ಹಾಸ್ಟೆಲ್ ನಿರ್ಮಾಣಕ್ಕೆ ಒಂದು ಕೋಟಿ: ಶಾಸಕ ಮಂಜುನಾಥ್
ಮುಳಬಾಗಲು; ಬೋವಿ ಜನಾಂಗದ ಹಾಸ್ಟೆಲ್, ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಂದು ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು.
ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದ ಪರವಾಗಿ ನಡೆಸಿದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೋವಿ ಜನಾಂಗದವರು ತಮ್ಮ ಜನಾಂಗದ ಹಾಸ್ಟೆಲ್ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ತೋರಿಸಿದಲ್ಲಿ ಮಂಜೂರು ಮಾಡಿಸಿಕೊಡುವುದಾಗಿ, ಇಲ್ಲವಾದಲ್ಲಿ ತಾವೇ ಸ್ವಂತ ಖರ್ಚಿನಲ್ಲಿ ನಿವೇಶನ ನೀಡುವುದಾಗಿ ಹೇಳಿದರು.
ತಹಸೀಲ್ದಾರ್ ಸೋಮಶೇಖರಯ್ಯ ಮಾತನಾಡಿ, ಸಿದ್ದರಾಮೇಶ್ವರರಿಗೆ 841 ವರ್ಷಗಳ ಇತಿಹಾಸವಿದೆ ಎಂದರು. ಕೋಲಾರ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಶಾಮಿ, ವೆಂಕಟಮುನಿ, ತಾಪಂ ಉಪಾಧ್ಯಕ್ಷ ರಾಜಪ್ಪ, ಸಿ.ವಿ. ಗೋಪಾಲ್, ರಾಮಾಂಜಿ, ಅಶೋಕ್, ರಾಧಕೃಷ್ಣ, ಮುನಿರಾಜು, ವೆಂಕಟರಾಮಪ್ಪ, ಮುನಿಯಪ್ಪ ಇದ್ದರು. ಪಟ್ಟಣದಲ್ಲಿ ಸಿದ್ದರಾಮೇಶ್ವರರ ಪಲ್ಲಕ್ಕಿ ಸಂಚರಿಸಿತು.
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ 2013-14ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವರ್ಗ-1, 2ಎ, 2ಬಿ, 3ಬಿ ಹಾಗೂ ಎಸ್.ಸಿ.,ಎಸ್.ಟಿ. ವಿದ್ಯಾರ್ಥಿಗಳು ಅರ್ಜಿಗಳನ್ನು ಉಚಿತವಾಗಿ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆದು ಸಲ್ಲಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ದಂಡಾಧಿಕಾರಿಗೆ ಮನವಿ
ಚಿಂತಾಮಣಿ: ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳು ಸಮಯಕ್ಕೆ ಸರಿಯಾಗಿ ಬಾಗಿಲು ತೆರೆಯದೆ ಪಡಿತರ ಚೀಟಿದಾರರಿಗೆ ಅನ್ಯಾಯ ಮಾಡುತ್ತಿರುವುದಾಗಿ ಮಾದಿಗ ದಂಡೋರ ಹೋರಾಟ ಸಮಿತಿ ಆರೋಪಿಸಿ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿಗೆ ಮನವಿ ಸಲ್ಲಿಸಿದೆ. ಸಮಿತಿ ಜಿಲ್ಲಾಧ್ಯಕ್ಷ ಎಂ.ವಿ. ರಾಮಪ್ಪ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಂತರ ತಾಲೂಕು ದಂಡಾಧಿಕಾರಿಗೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು. ಸಮಿತಿ ಪದಾಧಿಕಾರಿಗಳಾದ ಆನೂರು ಶ್ರೀನಿವಾಸ್, ಬ್ರಾಹ್ಮಣದಿನ್ನೆ ನರಸಿಂಹ, ಮಂಜು ಇದ್ದರು.
ಚಳಿ ತಾಳಲಾರದೆ ಮಗು ಸಾವು
ಚಿಕ್ಕಬಳ್ಳಾಪುರ: ನಗರದ ಕಂದವಾರ ಸಮೀಪ್ಟ (ಬಸಪ್ಪನ ಛತ್ರದ ನಿವಾಸಿಗಳು) ನಿರಾಶ್ರಿತರ ಗುಡಾರದಲ್ಲಿ ಚಳಿ ತಾಳಲಾರದೇ ಮಕ್ಕಳು ಸಾವನ್ನಪ್ಪುವುದು ಮುಂದುವರೆದಿದೆ.
