ರೆಡಿಮೇಡ್ ಸಂಕ್ರಾಂತಿ ನೋಡ್
ಕೋಲಾರ: ಸಂಕ್ರಾಂತಿ ಹಬ್ಬ ಬಂದರೆ ಹದಿನೈದು ದಿನ ಮುಂಚೆಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಜನರು ಈಗ ಬೆಲೆ ಏರಿಕೆಯ ಹೊಡೆತದಿಂದ, ಕಾಲಘಟ್ಟ ಬದಲಾಗುತ್ತಿರುವುದರಿಂದ ರೆಡಿಮೇಡ್ ಸಂಸ್ಕೃತಿಗೆ ಮಾರು ಹೋಗುವಂತಾಗಿದೆ.
ಗ್ರಾಮೀಣ ಪ್ರದೇಶದ ಜನತೆಯಲ್ಲಿ ಹಬ್ಬದ ಸಂಸ್ಕೃತಿ ಕಡಿಮೆ ಆಗುತ್ತಿರುವುದು, ವ್ಯವಸಾಯ ನೀ ಸಾಯ ಎಂಬಂತಾಗಿರುವುದು, ಕೃಷಿಯನ್ನು ಬಿಟ್ಟು ಪೇಟೆ, ಪಟ್ಟಣ ಸೇರುತ್ತಿರುವುದು ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
ಹಳ್ಳಿಗಾಡಿನಲ್ಲಿ ಮಾತ್ರವಲ್ಲ ನಗರ ಪಟ್ಟಣ ಪ್ರದೇಶದಲ್ಲೂ ಸಂಕ್ರಾಂತಿ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಣೆ ಮಾಡುತ್ತಿದ್ದ ದಿನಗಳು ಈಗ ಕಾಣದಂತಾಗಿದೆ. ಶೇಂಗಾ, ಕಡಲೆ, ಎಳ್ಳು, ಕಬ್ಬು ಬೆಳೆಯುತ್ತಿದ್ದ ಭೂಮಿಗಳು ಮಾನವನ ದುರಾಸೆ, ಪ್ರಕೃತಿಯ ಮುನಿಸು ಹಾಗೂ ಭೂಮಿಯನ್ನು ಯದ್ವಾತದ್ವಾ ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಪ್ರತಿವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.
ಮುಂಚೆ ಬಹುತೇಕ ಮನೆಗಳಲ್ಲಿ ತಾವೇ ಬೆಳೆದ ಇಲ್ಲವೇ ರೈತರಿಂದ ಕೊಂಡ ಪದಾರ್ಥಗಳನ್ನು ತಂದು ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಎಳ್ಳು-ಬೆಲ್ಲವನ್ನು ತಯಾರಿಸಲಾಗುತ್ತಿತ್ತು. ಗದ್ದೆಗಳಲ್ಲಿ ಬೆಳೆದ ತಾಜಾ ಕಬ್ಬು ತಂದು ಎಳ್ಳು-ಬೆಲ್ಲದ ಜೊತೆ ಮನೆ ಮನೆಗಳಿಗೆ ಹೋಗಿ ವಿತರಿಸಲಾಗುತ್ತಿತ್ತು, ಬಾಳೆ ಹಣ್ಣು ಕೈಗೆಟಕುವ ದರದಲ್ಲಿ ಸಿಗುತ್ತಿತ್ತು. ಹಲವು ವರ್ಷಗಳಿಂದಿಚೆಗೆ ಸಂಕ್ರಾಂತಿ ಹಬ್ಬ ಮಾತ್ರವಲ್ಲ ಪ್ರತಿಯೊಂದು ಹಬ್ಬಗಳ ಸಂದರ್ಭದಲ್ಲಿ ಬೆಲೆ ಏರಿಕೆ ಗಮನಕ್ಕೆ ಮುಟ್ಟುವುದರಿಂದ ಬಡವರು, ಮಾಧ್ಯಮ ವರ್ಗದವರು ಹಬ್ಬದಲ್ಲಿ ಬಳಕೆ ಮಾಡುವ ಪದಾರ್ಥಗಳನ್ನು, ಹೂವು-ಹಣ್ಣು, ತರಕಾರಿ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುವಂತಾಗಿದೆ.
ಕೆಲವು ವರ್ಷಗಳ ಹಿಂದೆ ಸಂಕ್ರಾಂತಿ ಹಬ್ಬದ ವಿಶೇಷವಾದ ಎಳ್ಳು, ಬೆಲ್ಲ, ಕಡಲೆ, ಕಡಲೆ ಬೀಜವನ್ನು ಬಹುತೇಕ ಮನೆಗಳಲ್ಲಿ ವೃದ್ಧರು, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಜೊತೆಗೂಡಿ ಕನಿಷ್ಠ 5 ರಿಂದ 15 ಕೆಜಿವರೆಗೆ ತಯಾರಿಸಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ತಮ್ಮ ವಠಾರ, ಬೀದಿ, ಬಡಾವಣೆ, ಕಾಲೋನಿಯ ಜನರಿಗೆ, ಪರ ಊರಿನಲ್ಲಿರುವ ಬಂಧು ಬಳಗಕ್ಕೆ ಹಂಚಿ ಸುಗ್ಗಿ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಸಂಕ್ರಾಂತಿಯ ಸಂಭ್ರಮದಲ್ಲಿ ತೇಲಾಡುತ್ತಿದ್ದರು.
ಈಗ ಪರಿಸ್ಥಿತಿ ಬದಲಾಗಿದೆ, ಇದಕ್ಕೆ ತಕ್ಕಂತೆ ಜನರು ಬದಲಾಗಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುವುದರಿಂದ ಕೈ-ಮೈ ನೋವು ಮಾಡಿಕೊಳ್ಳುವುದಕ್ಕೆ ಸಿದ್ಧರಿಲ್ಲ, ಗಂಟೆ ಗಟ್ಟೆಲೆ ಹಬ್ಬದ ಕೆಲಸ ಮಾಡಿದಲ್ಲಿ ಟಿವಿ ಸೀರಿಯಲ್ಗಳನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ತಮಗೆ ಬೇಕಾದ ವಸ್ತುಗಳನ್ನು ಕಳುಹಿಸಲು ಅಂಗಡಿಗಳಿಗೆ ಫೋನ್ ಮಾಡಿ ತರಿಸಿಕೊಳ್ಳುವಂತಹ ಅವಕಾಶ, ವ್ಯವಸ್ಥೆಗಳು ಸಿಕ್ಕಿರುವುದರಿಂದ ರೆಡಿಮೇಡ್ ಧಮಾಖ ಹೆಚ್ಚಾಗುತ್ತಿದೆ. ಕೆಲವು ವರ್ಷಗಳಿಂದಿಚೆಗೆ ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಸಂಕ್ರಾಂತಿ ರಸದೌತಣ ವ್ಯವಸ್ಥೆ ಸಿಗುತ್ತಿರುವುದರಿಂದ ಶ್ರೀಮಂತರು ಮಾತ್ರವಲ್ಲ ಸಾಮಾನ್ಯ ಜನರು ಮನೆಗಳಲ್ಲಿ ಹಬ್ಬ ಆಚರಣೆ ಮಾಡಿದಲ್ಲಿ ಹೊರೆ ಆಗುತ್ತದೆ, ಹೆಂಡತಿ ಮಕ್ಕಳ ಕೈ ಕೆಸರಾಗುತ್ತದೆ ಎಂದು ಒಂದು ಊಟಕ್ಕೆ 250 ರಿಂದ 300 ರು. ಪಾವತಿಸಿ, ಟೋಕನ್ ಪಡೆದು ರಸದೌತಣ ಕೇಂದ್ರಗಳಿಗೆ ಹೋಗಿ ಹಬ್ಬವನ್ನು ಕುಟುಂಬ ವರ್ಗದೊಂದಿಗೆ ಆಚರಿಸುವಂತಾಗಿರುವುದರಿಂದ ಮನೆಗಳಲ್ಲಿ ಹಬ್ಬದ ವಾತಾವರಣ ಕಡಿಮೆ ಆಗುತ್ತಿದೆ.
ಗ್ಯಾಸ್ ಬೆಲೆ ಏರಿಕೆ: ಹಬ್ಬ ಹರಿದಿನಗಳಲ್ಲೇ ದುಪಟ್ಟುಗೊಳ್ಳುವ ತರಕಾರಿ, ಹೂವು-ಹಣ್ಣಿನ ದರ ಮುಂತಾದ ಕಾರಣಗಳಿಂದ ಜನರು ಮಾರುಕಟ್ಟೆಗೆ ಬರಲು ಅಂಜುವಂತಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಹಾಗೂ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ರೈತರ ಕೈ ಸೇರದಿರುವುದು, ಇದರ ಅವಕಾಶ ಪಡೆದು ವ್ಯಪಾರಿಗಳು ಲಾಭ ಪಡೆಯುವುದಕ್ಕೆ ಮುಂದಾಗಿರುವುದರಿಂದ ಜನರು ಹಬ್ಬವನ್ನು ಆಚರಿಸಲು ಹಿಂದು ಮುಂದು ನೋಡುವಂತಾಗಿದೆ.
ಗಗನಕ್ಕೇರಿದ ಕಬ್ಬು ಬೆಲೆ
ಚಿಂತಾಮಣಿ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಬು ಒಂದು 40ರಿಂದ 50 ಮಾರಾಟದಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು-ಬೆಲ್ಲ ತಿಂದು ಕಬ್ಬು ಖರೀದಿಸುವ ಜನರಿಗೆ ಈ ಬಾರಿ ಬೆಲೆ ಬರೆ ಎಳೆದಿದೆ. ಕನಿಷ್ಟ ಒಂದು ಕಬ್ಬಿನ ಬೆಲೆ 40ರಿಂದ 50ಕ್ಕೆ ಮಾರಾಟವಾಗುತ್ತಿದೆ. ಕಾರಣ ಉಭಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉತ್ತಮ ಮಳೆ, ಬೆಳೆ ಇಲ್ಲದಿದ್ದರಿಂದ ಹಬ್ಬಕ್ಕೆ ಅಷ್ಟಾಗಿ ಖರೀದಿ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಆಡಂಬರವಿಲ್ಲದ ಸಂಕ್ರಾಂತಿ
ಶ್ರೀನಿವಾಸಪುರ; ಸಾಮಗ್ರಿಗಳ ಬೆಲೆ ಗಗನಕ್ಕೇರಿ ಬಡವರು ಸಂಕ್ರಾಂತಿ ಹಬ್ಬವನ್ನು ಆಡಂಬರದಿಂದ ಆಚರಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ತಾಲೂಕು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿದ್ದು ಆಂಧ್ರದ ಶೈಲಿಯಲ್ಲಿ ಹಬ್ಬ ಆಚರಣೆ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಸರಿಯಾಗಿ ಮಳೆ ಬೀಳದೆ ಬೆಳೆಗಳು ಆಗದೆ ಇರುವುದರಿಂದ ಸಂಕ್ರಾಂತಿ ಹಬ್ಬಕ್ಕೆ ಕತ್ತಲು ಕವಿದಂತಾಗಿದೆ.
ಪದಾರ್ಥಗಳ ಬೆಲೆಗಳು
ಕಬ್ಬು ಒಂದು ಜಲ್ಲೆಗೆ ರು. 35 ರಿಂದ ರು. 40
ಕಳೆದ ವರ್ಷ ರು. 25 ರಿಂದ ರು. 30 ಇತ್ತು.
ರೆಡಿಮೇಡ್ ಎಳ್ಳು ಅರ್ಧ ಕೆಜಿಗೆ ರು. 50 ರಿಂದ ರು. 90
ಸಕ್ಕರೆ ಅಚ್ಚು ಕೆಜಿಗೆ ರು. 80 ರಿಂದ ರು. 120
ಬರೀ ಎಳ್ಳು ಕೆಜಿಗೆ ರು. 380
ಕಡಲೆ ಕೆಜಿ ರು. 68
ಒಣಗಿದ ಕೊಬ್ಬರಿ ಕೆಜಿ ರು. 90
ಬಾಳೆ ಹಣ್ಣು ಕೆಜಿ ರು. 90 ರಿಂದ ರು. 100
-ಪಾ.ಶ್ರೀ. ಅನಂತರಾಮ್