ವಿವೇಕಾನಂದರ ಜಯಂತಿ
ಕೋಲಾರ: ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಬೇಕಾಗುವ ರಕ್ತವನ್ನು ನೀಡಲು ಗೋಕುಲ್ ಕಾಲೇಜಿನ ವಿದ್ಯಾರ್ಥಿಗಳು ಸದಾ ಸಿದ್ಧ. ಆದರೆ, ನಮ್ಮ ವಿದ್ಯಾರ್ಥಿಗಳು ನೀಡುವಷ್ಟು ರಕ್ತವನ್ನು ಶೇಖರಣೆ ಮತ್ತು ದಾಸ್ತುನು ಮಾಡಲು ಜಿಲ್ಲಾ ರಕ್ತ ನಿಧಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಗೋಕುಲ ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಗೋಕುಲ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವು ವರ್ಷಗಳಿಂದ ವಿವೇಕಾನಂದರ ಜಯಂತಿ ಸಂದರ್ಭದಲ್ಲಿ ನಮ್ಮ ಕಾಲೇಜಿನಿಂದ ರಕ್ತದಾನ ಶಿಬಿರ ಹಮ್ಮಿಕೊಂಡು ಸಮಾಜ ಸೇವಾ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗುತ್ತಿದೆ, ನಮ್ಮಿಂದ 100ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ದಾನವಾಗಿ ನೀಡಲು ಸಿದ್ಧ. ಆದರೆ, ಶಿಬಿರವನ್ನು ಬೇಗನೆ ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳ ಶ್ರಮ ಸಾರ್ಥಕಗೊಳಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ರಾಜ್‌ಕುಮಾರ್, ರಕ್ತದಾನದ ಮಹತ್ವ ತಿಳಿಸಿದರು. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನವಾಗಿದ್ದು ಕಾಲೇಜುಗಳಲ್ಲಿ ನಡೆಯುವ ರಕ್ತದಾನ ಶಿಬಿರದಲ್ಲಿ ಸಂಗ್ರಹಣೆ ಮಾಡುವ ರಕ್ತ ಗುಣಮಟ್ಟದ್ದು ಆಗಿರುತ್ತದೆಯಲ್ಲದೆ, ಯಾವುದೇ ಸೋಂಕು ಇರುವುದಿಲ್ಲವಾದ್ದರಿಂದ ಅಗತ್ಯವಿರುವ ರೋಗಿಗಳಿಗೆ ನೀಡಲು ಸಹಾಯವಾಗುತ್ತದೆ ಎಂದರು.
ಕಾಲೇಜಿನ 52 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಶ್ರೀಗೋಕುಲ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್ ಪ್ರಾಂಶುಪಾಲ ಸಿ. ಮದನ್ ಗೊಪಾಲ್ ಹಾಗೂ ಪತ್ರಕರ್ತ ಅನಂತರಾಮ್, ಎನ್.ಎಸ್.ಎಸ್ ಅಧಿಕಾರಿ ಟಿ. ಗಂಗಾಧರ್, ಉಪನ್ಯಾಸಕ ಪ್ರಸನ್ನಕುಮಾರ್ ಇದ್ದರು.