'ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶುಲ್ಕ ವಸೂಲಿಯಷ್ಟೇ ಗೊತ್ತು'
ಕೆಜಿಎಫ್: ಅಭಿವೃದ್ಧಿ ಕಡೆಗೆ ಗಮನ ಕೊಡದ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ಅಭಿವೃದ್ಧಿ ಶುಲ್ಕದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದೆ ಎಂದು ಡಿಕೆ ಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ಶಿವಣ್ಣ ಆರೋಪಿಸಿದರು. ಬೆಮೆಲ್ನಗರದ ಕುವೆಂಪುನಗರದಲ್ಲಿ ಏರ್ಪಡಿಸಿದ್ದ 4 ಲಕ್ಷ ರು. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕುವೆಂಪುನಗರ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ವಂಚಿತವಾಗಿತ್ತು. ಪ್ರತಿ ಮನೆ ನಿರ್ಮಾಣಕ್ಕೆ ಸುಮಾರು 20 ಸಾವಿರ ರು. ವಸೂಲಿ ಮಾಡುವ ಪ್ರಾಧಿಕಾರಕ್ಕೆ ಅಭಿವೃದ್ಧಿ ಮಾಡಬೇಕು ಎನ್ನುವ ಚಿಂತನೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಮುಖಂಡ ಶಿವಣ್ಣ ಮಾತನಾಡಿ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತಿಲ್ಲ. ಇವರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಮುಂದಿನ ವಾರ ಜಿ.ಪಂ ಸದಸ್ಯೆ ನಾರಾಯಣಮ್ಮ ಅವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.
ಈ ವೇಳೆ ಕುವೆಂಪುನಗರದ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷೆ ಪೆರುಮಾಳ್, ವೆಂಕಟರಾಮ, ಕಾರ್ಯದರ್ಶಿ ಕರುಪ್ಪನ್ ಸೇರಿದಂತೆ ಬಡಾವಣೆಯ ಇತರೆ ಮುಖಂಡರು ಸ್ಥಳೀಯರು ಹಾಜರಿದ್ದರು.