ಸೋಮವಾರ ರಾತ್ರಿ ಚಳಿ ತಾಳಲಾರದೇ ಶಂಕರ ಮತ್ತು ಪದ್ಮ ದಂಪತಿಗಳ ಒಂದೂವರೆ ವರ್ಷದ ಹೆಣ್ಣು ಮಗು ಜನನಿ ಮೃತಪಟ್ಟಿದ್ದು ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಗರದ ಬಸಪ್ಪನ ಛತ್ರದಲ್ಲಿ ಕಳೆದ ಅನೇಕ ದಶಕಗಳಿಂದಲೂ ವಾಸ ಮಾಡಿಕೊಂಡು ಬಂದಿದ್ದ ನಿವಾಸಿಗಳನ್ನು ನಗರಸಭೆಯ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂಬ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿತ್ತು. ಏಕಾಏಕಿ ನಮ್ಮ ಮನೆಗಳನ್ನು ಖಾಲಿ ಮಾಡಿಸುತ್ತಿರುವುದರಿಂದ ಕೂಲಿ ಕಾರ್ಮಿಕರಾದ ನಾವು ಬೀದಿಪಾಲಾಗುತ್ತೇವೆ ಎಂದು ನಿವಾಸಿಗಳು ಅಳಲು ತೋಡಿಕೊಂಡಾಗ ಜಿಲ್ಲಾಡಳಿತ ನಗರದ ಹೊರ ವಲಯದಲ್ಲಿರುವ ಕಂದವಾರ ಸಮೀಪ ವಾಸಿಸಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ ಕೊಟ್ಟಿತ್ತು. ಅಲ್ಲದೇ ಮನೆಗಳನ್ನು ಕಳೆದುಕೊಂಡಿರುವವರಿಗೆ ಪುನರ್ ವಸತಿ ಕಲ್ಪಿಸಲಾಗುವುದೆಂಬ ಭರವಸೆಯನ್ನು ನೀಡಿತ್ತು. ಆದರೆ, ಶೆಡ್ಗಳನ್ನು ನಿರ್ಮಾಣ ಮಾಡಿಕೊಟ್ಟ ಮೇಲೆ ಇಲ್ಲಿನ ನಿವಾಸಿಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೂಲ ಸೌಕರ್ಯಗಳನ್ನು ಒದಗಿಸುವ ಗೋಜಿಗೆ ಹೋಗಿಲ್ಲ. ಇದೀಗ ಚಳಿ ಇಲ್ಲಿನವರ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಎರಡ್ಮೂರು ತಿಂಗಳಲ್ಲಿ ಮೂರು ವರ್ಷದೊಳಗಿನ 12 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಡಿ.16 ರಂದು ಆಯಿಷಾರವರ ಮಗ ಜಬೀ(4 ತಿಂಗಳು) ಮೃತಪಟ್ಟಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಮಿತ್ರಣ್ಣ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದ್ದರು. ಮಗುವಿನ ಶವಪರೀಕ್ಷೆ ನಡೆಸಿ ಚಳಿಗೆ ಮಗು ಸಾವನ್ನಪ್ಪಿದೆ ಎನ್ನುವುದನ್ನು ದೃಢಪಡಿಸಬೇಕಾಗಿದೆ ಎಂದು ತಿಳಿಸಿದ್ದರು. ಆದರೆ, ನಂತರ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಇದೀಗ ಕೂಲಿ ಕೆಲಸ ಮಾಡುವ ಶಂಕರ ಮತ್ತು ಪದ್ಮ ದಂಪತಿಗಳು ತಮ್ಮ ಒಂದೂ ವರೆ ವರ್ಷದ ಮಗುವನ್ನು ಕಳೆದುಕೊಂಡಿದ್ದಾರೆ.
ವಕ್ಕಲೇರಿ ಗಂಗಾಪುರದಲ್ಲಿ ಸಂಕ್ರಾಂತಿ ಸಂಭ್ರಮ
ಕೋಲಾರ:ತಾಲೂಕಿನ ವಕ್ಕಲೇರಿ ಗಂಗಾಪುರ ಗೇಟ್ನಲ್ಲಿ ನಿರ್ಮಾಣಗೊಂಡಿರುವ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಕರಸಂಕ್ರಾಂತಿ ಅಂಗವಾಗಿ ಜ.14 ರಿಂದ ವಿಶೇಷ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜ.14 ರಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎನ್.ಆರ್. ಜ್ಞಾನಮೂರ್ತಿ ಅವರಿಂದ ಶಿವಕಥಾಕಾಲಕ್ಷೇಪ ಹಾಗೂ ರಾತ್ರಿ 9 ಗಂಟೆಗೆ ಕೋರಮಂಗಲ ನಾರಾಯಣರೆಡ್ಡಿ ತಂಡದಿಂದ ಸುಂದರಕಾಂಡ ನಾಟಕವನ್ನು ಏರ್ಪಡಿಸಲಾಗಿದೆ.
ಜ.15 ರ ಸಂಕ್ರಾಂತಿಯಂದು ಬೆಳಗ್ಗೆ 5 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಸ್ವಾಮಿಗೆ ಗ್ರಾಮಸ್ಥರಿಂದ ದೀಪಾರಾಧನೆ ಸೇವೆ ಇದೆ ಎಂದು ಪ್ರಧಾನ ಅರ್ಚಕ ಚಂದ್ರಶೇಖರ ದೀಕ್ಷಿತ್ ತಿಳಿಸಿದ್ದಾರೆ.
ಹಳೆ ದ್ವೇಷ: ದ್ರಾಕ್ಷಿ ಬೆಳೆ ನಾಶ
ಬಾಗೇಪಲ್ಲಿ: ಹಳೆಯ ದ್ವೇಷದಿಂದ ದ್ರಾಕ್ಷಿ ತೋಟವನ್ನು ಮಚ್ಚಿನಿಂದ ಕಡಿದು ನಾಶಗೊಳಿಸಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಶಂಖಂವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಶಂಖಂವಾರಿಪಲ್ಲಿ ಗ್ರಾಮದ ಸರ್ವೆನಂ.19/2ರಲ್ಲಿ ನಾರಾಯಣಮ್ಮ ಎಂಬವರಿಗೆ ಸೇರಿದ ಸುಮಾರು 1 ಎಕರೆ 33 ಗುಂಟೆ ಜಮೀನಿನಲ್ಲಿ ಬ್ಯಾಂಕಿನಿಂದ ಸಾಲ ಪಡೆದು ದ್ರಾಕ್ಷಿ ಬೆಳೆಯಲಾಗಿತ್ತು. ಭಾನುವಾರ ರಾತ್ರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮನರಂಜನೆ ಕಾರ್ಯಕ್ರಮಕ್ಕೆ ತೋಟದ ಮಾಲೀಕರು ಹೋಗಿದ್ದಾಗ ದುಷ್ಕರ್ಮಿಗಳು ಬೆಳೆ ನಾಶಪಡಿಸಿದ್ದು ಗ್ರಾಮದ ವೆಂಕಟನಾರಾಯಣ, ವೆಂಕಟರಾಮರೆಡ್ಡಿ, ಶಿವಾರೆಡ್ಡಿ, ಮದ್ದೀರೆಡ್ಡಿ, ನಾರಾಯಣಸ್ವಾಮಿ ವಿರುದ್ಧ ತೋಟದ ಮಾಲೀಕರು ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಯಲ್ ವಿದ್ಯಾಸಂಸ್ಥೆ ರಜತ ಮಹೋತ್ಸವ
ಚಿಂತಾಮಣಿ: ರಾಯಲ್ ವಿದ್ಯಾಸಂಸ್ಥೆ ಹಳ್ಳಿಯಿಂದ ನಗರ ಪ್ರದೇಶದ ವರೆಗೂ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಿಲ್ಲಾಧಿಕಾರಿ ಎಂ. ನರಸಿಂಹರಾಜು ಕರೆ ನೀಡಿದರು.
ನಗರದ ರಾಯಲ್ ವಿದ್ಯಾಸಂಸ್ಥೆಯ ಆವರಣದಲ್ಲಿ ರಜಿತ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಎಂ. ಮಹೇಶ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪುಣೆಯ ತೆರಿಗೆ ಇಲಾಖೆಯ ಜಿಲ್ಲಾಧಿಕಾರಿ ಸುಭಾಷ್ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುಟಾಣಿಗಳ ನೃತ್ಯ ಹಾಗೂ ವೇಷಭೂಷಣಗಳು ನೋಡುಗರ ಮನ ಸೆಳೆದವು. ಸಂಸ್ಥೆಯ ಅಧ್ಯಕ್ಷ ಕೆ. ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ, ಮುಖ್ಯಶಿಕ್ಷಕಿ ಪ್ರೇಮಲತಾ, ಶಿಕ್ಷಕರಾದ ಶಿ.ಮು. ಮಂಜುನಾಥ್, ನಾಗಾರ್ಜುನ್ರೆಡ್ಡಿ, ಗೋವಿಂದ್ ಇದ್ದರು.ರೆಡ್ಡಪ್ಪ ನಿಧನಕ್ಕೆ ಸಂತಾಪ
ಕೋಲಾರ: ಶ್ರೀನಿವಾಸಪುರ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ರಮೇಶ್ ಕುಮಾರ್ ಅವರ ಬಲಗೈ ಭಂಟ ರೆಡ್ಡಪ್ಪ ನಿಧನಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮರಾಜ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಪಂ ಸದಸ್ಯರಾಗಿ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೆಡ್ಡಪ್ಪನವರು ಕೋಲಾರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತಮಗೆ ಸಹಪಾಠಿಯಾಗಿದ್ದರು ಎಂದು ರಾಮರಾಜ್ ಸ್ಮರಿಸಿಕೊಂಡಿದ್ದಾರೆ. ಎಂಎ ಪದವಿಧರರಾಗಿದ್ದ ರೆಡ್ಡಪ್ಪ ನಿಧನದಿಂದ ತಾವು ಹಳೆಯ ಮಿತ್ರರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಂಕ್ರಾಂತಿ ಕವಿಗೋಷ್ಠಿ
ಚಿಂತಾಮಣಿ; ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರದಲ್ಲಿ ಶಿಕ್ಷಕ ಎಸ್.ಸಿ. ಶ್ರೀನಿವಾಸರೆಡ್ಡಿ ಅವರ ಪ್ರಾಯೋಜಕ ಜನವರಿ 19 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಮಹಾತ್ಮಗಾಂಧಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಉಭಯ ಜಿಲ್ಲೆಗಳ ಎಲ್ಲಾ ಆಸಕ್ತ ಕವಿಗಳು, ಕಾವ್ಯಾಸಕ್ತರು ಹಾಗೂ ಕನ್ನಡ ಪ್ರೇಮಿಗಳು ಸಕಾಲಕ್ಕೆ ಹಾಜರಾಗಿ ಸಹಕರಿಸಬೇಕೆಂದು, ವಿವರಗಳಿಗೆ ಮೊ-9738828561 ಗೆ ಸಂಪರ್ಕಿಸಬಹುದೆಂದು ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಕೆ.ಎಸ್. ನೂರುಲ್ಲಾ ತಿಳಿಸಿದ್ದಾರೆ.
16 ರಂದು ನೂತನ ಕಟ್ಟಡ ಉದ್ಘಾಟನೆ
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಯಗವ ಕೋಟೆ ಗ್ರಾಮದಲ್ಲಿ ಜ.16 ರಂದು ಬೆಳಿಗ್ಗೆ 10.30 ಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು ಶಾಸಕ ಎಂ. ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮುಂತಾದವರು ಭಾಗವಹಿಸಲಿದ್ದಾರೆ.
ಕ್ರೀಡಾಪಟುಗಳ ಆಯ್ಕೆ
ಚಿಕ್ಕಬಳ್ಳಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸುವ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2013-14ನೇ ಸಾಲಿನಲ್ಲಿ ಜಿಲ್ಲಾ ಕ್ರೀಡಾಪಟುಗಳ ಆಯ್ಕೆ ಮಾಡಲಾಗುತ್ತಿದೆ. ಬ್ಯಾಸ್ಕೆಟ್ಬಾಲ್, ಫುಟ್ಬಾಲ್, ಹಾಕಿ, ಸೈಕ್ಲಿಂಗ್, ವಾಲಿಬಾಲ್, ಜೂಡೋ, ಕುಸ್ತಿ, ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಅರ್ಹರಾದವರನ್ನು ಆಯ್ಕೆ ಮಾಡಲಾಗುವುದು. ಆಸಕ್ತ ಕ್ರೀಡಾ ಪಟುಗಳು ಜ.17 ಶಿಡ್ಲಘಟ್ಟ ನೆಹರೂ ಕ್ರೀಡಾಂಗಣ, ಜ.20 ಚಿಂತಾಮಣಿ ಝಾನ್ಸಿರಾಣಿ ಲಕ್ಷ್ಮೀ ಬಾಯಿ ಕ್ರೀಡಾಂಗಣ, ಜ. 21 ಗೌರಿಬಿದನೂರಿನ ಆಚಾರ್ಯ ಕಾಲೇಜು ಮೈದಾನ, ಜ.22 ರಂದು ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಜ.23 ರಂದು ಬಾಗೇಪಲ್ಲಿ ತಾಲೂಕು ಕ್ರೀಡಾಂಗಣ, ಜ. 24 ರಂದು ಚಿಕ್ಕಬಳ್ಳಾಪುರ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣಕ್ಕೆ ಬೆಳಿಗ್ಗೆ 11 ಗಂಟೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.