ಶಾಶ್ವತ ನೀರಾವರಿ ಜಾರಿಗೆ ಸರ್ಕಾರಗಳ ವಿಫಲ
ಬಾಗೇಪಲ್ಲಿ: ಬಯಲು ಸೀಮೆಯ 8 ಜಿಲ್ಲೆಗಳಿಗಾಗಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲಾಗಿವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲೂಕು ಖಜಾಂಚಿ ಪಿ. ಮಂಜುನಾಥರೆಡ್ಡಿ ಆರೋಪಿಸಿದರು.
ಜ.28 ರಂದು ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಆಗ್ರಹಿಸಿ ನಡೆಯಲಿರುವ ಭಾರಿ ಪ್ರತಿಭಟನೆಗಾಗಿ ತಾಲೂಕಿನ ಕಸಬಾ ಹೋಬಳಿ ಯಲ್ಲಂಪಲ್ಲಿಯಲ್ಲಿ ಪಂಚಾಯಿತಿ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸತವಾಗಿ ಕಳೆದ 4-5 ವರ್ಷಗಳಿಂದ ಮಳೆಯಿಲ್ಲದೆ ಕ್ಷಾಮಕ್ಕೆ ತುತ್ತಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಸುಮಾರು 8 ಜಿಲ್ಲೆಗಳಿಗೆ ಡಾ. ಪರಮಶಿವಯ್ಯ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀನಮೇಷ ಎಣಿಸುತ್ತಿವೆ. ಇದರಿಂದ ಈ ಭಾಗದ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕವಾಗಿರುವ ಎತ್ತಿನ ಹೊಳೆ ಯೋಜನೆ ಜಾರಿಯಿಂದ ಎಂಟು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಕಷ್ಟ ಸಾಧ್ಯವಾ ದರೂ ಮೊಯಿಲಿಯವರು ಈ ಯೋಜನೆಗೆ ಜ.31 ರಂದು ಶಂಕುಸ್ಥಾಪನೆ ಮಾಡುವುದಾಗಿ ಹೇಳಿರುವುದು ಹಾಸ್ಯಾಸ್ಪದ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೂ ಟೆಂಡರ್ ಕರೆದಿಲ್ಲ, ಪರಿಸರ ಇಲಾಖೆಯಿಂದ ಎನ್‌ಒಸಿ ಪಡೆದಿಲ್ಲವಾದರೂ ಯೋಜನೆಗೆ ಶಂಕುಸ್ಥಾಪನೆ ಮಾಡುತ್ತೇನೆ ಎಂದು ಹೇಳಿರುವುದು ಅಪ್ಪಟ ಸುಳ್ಳುಗಾರ ಎಂದು ಸಾಬೀತುಪಡಿಸಿದಂತಿದೆ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಸಚಿವ ಡಾ.ಎಂ. ವೀರಪ್ಪಮೊಯಿಲಿ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಒಂದು ವೇಳೆ ಸ್ಪರ್ಧೆ ಮಾಡಿದರೆ ಅವರಿಗೆ ಈ ಭಾಗದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ನಡೆಯುತ್ತಿರುವ ಹೋರಾಟಕ್ಕೆ ಪ್ರತಿ ಹಳ್ಳಿ, ಪಟ್ಟಣಗಳಿಂದ ಮನೆಗೊಬ್ಬರಂತೆ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ತಾಲೂಕು ಕಾರ್ಯದರ್ಶಿ ಎನ್.ಎಸ್. ಚಲಪತಿ ಹಾಗೂ ವೈ.ವಿ. ಅಶ್ವತ್ಥ್ಥನಾರಾಯಣಶೆಟ್ಟಿ ಮಾತನಾಡಿದರು. ಬೂರಗಮಡುಗು ರಾಮಿರೆಡ್ಡಿ, ವರಲಕ್ಷ್ಮಮ್ಮ, ವೈ.ಬಿ. ನರಸರಾಮಪ್ಪ, ಸೋಮಶೇಖರ್‌ರೆಡ್ಡಿ, ಎಸ್.ವಿ. ಮುನಿಸ್ವಾಮಿ, ವೈ.ವಿ. ರಾಜಗೋಪಾಲ, ಲಕ್ಷ್ಮೀನಾರಾಯಣ, ಎಂ. ಶ್ರೀನಿವಾಸ್, ಬಿ.ವಿ.ನಾಗರಾಜ, ಗಂಗರಾಜು, ನಾಗರಾಜು ಇದ್ದರು.