ಜಿಲ್ಲಾ ವಕೀಲರ ಸಂಘಕ್ಕೆ ನೂತನ ಸಾರಥಿ
ಕೋಲಾರ: ಜಿಲ್ಲಾ ವಕೀಲರ ಸಂಘಕ್ಕೆ ಯುವ ವಕೀಲ ಎ.ವಿ. ಆನಂದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಭಾನುವಾರ ಚುನಾವಣೆ ನಡೆದು ಸಂಜೆಯೇ ಮತಗಳ ಎಣಿಕೆ ನಡೆದು, 272 ಮತಗಳನ್ನು ಪಡೆದುಕೊಂಡ ಎ.ವಿ. ಆನಂದ್ ತಮ್ಮ ಪ್ರತಿಸ್ಪರ್ಧಿ ಎಂ. ಮುನೇಗೌಡರಿಗಿಂತ 67 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
7 ಸ್ಥಾನಗಳ ಕಾರ್ಯಕಾರಿ ಸಮಿತಿಗೆ ಹತ್ತು ಮಂದಿ ಸ್ಪರ್ಧಿಸಿದ್ದು ಈ ಪೈಕಿ ಕೆ.ಎಂ. ಹರೀಶ್, ವಿ. ಶಂಕರಪ್ಪ, ಎಲ್. ಮಂಜುನಾಥ, ಎನ್.ಡಿ. ಶ್ರೀನಿವಾಸ್, ಕೆ. ಬೆಗ್ಲಿ ಮಂಜುನಾಥ್, ಟಿ. ಲಕ್ಷ್ಮೀಪತಿ, ಆರ್. ಚೌಡೇಗೌಡ ಆಯ್ಕೆಯಾಗಿದ್ದರೆ, ಉಳಿದ ಕೃಷ್ಣಮೂರ್ತಿ, ಎಸ್.ಐ. ಶಂಕರ್ ಮತ್ತು ಸುಬ್ರಮಣಿ ಪರಾಭವಗೊಂಡಿದ್ದಾರೆ.
ಇದಕ್ಕೂ ಮುನ್ನ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಸತೀಶ್, ಉಪಾಧ್ಯಕ್ಷರಾಗಿ ಪಿ. ನಂಜುಂಡೇಶ್ವರ, ಜಂಟಿ ಕಾರ್ಯದರ್ಶಿಯಾಗಿ ವೈ.ಸಿ. ಸೋಮಪ್ಪ, ಖಜಾಂಚಿಯಾಗಿ ಎಸ್.ಬಿ. ಚಂದ್ರಪ್ಪ ಮತ್ತು ಮಹಿಳಾ ಮೀಸಲು ಸದಸ್ಯರಾಗಿ ಎಂ.ವಿ. ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕೆ ವಿಶೇಷ ಪ್ರಶ್ನೆ ಪತ್ರಿಕೆ ಸಿದ್ಧ
ಕೋಲಾರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿಯಿಂದ ಎಸ್ಎಸ್ಎಲ್ಸಿ ಪಠ್ಯ ವಿಷಯಗಳ ತಲಾ 6 ಸೆಟ್ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳ ನಿರಂತರ ಅಭ್ಯಾಸಕ್ಕಾಗಿ ಸಿದ್ಧಪಡಿಸಲಾಗಿದೆ ಎಂದು ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಗುಣಾತ್ಮಕ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಇಲಾಖೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಎಲ್ಲಾ ವಿಷಯಗಳ ಈ 6 ಸೆಟ್ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದು, ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಆನ್ಲೈನ್ ವಿಳಾಸ ನೀಡಿ ಪಡೆದುಕೊಳ್ಳಬಹುದಾಗಿದೆ.
