕೃಷ್ಣಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಕಮಲಾಕರ್, ಪುರಸಭೆ ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್ ಇದ್ದರು.
ಟೇಕಲ್ನಲ್ಲಿ...
ಟೇಕಲ್: ಶ್ರೀಶೈಲ ಮಲ್ಲಿಕಾರ್ಜುನನ ಸಾಕ್ಷಾತ್ಕಾರ ಪಡೆದ ಕಾರ್ಯ ಸಾಧನೆಯನ್ನು ರಾಘವಾಂಕ ತನ್ನ ಸಿದ್ದರಾಮ ಚರಿತ್ರೆಯಲ್ಲಿ ನಿರೂಪಿಸಿದ್ದಾರೆ ಎಂದು ಕೆ.ಜಿ. ಹಳ್ಳಿ ಶಿಕ್ಷಣ ಸಂಯೋಜಕ ಮಂಜಪ್ಪ ತಿಳಿಸಿದರು. ಕೆ.ಜಿ. ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿ, ನಿರಂತರ ಆತ್ಮ ಜಾಗೃತಿ ಕರ್ಮ ಮಾರ್ಗದಲ್ಲಿ ಒಲವು ಅದರೊಡನೆ ಜ್ಞಾನ ಭಕ್ತಿಗಳ ಸಮನ್ವಯ, ಆಧ್ಯಾತ್ಮಿಕ ನಿಲುವು ಇವರ ವಚನಗಳಲ್ಲಿ ಪ್ರತಿಬಿಂಬಿತವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಕೆ.ಎಸ್. ವೆಂಕಟೇಶಪ್ಪ, ಶಿವಯೋಗಿಗಳ ವಚನಾಮೃತ ಮಾಡಿದರು. ಶಿಕ್ಷಕರಾದ ಕೆ. ಮಲ್ಲಿಕಾರ್ಜುನ್, ಟಿ.ಕೆ. ಸುರೇಶ್, ದೈಹಿಕ ಶಿಕ್ಷಕಿ ವೆಂಕಟಲಕ್ಷ್ಮಮ್ಮ, ಮುನಿರಾಜು ಇದ್ದರು.
ಮಾಲೂರಲ್ಲಿ...
ಮಾಲೂರು: ಈ ನೆಲದ ವಚನಕಾರರ ಶ್ರೇಷ್ಠತೆ, ಹಿರಿಯರ ಹೋರಾಟಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಸಮಾಜವನ್ನು ತಮ್ಮ ವಚನಗಳಿಂದ ತಿದ್ದಿದ ಶ್ರೀ ಸಿದ್ಧರಾಮೇಶ್ವರವರಂತಹ ಯೋಗಿಗಳ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ಡಾ.ಸುಧಾ ಪಾಯ್ಸ್ ಹೇಳಿದರು. ತಮ್ಮ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮಸ್ವಾಮಿ ಜಂಯತಿಯಲ್ಲಿ ಮಾತನಾಡಿದರು. ಸೋಮಶೇಖರ್, ಹನುಮಪ್ಪ, ತಾಪಂ ಸದಸ್ಯ ಎಸ್.ವಿ. ಲೋಕೇಶ್ ಮಾತನಾಡಿದರು. ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ, ಇಒ ಸಂಜೀವಪ್ಪ, ಸೈಯದ್ ಮುನೀರ್, ಸಾದಿಕ್ ಖುರೇಷಿ, ಕೃಷ್ಣಾರೆಡ್ಡಿ ಇದ್ದರು.