ಶಾಶ್ವತ ನೀರಾವರಿ ಹೋರಾಟಕ್ಕೆ ಕೈ ಜೋಡಿಸಿ: ಲಕ್ಷ್ಮೀನಾರಾಯಣ
ಗುಡಿಬಂಡೆ: ಚಿಕ್ಕಬಳ್ಳಾಪುರದಲ್ಲಿ ಜ. 28ರಂದು ನಡೆಯುವ ಶಾಶ್ವತ ನೀರಾವರಿ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಮಿತಿ ತಾಲೂಕು ಕಾರ್ಯದರ್ಶಿ ಎಚ್.ಪಿ. ಲಕ್ಷ್ಮೀನಾರಾಯಣ ಕರೆ ನೀಡಿದರು.
ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದ ಪಂಚಾಯತಿ ಮಟ್ಟದ ನೀರಾವರಿ ಹೋರಾಟ ಸಭೆಯಲ್ಲಿ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆಯು ರಾಜಕೀಯ ನಾಯಕರು ಮತ್ತು ಕೇಂದ್ರ ಮಂತ್ರಿ ವೀರಪ್ಪಮೊಯ್ಲಿ ತಮ್ಮ ರಾಜಕೀಯ ಜೀವನಕ್ಕೋಸ್ಕರ ಮುಂಬರುವ ಚುನಾವಣೆಯಲ್ಲಿ ಮತಗಳಿಸುವ ಕುತಂತ್ರದಿಂದ ಸೃಷ್ಟಿ ಮಾಡಿರುವ ಒಂದು ಅವೈಜ್ಞಾನಿಕ ಯೋಜನೆಯೇ ಹೊರತು ನೀರಿನ ಸಮಸ್ಯೆ ನಿವಾರಣೆಯಲ್ಲ. ಎತ್ತಿನಹೊಳೆ ಪ್ರದೇಶದಲ್ಲಿ ವಾಸ್ತವವಾಗಿ ಕೇವಲ 8ರಿಂದ 10 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಕೇಂದ್ರ ಮಂತ್ರಿಗಳು 25 ಟಿಎಂಸಿ ನೀರು ಸಿಗುತ್ತದೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಬಯಲು ಸೀಮೆಯವರ ಹಕ್ಕಾಗಿರುವ ಕೃಷ್ಣ, ನೇತ್ರಾವತಿ, ಕುಮಾರಧ್ವಾರ, ನದಿಗಳಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುವ ಡಾ. ಪರಮಶಿವಯ್ಯ ಯೋಜನೆಯನ್ನು ಜಾರಿಗೊಳಿಸಲು ಹೋರಾಟಕ್ಕೆ ಜನತೆ ಸಿದ್ಧರಾಗಬೇಕೆಂದು ವಿನಂತಿಸಿದರು.
ಈ ವೇಳೆ ಮಾತನಾಡಿದ ಶಾಶ್ವತ ನೀರಾವರಿ ಸಮಿತಿಯ ತಾಲೂಕು ಅಧ್ಯಕ್ಷ ಎಲ್ಲೋಡು ಅಶ್ವತ್ಥರೆಡ್ಡಿ, ಈ ಸಮಸ್ಯೆ ವಿರುದ್ಧ ಪಕ್ಷಾತೀತವಾಗಿ ಹೋರಾಡಬೇಕಿದೆ. 28ರಂದು ಕನಿಷ್ಟ ಒಂದು ಲಕ್ಷ ಜನ ಭಾಗವಹಿಸುತ್ತಿದ್ದು, ನಮ್ಮ ತಾಲೂಕಿನ ರೈತ ಕೃಷಿ ಕೂಲಿ ಕಾರ್ಮಿಕರು ಯುವಜನರು ಹೆಚ್ಚಿನ ಸಂಖ್ಯೆಯ ಭಾಗವಹಿಸಬೇಕು ಎಂದು ಕರೆ ನೀಡಿದರು. ಕಡೇಹಳ್ಳಿ ಆನಂದಪ್ಪ, ವೆಂಕಟರಾಜು ಎಂ.ಎ. ಆದಿನಾರಾಯಣ, ವೆಂಕಟಶಿವಾರೆಡ್ಡಿ, ನಂಜುಡಪ್ಪ ಇದ್ದರು.