ಇದೇ ಮಾದರಿಯಲ್ಲಿ ಕಳೆದ ಮಧ್ಯವಾರ್ಷಿಕ ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ನಂತರ ವಿಜ್ಞಾನ ವಿಷಯದಲ್ಲಿನ ಹಿನ್ನಡೆ ಗಮನಿಸಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅನ್ವಾಯಿಕ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಶಾಲೆಗಳ ಮುಖ್ಯ ಶಿಕ್ಷಕರು ಪಡೆದುಕೊಂಡು ನಿರಂತರ ಅಭ್ಯಾಸದೊಂದಿಗೆ ಫಲಿತಾಂಶ ಉತ್ತಮಪಡಿಸಲು ಸಹಕರಿಸಲು ಅವರು ಕೋರಿದ್ದು, ವಿವರಳಿಗೆ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ.
ರಸ್ತೆ ತೆರವು ಮಾಡುತ್ತಿರುವ ಕಟ್ಟಡ ಮಾಲೀಕರು
ಶ್ರೀನಿವಾಸಪುರ: ಪಟ್ಟಣದಲ್ಲಿ ಹಾದುಹೋಗುವ ಹೆದ್ದಾರಿಯನ್ನು ಅತಿಕ್ರಮಿಸಿಕೊಂಡಿದ್ದವರಿಗೆ ಕಟ್ಟಡಗಳನ್ನು ತೆರುವುಗೊಳಿಸಲು ಸರ್ಕಾರ ಗಡುವು ನೀಡಿದ್ದರಿಂದ ಕಟ್ಟಡಗಳ ಮಾಲೀಕರು ಸ್ವಂತ ಖರ್ಚಿನಿಂದಲೇ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ.
ಆಂಧ್ರಪ್ರದೇಶದ ಗಡಿಭಾಗದ ಕೊತ್ತಪಲ್ಲಿಯಿಂದ ಶ್ರೀನಿವಾಸಪುರ, ಕೋಲಾರ ಹಾಗೂ ಮಾಸ್ತಿ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ಆಗಲಿಕರಣ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದುದರಿಂದ ಕಳೆದ 20 ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆ ಸಮಾಲೋಚನೆ ಸಭೆ ನಡೆಸಿ ಜ.30ರ ಒಳಗಾಗಿ ತೆರುವುಗೊಳಿಸಿದಿದ್ದರೆಸರ್ಕಾರವೇ ಮುಂದಾಗಲಿದೆ ಎಂದು ಗಡುವು ನೀಡಿದ್ದಕ್ಕೆ ಎಂಜಿ ರಸ್ತೆ ಅತಿಕ್ರಮಿಸಿಕೊಂಡಿದ್ದ ಕಟ್ಟಡಗಳ ಮಾಲೀಕರು ತೆರುವುಗೊಳಿಸುತ್ತಿದ್ದಾರೆ.
ಪರೀಕ್ಷೆಗೆ ಪೂರಕವಾಗಿ ಮಕ್ಕಳನ್ನು ತಯಾರು ಮಾಡಿ: ಶಿವಶಂಕರರೆಡ್ಡಿ
ಗೌರಿಬಿದನೂರು: ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಹೊಣೆಗಾರಿಕೆಯಿಂದ ಕೈ ತೊಳೆದುಕೊಳ್ಳದೆ, ಪರೀಕ್ಷೆಗೆ ಪೂರಕವಾಗಿ ಮಕ್ಕಳನ್ನು ತಯಾರು ಮಾಡಿ ಎಂದು ವಿಧಾನಸಭೆ ಉಪ-ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ನಡೆದ ಎಂಎಸ್ಎಸ್ ವಿದ್ಯಾ ಸಂಸ್ಥೆಗಳ 23ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸಮಾಜ ಸೇವೆಯಲ್ಲೂ ಸಂಸ್ಥೆ ತನ್ನದೆ ಆದ ಛಾಪನ್ನು ಮೂಡಿಸಿ ಸುಮಾರು 48ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿ ಅಂಧರ ಬಾಳಿಗೆ ಬೆಳಕನ್ನು ನೀಡಿದೆ ಎಂದರು. ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಮನೋಭಾವ ಬೆಳೆಸಿಕೊಳ್ಳುತ್ತಿರುವ ದಿನಗಳಲ್ಲಿ ಈ ಸಂಸ್ಥೆ ಮಕ್ಕಳಿಗೆ ಶಿಕ್ಷಣವನ್ನು ಕೊಡುವುದರ ಜೊತೆಗೆ ಸಮಾಜ ಸೇವೆ ಮಾಡಿ ಕಳಕಳಿ ವ್ಯಕ್ತಪಡಿಸಿದೆ ಎಂದು ತಹಸೀಲ್ದಾರ್ ಡಾ.ಎನ್. ಭಾಸ್ಕರ್ ತಿಳಿಸಿದರು.ವೃತ್ತ ನಿರೀಕ್ಷಕ ಕೆ. ನಾಗರಾಜ್ ಮಾತನಾಡಿ, ಸಂಸ್ಥೆ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸುವುದರ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದೆ ಎಂದು ಶ್ಲಾಘಿಸಿದರು. ವಕೀಲ ಪಠಾಣ್ ರಹಮತ್ತುಲ್ಲಾ ಮಾತನಾಡಿ, ಶಿಕ್ಷಣ ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಯ್ಯಪ್ಪರೆಡ್ಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ಪ್ರಕಾಶ್ಡ್ಡಿ ಮಾತನಾಡಿದರು.
ಮಕರ ಜ್ಯೋತಿ ಪೂಜೆ
ಮುಳಬಾಗಲು: ಪಟ್ಟಣದ ಕೆಇಬಿ ಸರ್ಕಲ್ ಬಳಿ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ಆರ್ಯ ವೈಶ್ಯ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ವಿಶೇಷ ಪೂಜೆಗಳು ಹಾಗೂ ಅನ್ನದಾನ ಕಾರ್ಯಕ್ರಮ ನಡೆಸಲಾಯಿತು.
ಅನ್ನದಾನ ಕಾರ್ಯಕ್ರಮದಲ್ಲಿ ವೈಶ್ಯ ಅಯ್ಯಪ್ಪ ಸೇವಾ ಸಮಿತಿಯ ಶ್ರೀನಿವಾಸ್, ಪ್ರದೀಪ್, ಸುಕುಮಾರ್, ರಾಮಕೃಷ್ಣ, ನರೇಶ್, ನಾಗೇಶ್, ರೋಹಿತ್ ಹಾಗೂ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.
ರಂಗೋಲಿ ಸ್ಪರ್ಧೆ; ವಿಜೇತರಿಗೆ ಬಹುಮಾನ
ಮುಳಬಾಗಲು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಹಯೋಗದಲ್ಲಿ ದಿವಂಗತ ಎನ್. ಸೋಮಶೇಖರ್ ಜ್ಞಾಪಕಾರ್ಥವಾಗಿ ಸಂಕ್ರಾಂತಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಮಂಗಳವಾರ ಬಹುಮಾನ ವಿತರಿಸಿಲಾಯಿತು. ಆರ್ಎಸ್ಎಸ್ ಮುಖಂಡ ಕೆಜಿಎಫ್ ಬೆಮಲ್ ನಗರದ ವಿಜಯ್ ಕುಮಾರ್, ಎಂ.ಎನ್. ಹಳ್ಳಿಯ ಸರ್ಕಾರಿ ಆಸ್ಪತ್ರೆಯ ಡಾ. ಸುನೀತಾ. ಕರ್ನಾಟಕ ವಿಜ್ಞಾನ ಪರಿಷತ್ ಕಾರ್ಯದರ್ಶಿ ಮಂಜುಳಾ ಭಾಗವಹಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾಗ ಶ್ವೇತಾ, ಪ್ರಮೀಳಾ, ಸುರೇಖಾ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು. ಭಾಗವಹಿಸಿದ್ದ ಪ್ರತಿಯೊಬ್ಪರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಭಾಗವಹಿಸಿದ್ದರು.
ಗುಡಿಪಲ್ಲಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ
ಮುಳಬಾಗಲು: ಗುಡಿಪಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ ವಿರುದ್ಧ 10 ಮತಗಳ ಹಾಗೂ ಪರವಾಗಿ 4 ಮತಗಳು ಬಂದು ಅವರು ಸೋಮವಾರ ನಡೆದ ಅವಿಶ್ವಾಸ ಮಂಡನೆ ಸಭೆಯಲ್ಲಿ ಅಧಿಕಾರ ಕಳೆದುಕೊಂಡರು. ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡನೆ ಗೊತ್ತುವಳಿ ಮಂಡಿಸಿದಾಗ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದರು.
ಟ್ರಾನ್ಸ್ಫಾರ್ಮರ್ ಕೊರತೆ ಜನರ ಪರದಾಟ
ಶಿಡ್ಲಘಟ್ಟ: ಮನೆಗಳಿಗೆ ಅಳವಡಿಸಿದ್ದ ಟ್ರಾನ್ಸ್ಫಾರ್ಮರ್ನ್ನು ಕಿತ್ತುಕೊಂಡು ಹೋಗಿರುವುದರಿಂದ ಕಳೆದ ಹತ್ತು ದಿನಗಳಿಂದ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.ತಾಲೂಕಿನ ದೊಡ್ಡತೇಕಹಳ್ಳಿಯ ದಲಿತರ ಕಾಲೋನಿಯಲ್ಲಿದ್ದ ಟ್ರಾನ್ಸ್ಫಾರ್ಮರ್ನ್ನು ಕಿತ್ತುಕೊಂಡು ಹೋಗಿದ್ದು, ರಾತ್ರಿ ವೇಳೆ ಮನೆಯ ಹೊರಗೆ ಬರಲು ಭಯದ ವಾತಾವರಣ ನಿರ್ಮಾಣವಾಗಿದೆ.ಇಲ್ಲಿ ದಲಿತರ 200 ಮನೆಗಳಿದ್ದು, ಕೇವಲ 15 ಮನೆಗಳಿಗೆ ಮಾತ್ರ ಶೌಚಾಲಯಗಳಿವೆ, ಗ್ರಾಪಂ ಕಾರ್ಯದರ್ಶಿ ಕಚೇರಿಗೆ ಬರುತ್ತಿಲ್ಲ, ಇದರಿಂದಾಗಿ ಜನರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಬದುಕಬೇಕಾಗಿದೆ, ನರೇಗಾ ಯೋಜನೆಯಲ್ಲಿ ಕೆಲಸ ನೀಡುವಂತೆ ಪಂಚಾಯ್ತಿಯಲ್ಲಿ ಕೇಳಿದರೂ ಕೆಲಸವನ್ನು ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.
ಕವಿಗೋಷ್ಠಿ
ಕೆಜಿಎಫ್: ಕವನಗಳು ಹೊಸ ತಲೆಮಾರಿನ ಹೊಸ ದ್ವನಿ ಸೂಚಿಸುವಂತಿರಬೇಕು ಎಂದು ಬಸವನಗುಡಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಚ್.ಎಸ್. ಸತ್ಯನಾರಾಯಣ ಹೇಳಿದರು. ಸ್ವಾಮಿ ವಿವೇಕಾನಂದರ 151ನೇ ಜನ್ಮದಿನಾಚರಣೆ ಪ್ರಯುಕ್ತ ಕೆಜಿಎಫ್ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಂಘದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಭಾವನೆಗಳು ಕವಿಯನ್ನು ಕಾಡುತ್ತಿರಬೇಕು. ಹೇಳಲೇ ಬೇಕೆಂಬ ಒತ್ತಡ ಅದನ್ನು ಅಭಿವೃದ್ಧಿ ಪಡಿಸಲು ಸೂಕ್ತ ಪದ ಪುಂಜಗಳು ಕೂಡಿದಾಗ ಉತ್ತಮ ಕವಿತೆ ಮೂಡಿಬರುತ್ತದೆ ಎಂದರು.
ಯುವ ಕವಿಗಳು ತಮ್ಮ ಮೊದಲ ಪ್ರಯತ್ನದಿಂದ ನಿರಾಶರಾಗಬೇಕಿಲ್ಲ ಅನೇಕ ಪ್ರಸಿದ್ಧ ಕವಿಗಳು ಇಂತಹ ವೇದಿಕೆಗಳಿಂದಲೇ ಮಹಾನ್ ಕವಿಗಳಾಗಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರವೆಂಕಟಪ್ಪ ಮಾತನಾಡಿ, ಜೀವನಕ್ಕೆ ಒಂದು ಆದರ್ಶ ರೂಪಿಸಿಕೊಳ್ಳಬೇಕು ಅದರ ದರ್ಶನ ಸಾಹಿತ್ಯದಲ್ಲಿ ಆಗಿರಬೇಕು ಎಂದರು. ಈ ಸಂದರ್ಭದಲ್ಲಿ ತಮ್ಮ ಕವನಗಳನ್ನು ವಾಚಿಸಿದ ಯುವ ಕವಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ನೀಡಿದರು. ಕೋಗಿಲೆಹಳ್ಳಿ ಕೃಷ್ಣಪ್ಪ, ರಾಧಾ ಡಾ. ಪ್ರಕಾಶ್, ಶಂಕರಪ್ಪ, ಮಂಜುನಾಥ್ಹೆಗಡೆ, ದೇಶಪಾಂಡೆ, ನಾಗರಾಜು ಎಂ.ಎನ್. ಇದ್ದರು.
'ದೇಶದ ಐಕ್ಯತೆಗೆ ಗಾಂಧಿ ತತ್ವ ಸಹಕಾರಿ'
ಕೋಲಾರ: ದೇಶದ ಐಕ್ಯತೆ, ಸಮಗ್ರತೆಗಾಗಿ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳ ಅನುಷ್ಠಾನ ಇಂದಿನ ಅಗತ್ಯವಾಗಿದೆ ಎಂದು ಹಿರಿಯ ಗಾಂಧಿವಾದಿ ಹಾಗೂ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಅಭಿಪ್ರಾಯಪಟ್ಟರು. ತಾಲೂಕಿನ ಷಾಪೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಂಗಳೂರಿನ ಗಾಂಧೀಭವನ ಇವರ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧಿ ತತ್ವಗಳ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡುತ್ತಿದ್ದರು. ಗಾಂಧೀಜಿಯವರ ಆದರ್ಶವನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕೆಂಬ ಮನೋಭಾವ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ದ್ವೇಷ,ಅಸೂಯೆ ಬೇಡ ನಾವೆಲ್ಲರೂ ಒಂದೇ ಎಂಬ ತತ್ವದಡಿ ಸಾಗೋಣ, ಭವಿಷ್ಯದ ಭಾರತ ಜಾತ್ಯಾತೀತವಾಗಿರಲಿ, ಈ ಕಾರ್ಯಕ್ಕೆ ಈ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸುವ ಹೊಣೆ ಶಿಕ್ಷಕರು ಹೊರಬೇಕೆಂದರು. ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ಶಿವರಾಜ್ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಿಕೊಡದವರು ಶಿಕ್ಷಕರೇ ಅಲ್ಲ ಎಂದು ತಿಳಿಸಿ, ಮಕ್ಕಳನ್ನು ತಿದ್ದುವ ಹೆಚ್ಚಿನ ಹೊಣೆಗಾರಿಕೆ ಅವರ ಮೇಲಿದೆ ಎಂದರು.