ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಿ, ಆತ್ಮವಿಶ್ವಾಸ ತುಂಬಿ

Vishwanath S
Updated On : 15 Jan 2014, 1:04 am

ಚಿಕ್ಕಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ಜಿಲ್ಲಾದ್ಯಂತ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಸರಣಿ ಕಾರ್ಯಕ್ರಮಗಳನ್ನು ಕೈಗೊಂಡು ಆತ್ಮವಿಶ್ವಾಸ ಬೆಳೆಸಲಾಗುತ್ತಿದೆ.
ಇಂತಹ ಕೆಲಸಕ್ಕೆ ಕೈ ಹಾಕಿರುವುದು ಸ್ಥಳೀಯ ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುವ ಲೈಫ್ ಈಸ್ ಬ್ಯುಟಿಫುಲ್ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ ಶಕ್ತಿ ತುಂಬುತ್ತಿರುವ ಉಪನ್ಯಾಸಕ ಪ್ರದೀಪ್.
ಪ್ರಾರಂಭದಲ್ಲಿ ನೇರವಾಗಿ ಶಾಲಾ ಕಾಲೇಜುಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಸಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗುತ್ತಿತ್ತು. ಆದರೆ,ಪರೀಕ್ಷಾ ಭಯದಿಂದ ಜಿಲ್ಲಾದ್ಯಂತ ಹೆಚ್ಚಿಗೆ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿರುವುದನ್ನು ಮನಗಂಡು ಆಯ್ದ ಶಾಲೆಗಳ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಚಿಂತಾಮಣಿ ಮತ್ತು ಶಿಡ್ಲಘಟ್ಟ, ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ಕಾರ್ಯಕ್ರಮ ನಡೆದು ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸೋಮವಾರ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಇ ನ್ಯೂಸ್ ಸಹಯೋಗದೊಂದಿಗೆ ನಡೆದ ಪರೀಕ್ಷೆಗೆ ಟಿಪ್ಸ್ ಕೊಡುವ ಕಾರ್ಯಕ್ರಮದಲ್ಲಿ ಸರ್‌ಎಂವಿ ಪ್ರೌಢಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ಸರ್ಕಾರಿ ಜೂನಿಯರ್ ಕಾಲೇಜು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಓದುವ ಸರ್ಕಾರಿ ಶಾಲೆಗಳ ಹೆಚ್ಚಿನ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈಗಲಾದರೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 60 ದಿನಗಳೇ ಬಾಕಿ ಉಳಿದಿರುವುದು. ಇದುವರೆಗೂ ನಾನು ಓದಿಲ್ಲ. ನಾನು ಪಾಸಾಗುವುದಿಲ್ಲ ಎಂಬ ಭಯವನ್ನು ಬಿಟ್ಟು ಈ ದಿನದಿಂದಲೇ ಶ್ರದ್ಧೆಯಿಂದ ಓದಿದರೆ ಖಂಡಿತ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಬಹುದು. ಇದಕ್ಕೆ ಮೊದಲು ಭಯಬಿಡಿ, ಆತ್ಮವಿಶ್ವಾಸದಿಂದ ಓದುವ ಕಡೆಗೆ ಗಮನಕೊಡಿ, ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಉಪನ್ಯಾಸಕ ಪ್ರದೀಪ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬೇರೆ ಮೆದಳೇನೂ ಇರುವುದಿಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿಯೇ ಮೆದುಳಿರುತ್ತದೆ. ಡಾ. ಅಬ್ದುಲ್ ಕಲಾಂರಂತವರೇ ಅನುತ್ತೀರ್ಣರಾದರು. ಆದರೆ, ತಮ್ಮ ಛಲದಿಂದ ವಿಜ್ಞಾನಿಯಾದರು. ರಾಷ್ಟ್ರಪತಿಯೂ ಆಗಿ ಕೊನೆಗೆ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ. ಇವರಲ್ಲದೇ ಅನೇಕರು ಮೊದಲು ದಡ್ಡರೆನಿಸಿಕೊಂಡರೂ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೇರಿದರು. ಇಂತಹವರನ್ನು ಮಾದರಿಯಾಗಿ ತೆಗೆದುಕೊಂಡರೆ ಏಕೆ ಯಶಸ್ಸು ಸಿಗುವುದಲ್ಲ. ಆದರೆ, ಅದರಲ್ಲಿ ಭಯವನ್ನಿಟ್ಟುಕೊಂಡು ಆತ್ಮವಿಶ್ವಾಸದ ಕೊರತೆಯಿಂದ ಯಾವುದೇ ಕೆಲಸವನ್ನು ಮಾಡಿದರೂ ವೈಫಲ್ಯ ಎದುರಾಗುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಓದಿದರೆ ಕಷ್ಟ ಎನ್ನುವುದು ಸರಳ ಎನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಾತನಾಡಿಸಿ ಅವರು ಓದುವುದರಲ್ಲಿ ತೊಡಗುವಿಕೆ, ಸಮಸ್ಯೆಗಳು ಕುರಿತು ಮಾಹಿತಿಯನ್ನು ತಿಳಿದುಕೊಂಡು ಇತರೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್, ತಾಪಂ ಮಾಜಿ ಉಪಾಧ್ಯಕ್ಷ ಕೆ.ಆರ್. ರೆಡ್ಡಿ, ಪತ್ರಕರ್ತ ಸಿ. ಬಾಲಕೃಷ್ಣ, ಇ ನ್ಯೂಸ್ ನ ವ್ಯವಸ್ಥಾಪಕ ಸಂಪಾದಕ ಕುಮಾರಸ್ವಾಮಿ, ಉಪನ್ಯಾಸಕಿ ಕಾಮಾಕ್ಷಿ ಶಶಿಧರ್, ನಾಗೇಂದ್ರ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement