ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಈದ್ ಮಿಲಾದ್ ಸಂಭ್ರಮ

Vishwanath S
Updated On : 15 Jan 2014, 1:05 am

ಚಿಕ್ಕಬಳ್ಳಾಪುರ: ಪ್ರವಾದಿ ಮಹಮದ್ ಪೈಗಂಬರ್ ಹುಟ್ಟುಹಬ್ಬದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮಿಲಾದ್ ಕಮಿಟಿಯ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಟೌನ್‌ಹಾಲ್ ಬಳಿಯಿರುವ ಜಾಮೀಯಾ ಮಸೀದಿಯಿಂದ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ಹೊರಟರು. ವಿವಿಧ ಘೋಷಣೆಗಳನ್ನು ಕೂಗುತ್ತಾ ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಎಂ.ಜಿ. ರಸ್ತೆ ಮೂಲಕ ಸಾಗಿ ಪ್ರಶಾಂತನಗರಲ್ಲಿದಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಇಸ್ಲಾಂ ಧರ್ಮಗುರುಗಳು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಪ್ರವಚನವನ್ನು ನೀಡಿದರು.
ಹಣ್ಣುಹಂಪಲು ವಿತರಣೆ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅಲ್ ಇಂಡಿಯಾ ಮಿಲ್ಲಿ ಕೌಂಸಿಲ್-ಕರ್ನಾಟಕ ವತಿಯಿಂದ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
    ಈ ಸಂದರ್ಭದಲ್ಲಿ ಅಲ್ ಇಂಡಿಯಾ ಮಿಲ್ಲಿ ಕೌಂಸಿಲ್-ಕರ್ನಾಟಕದ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಅಮಾನ್ವುಲ್ಲಾ, ಮಿಲಾದ್ ಕಮಿಟಿಯ ಅಧ್ಯಕ್ಷ ಸಿರಾಜುಲ್ಲಾ ಷರೀಫ್, ಕಾರ್ಯದರ್ಶಿ ಅಯೂಬ್ ಪಾಷಾ, ಗುಲ್ತಾಸ್ ಪಾಷಾ ಹಾಗೂ ಮತ್ತಿತರರಿದ್ದರು.
ಸಡಗರದ ಈದ್ ಆಚರಣೆ
ಕೋಲಾರ: ಮುಸ್ಲಿಮ್‌ರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್‌ಮಿಲಾದ್ ಪ್ರಯುಕ್ತ ನಗರದಲ್ಲಿ ಮಂಗಳವಾರ ಬೃಹತ್ ಮೆರವಣಿಗೆ ನಡೆಯಿತು. ನಗರದ ಕ್ಲಾಕ್ ಟವರ್ ಬಳಿಯಿಂದ ಮುಸ್ಲಿಮರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಂಜುಮನ್ ಇಸ್ಲಾಮಿಯಾ ಸಂಸ್ಥೆಯ ಬಳಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಚಂಪಕ್ ವೃತ್ತದ ಬಳಿ ಮಹಮ್ಮದ್ ಪೈಗಂಬರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ನಿಸಾರ್ ಅಹಮ್ಮದ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮೌಲ್ವಿಗಳಾದ ಷಾ ಗಾಲ್ಬಿ ವಾಹೀದ್ ಮಹಮ್ಮದ್ ಪೈಗಂಬರ್ ಅವರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು.
ವರದಕ್ಷಿಣೆ ಕಿರುಕುಳ; ಪ್ರಕರಣ ದಾಖಲು
ಕೆಜಿಎಫ್: ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ಬೇರೆ ಮದುವೆ ಮಾಡಿಕೊಂಡು ತಮಗೆ ವಂಚಿಸಿರುವುದಾಗಿ ಪತ್ನಿ ದೂರು ನೀಡಿರುವ ಘಟನೆ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂಪಿಯನ್‌ರೀಫ್ ವ್ಯಾಪ್ತಿಯ ಇಂಗ್ಲಿಷ್ ವೈಟ್‌ಹೌಸ್ ಬಡಾವಣೆಯ ನಿವಾಸಿ ಸೂರ್ಯ ಎಂಬವರು ಬೆಂಗಳೂರಿನ ಐಟಿಸಿ ಕಾಲೋನಿ ಜೀವನಹಳ್ಳಿ ನಿವಾಸಿ ಚಾರ್ಲೆಸ್‌ಬಾಬು ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು.ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ 10 ಸವರನ್ ಚಿನ್ನದ ಒಡವೆಗಳು, 65 ಸಾವಿರ ನಗದು ಸೇರಿದಂತೆ ಮನೆಗೆ ಬೇಕಾದ ಸಾಮಾಗ್ರಿಗಳನ್ನು ನೀಡಲಾಗಿತ್ತು. ಮದುವೆಯಾದ ಕೆಲ ತಿಂಗಳು ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ನಂತರ ವರದಕ್ಷಿಣೆ ತರುವಂತೆ ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ ಪತ್ನಿ ಸೂರ್ಯಳನ್ನು ತವರು ಮನೆಗೆ ಕಳುಹಿಸಿದ ಪತಿ ಚಾರ್ಲೆಸ್‌ಬಾಬು ಆಕೆಯ ಪೊಷಕರ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ತನ್ನ ಪತಿ ಚಾರ್ಲೆಲ್‌ಬಾಬು ಶೀಲಾ ಎಂಬುವರೊಂದಿಗೆ ಬೇರೆ ಮದುವೆಯಾಗಿದ್ದಾರೆ ಎಂದು ಸೂರ್ಯ ಚಾಂಪಿಯನ್‌ರೀಫ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆಯಂಗಳದಲ್ಲಿ ಕವಿಗೋಷ್ಠಿ
ಚಿಕ್ಕಬಳ್ಳಾಪುರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ನಾಗಭೂಷಣರೆಡ್ಡಿ ಅವರ ಪದ್ಮ ಸಿರಿ ನಿಲಯದಲ್ಲಿ ಜ.15 ರಂದು ಮಧ್ಯಾಹ್ನ 2.30ಕ್ಕೆ ಮನೆಯಂಗಳದಲ್ಲಿ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಉಪಾಧ್ಯಕ್ಷ ನಾಗಭೂಷಣರೆಡ್ಡಿ ವಹಿಸಲಿದ್ದು ನಂದಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮೈಲಾರಪ್ಪ ಉದ್ಘಾಟಿಸಲಿದ್ದಾರೆ. ರೆಡ್ಡಿಗೊಲ್ಲವಾರಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಚನ್ನಮಲ್ಲಿಕಾರ್ಜುನಯ್ಯ ಆದಿಕವಿ ಪಂಪನ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಾಲು ಸಮೇತ ಕಳವು ಆರೋಪಿ ಬಂಧನ
ಚಿಂತಾಮಣಿ: ಪೊಲೀಸರು ರಾತ್ರಿ ಗಸ್ತಿನಲ್ಲಿ ತಿರುಗುತ್ತಿರುವಾಗ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಓಡಲು ಯತ್ನಿಸಿದಾಗ ಇನ್ಸೆಪೆಕ್ಟರ್ ರಾಘವೇಂದ್ರ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಆತನನ್ನು ಮಾಲು ಸಮೇತ ಬಂಧಿಸಲಾಯಿತು. ತಾಲೂಕಿನ ದೊಡ್ಡಕೊಂಡಹಳ್ಳಿ ಗ್ರಾಮದಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಜೀಪ್‌ನಲ್ಲಿ ಗಸ್ತು ತಿರುಗುತ್ತಿರುವಾಗ ಇದೇ ಗ್ರಾಮದ ಮುನಿವೆಂಕಟಪ್ಪ ಎಂಬಾತನು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದನು. ಆಗ ತಕ್ಷಣ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೈವಾರ ಗ್ರಾಮದ ಕೃಷ್ಣಪ್ಪ ಎಂಬವರ ತೋಟದಲ್ಲಿ ಪಂಪು, ಮೋಟಾರ್, ಪಿವಿಸಿ ಪೈಪ್ ಸೇರಿದಂತೆ ಇತರೆ ಸಲಕರಣೆಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಒಟ್ಟು ಮೌಲ್ಯ 25 ಸಾವಿರ ಎಂದು ಮಾಲೀಕ ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ಮಾಲು ಸಮೇತ ಬಂಧಿಸಿ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೀವನದಲ್ಲಿ ಜಿಗುಪ್ಸೆ: ಮಹಿಳೆಯರಿಬ್ಬರ ಆತ್ಮಹತ್ಯೆ ಯತ್ನ
ಚಿಂತಾಮಣಿ: 2 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಮಹಿಳೆಯರಿಬ್ಬರು ಜೀವನದಲ್ಲಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಗರ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಚಿಲಕಲನೇರ್ಪು ಹೋಬಳಿ ಬಿದಲಹಳ್ಳಿ ಗ್ರಾಮದ ಶೈಲಜಾ ಎಂಬಾಕೆ ಜೀವನದಲ್ಲಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಈಕೆಯನ್ನು ತಕ್ಷಣ ನೆರೆಹೊರೆಯರ ಸಹಾಯದೊಂದಿಗೆ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲುಪಡಿಸಿರುವುದಾಗಿ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಗ್ರೂಪ್ ಫೋಟೋ ತಿರಸ್ಕರಿಸಿದ ಮಹಿಳೆ ಆತ್ಮಹತ್ಯೆಗೆ ಯತ್ನ...
