ವೀರಪ್ಪ ಮೊಯ್ಲಿ ವಿರುದ್ಧ ಪ್ರತಿಭಟನೆ
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಈ ಭಾಗದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಧಿಕ್ಕಾರ ಕೂಗಿದರಲ್ಲದೇ ಪ್ರತಿಕೃತಿ ದಹಿಸಿದರು.
ಶಾಶ್ವತ ನೀರಾವರಿ ಸೌಲಭ್ಯ ಈ ಭಾಗದ ಬಹು ಮುಖ್ಯ ಬೇಡಿಕೆಯಾಗಿದೆ. ಆದರೆ, ಇದನ್ನು ಕೇಂದ್ರ ಸಚಿವರು ತಮ್ಮ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಸುಮ್ಮನಿದ್ದ ಅವರು, ತರಾತುರಿಯಲ್ಲಿ ಜ.31 ರಂದು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ. ಯೋಜನೆಗೆ ಟೆಂಡರ್ ಕರೆದಿಲ್ಲ, ಯೋಜನಾ ವರದಿ ತಯಾರಾಗಿಲ್ಲ, ಸಂಬಂಧಪಟ್ಟ ಇಲಾಖೆಗಳಿಂದ ಅನುಮೋದನೆ ಸಿಕ್ಕಿಲ್ಲ, ಆದರೂ ಏಕಾಏಕಿ ನೀರಾವರಿ ಯೋಜನೆಗೆ ಹೇಗೆ ಶಂಕುಸ್ಥಾಪನೆ ನೆರವೇರಿಸುತ್ತಾರೆ ಎಂದು ಬಿಜೆಪಿ ಮುಖಂಡರು ಕಿಡಿ ಕಾರಿದರು. ಸರ್ವೋಚ್ಚನ್ಯಾಯಾಲಯ ಆಧಾರ್ ಕಾರ್ಡಿನ ಮಾನ್ಯತೆಯನ್ನು ಪ್ರಶ್ನಿಸಿದೆ. ಹೀಗಿರುವಾಗ ಮೊಯ್ಲಿ ಆಧಾರ್ ಕಾರ್ಡು ಅಗತ್ಯವಾಗಿ ಪಡೆದುಕೊಳ್ಳಬೇಕೆಂದು ಒಂದು ಕಡೆ, ಮತ್ತೊಂದು ಕಡೆ ಪಡೆಯುವುದು ಕಡ್ಡಾಯವೇನಲ್ಲ ಎಂದು ಹೇಳುತ್ತಿದ್ದಾರೆ. ಇದರ ಜೊತೆಗೆ ಗ್ಯಾಸ್ ಸಿಲಿಂಡರ್ ಏರಿಕೆಯಲ್ಲೂ ಗೊಂದಲವನ್ನು ಮೂಡಿಸುತ್ತಿದ್ದು ಗಾಯದ ಮೇಲೆ ಬರೆ ಎಳೆಯುವಂತೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರು ಜೀವನ ನಡೆಸಲು ಪರದಾಡುವಂತೆ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸ್, ಅಗಲಗುರ್ಕಿ ಚಂದ್ರಶೇಖರ್, ತಮ್ಮೇಶ್ ಗೌಡ, ಲಕ್ಷ್ಮೀನಾರಾಯಣ ಗುಪ್ತ, ಸುಬ್ಬರಾಜು, ಭಾರತಿ, ವಿಜಯಾ ಮುಂತಾದವರು ಭಾಗವಹಿಸಿದ್ದರು.