ನಗರದ ತಪತೇಶ್ವರ ಕಾಲೋನಿ ನಿವಾಸಿ ಆದಿಲಕ್ಷ್ಮಮ್ಮ ಗಂಡ ಗ್ರೂಪ್ ಫೋಟೋ ತೆಗೆಯಲು ಒತ್ತಾಯಿಸಿದಾಗ ಇದನ್ನು ನಿರಾಕರಿಸಿ ಕ್ರಿಮಿ ಕೀಟಗಳಿಗೆ ಸಿಂಪಡಿಸುವ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಈಕೆಯನ್ನು ತಕ್ಷಣ ಸಂಬಂಧಿಕರು ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಆದಿ ಜಾಂಬವಂತನ ಕ್ಯಾಲೆಂಡರ್ ಬಿಡುಗಡೆ
ಚಿಂತಾಮಣಿ: ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಆದಿ ಜಾಂಬವಂತ ಜಯಂತಿ ಮತ್ತು ಆದಿ ಜಾಂಬವಂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ನೂರಾರು ಜನರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಆದಿ ಜಾಂಬವಂತ ಸ್ತಬ್ಧಚಿತ್ರಗಳಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ. ವೆಂಕಟರವಣಪ್ಪ ಹಸಿರು ನಿಶಾನೆ ತೋರಿಸಿದರು. ನಗರದ ತಾಲೂಕು ಕಚೇರಿ ಮುಖಾಂತರ ಜೋಡಿರಸ್ತೆ, ಯೋಗಿನಾರಾಯಣ ವೃತ್ತ, ಮಾರುತಿ ಸರ್ಕಲ್, ಗಜಾನನ ವೃತ್ತ, ಪಿಸಿಆರ್ ಕಾಂಪ್ಲೆಕ್ಸ್ ವೃತ್ತ, ಚೇಳೂರು ವೃತ್ತ ಸೇರಿದಂತೆ ಇನ್ನೂ ಪ್ರಮುಖ ಬೀದಿಗಳಲ್ಲಿ ನೂರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ. ಕೃಷ್ಣಪ್ಪ, ತಿಮ್ಮಸಂದ್ರ ಸುಬ್ಬಣ್ಣ, ಗ್ಯಾಸ್ ಶ್ರೀನಿವಾಸ್, ಬುಲೆಟ್ ರಮೇಶ್, ಈರಪ್ಪಲ್ಲಿ ನಾಗರಾಜ್, ಕೋನಪ್ಪಲ್ಲಿ ಕೋದಂಡಪ್ಪ ಸೇರಿದಂತೆ ಇನ್ನೂ ಹಲವು ಮುಖಂಡರು, ನೂರಾರು ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಸಕರಿಗೆ ಪುಣೆಯಲ್ಲಿ ಸನ್ಮಾನ
ಮುಳಬಾಗಲು: ಇಂಡಿಯನ್ ಸ್ಟೂಡೆಂಟ್ ಪಾರ್ಲಿಮೆಂಟ್ ಸಮಾವೇಶದಲ್ಲಿ ದೇಶದ ಇಬ್ಬರು ಶಾಸಕರನ್ನು ಸನ್ಮಾನಕ್ಕೆ ಆಯ್ಕೆಯಾಗಿದ್ದು, ಮುಳಬಾಗಲು ಕ್ಷೇತ್ರದ ಕೊತ್ತೂರು ಜಿ. ಮಂಜುನಾಥ್ ಮತ್ತು ಗೋವಾ ರಾಜ್ಯದ ಮೋಹನ್ ಕೌಂಟೆ ಭಾಜನರಾಗಿದ್ದಾರೆ.ಕೊತ್ತೂರು ಮಂಜುನಾಥ್ ಅವರು ತಳ ಸಮುದಾಯಕ್ಕೆ ಸೇರಿದ, ಸಮಾಜ ಸೇವೆಯ ಮೂಲಕ ವಿಧಾನಸಭೆಗೆ ಪ್ರವೇಶಮಾಡಿ ರಾಷ್ಚೀಯ ಯುವ ಪ್ರಶಸ್ತಿಗೆ ಭಜನರಾಗಿದ್ದಾರೆ. ಸನ್ಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಂ. ವೆಂಕಯ್ಯನಾಯುಡು, ಪುಣೆ  ಮುಖ್ಯಸ್ಥ ರಾಹುಲ್ ಭಾಗವಹಿಸಿದ್ದರು.
ಕೆಜಿಎಫ್‌ನಲ್ಲಿ ಅದ್ಧೂರಿ ಪೊಂಗಲ್ ಹಬ್ಬ ಆಚರಣೆ
ಕೆಜಿಎಫ್: ಕೆಜಿಎಫ್‌ನಲ್ಲಿ ತಮಿಳು ಭಾಷಿಗರ ಪೊಂಗಲ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ವಿವಿಧ ಬಡಾವಣೆಗಳ ತಮಿಳು ಹಾಗೂ ಕನ್ನಡ ಭಾಷೆಯವರು ಒಟ್ಟಾಗಿ ಆಚರಿಸಿದ ಹಬ್ಬದಲ್ಲಿ ಸಿಹಿ ಪೊಂಗಲ್ ಮಾಡಿ ಹಂಚಿದ ಮಾಜಿ ಶಾಸಕ ವೈ. ಸಂಪಂಗಿ ನೇತೃತ್ವ ವಹಿಸಿದ್ದರು.ಕೆಜಿಎಫ್‌ನ ತಮಿಳು ಸಂಘದ ಅಧ್ಯಕ್ಷ ಕಲೈಅರಸನ್ ನೇತೃತ್ವದಲ್ಲಿ ಏರ್ಪಡಿಸಿದ್ದ ಪೊಂಗಲ್ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್. ರಾಜೇಂದ್ರನ್, ಎಂ. ಭಕ್ತವತ್ಸಲಂ, ಕೆ. ರಾಜೇಂದ್ರನ್, ನಗರಸಭಾ ಸದಸ್ಯ ದಾಸ್‌ಚಿನ್ನಸವರಿ, ವಿ. ಮುನಿಸ್ವಾಮಿ, ಕರವೇ ಜಿಲ್ಲಾ ಉಪಾಧ್ಯಕ್ಷ ವಿ.ಎಸ್. ಪ್ರಕಾಶ್ ಇದ್ದರು. ಮಳಯಾಲಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಂಗಲ್ ಹಬ್ಬದ ಆಚರಣೆಯಲ್ಲಿ ಮಹಿಳೆಯರು ಕಬ್ಬುಗಳನ್ನಿಟ್ಟು ಮಡಿಕೆಯಲ್ಲಿ ಪೊಂಗಲ್ ಹುಕ್ಕಿಸುವ ಮೂಲಕ ಸಂಭ್ರಮಾಚರಿಸಿದರು. ಈ ವೇಳೆ ಮಾಜಿ ಶಾಸಕ ವೈ. ಸಂಪಂಗಿ ನೂರಾರು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದರು. ಬಿಜೆಪಿ ನಗರಾಧ್ಯಕ್ಷ ಸುರೇಶ್‌ನಾರಾಯಣ್, ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿರೆಡ್ಡಿ, ಯಶ್ವಂತ್‌ರಾಜ್, ನಗರಸಭಾ ಸದಸ್ಯ ಎನ್. ಅಶೋಕ್, ನಟರಾಜನ್, ಸ್ಟ್ಯಾನ್ಲೀ, ಗಾಂಧಿ, ವಿಜಯಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement