ಸಮಾನತೆಯ ಹರಿಕಾರ ಕವಿ ಸಿದ್ದರಾಮ
ಗೌರಿಬಿದನೂರು: ಕೆರೆ, ಕಾಲುವೆ, ಬಾವಿ, ದೇವಾಲಯ ನಿರ್ಮಾಣ ಮಾಡುವ ಮಹಾತ್ಕಾರ್ಯದಲ್ಲಿ ಭೋವಿ ಜನಾಂಗದ ಸೇವೆ ಶ್ಲಾಘನೀಯ ಎಂದು ಉಪಸಭಾಪತಿ ಎನ್.ಹೆಚ್. ಶಿವಶಂಕರರೆಡ್ಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 840ನೇ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡುತ್ತಿದ್ದರು.
ಈ ಸಮುದಾಯದವರು ಕಾಯಕವೇ ಕೈಲಾಸ ಎಂಬ ಸಿದ್ಧಾಂತದ ಅಡಿಯಲ್ಲಿ ಬದುಕುವ ಜನಾಂಗವಾಗಿದ್ದು ಮೂಲತಃ ಇವರು ಶ್ರಮ ಜೀವಿಗಳಾಗಿದ್ದು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು ಈ ಹಿಂದೆ ರಾಜ ಮಹಾರಾಜರು ಇವರ ಸಲಹೆಯಂತೆ ದೇವಾಲಯಗಳು ಕೆರೆ ಕುಂಟೆಗಳನ್ನು ನಿರ್ಮಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಸಹ ಇವರ ಸಹಾಯದಿಂದ ವಿಶ್ವ ವಿಖ್ಯಾತ ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿರುವ ಘನತೆ ಈ ಸಮುದಾಯಕ್ಕೆ ಸೇರಿದೆ ಇವರ ಮೂಲ ಗುರು ಸಿದ್ದರಾಮೇಶ್ವರ ಸ್ವಾಮೀಜಿರವರು ಸಹ ಕಾಯಕವನ್ನೇ ನಂಬಿದ ಮಹಾನ್ ಸಂತ ಶೋಷಿತರ ಸಮಾನತೆಗೆ ಅನೇಕ ಕ್ರಾಂತಿಕಾರಿ ವಚನಗಳನ್ನು ರಚನೆ ಮಾಡಿದ ಮಹಾನ್ ಕವಿ ಸಹ ಆಗಿದ್ದರು. ಈ ನಿಟ್ಟಿನಲ್ಲಿ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಉನ್ನತ ಸ್ಥಾನಮಾನ ನೀಡಿದ್ದರು.
ಈ ದಿಸೆಯಲ್ಲಿ ರಾಜ್ಯ ಸರ್ಕಾರ ಈ ಜನಾಂಗದ ಸೇವೆಯನ್ನು ಗುರುತಿಸಿ ಈ ದಿನವನ್ನು ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವವೆಂದು ರಾಜ್ಯಾದಂತ ಆಚರಿಸುವಂತೆ ಆದೇಶ ನೀಡಿರುವುದು ಸಂತಸದ ವಿಷಯ ಹಾಗೂ ರಾಜ್ಯ ಸರ್ಕಾರ ಈ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದು ಈ ಸಮುದಾಯದ ಯುವಕರು ಮತ್ತು ಮುಖಂಡರು ಒಗ್ಗಟ್ಟಿನಿಂದ ದುಡಿದಾಗ ಜನಾಂಗ ಏಳಿಗೆ ಸಾಧ್ಯ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾದ ವೆಂಕಟೇಶ್ ಮಾತನಾಡುತ್ತ ಶಿವಯೋಗಿ ಸಿದ್ದರಾಮೇಶ್ವರರು ಆರಂಭದಲ್ಲಿ ವಚನಸಾಹಿತಿಗಳಾಗಿದ್ದು ಬಸವಣ್ಣ, ಅಲ್ಲಮಪ್ರಭು, ಅಂಬಿಗರಚೌಡಯ್ಯ, ಅಕ್ಕಮಹಾದೇವಿ ಮುಂತಾದವರ ಮಾರ್ಗದರ್ಶನ ಸೇವೆ ಸಲ್ಲಿಸಿ ಕರ್ಮಯೋಗಿ, ಶಿವಯೋಗಿ ಎಂಬ ನಾಮಾಂಕಿತರಾದರು ಎಂದರು.
ತಾಲೂಕು ದಂಡಾಧಿಕಾರಿ ಡಾ.ಎನ್. ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಭೈಯಪ್ಪರೆಡ್ಡಿ, ತಾಲೂಕು ಭೋವಿ ಜನಾಂಗದ ಅಧ್ಯಕ್ಷ ಲಕ್ಷ್ಮೀಪತಿ ಮುಖಂಡರಾದ ಮಿಲಿಟ್ರಿ ಅಶ್ವತ್ಥಪ್ಪ, ಹನುಂತರಾಯಪ್ಪ, ನಾರಾಯಣಸ್ವಾಮಿ, ಪುರಸಭೆ ಸದಸ್ಯಾರಾದ ಬಾಲಾಜಿ, ಅನಂತರಾಜು, ಕಲ್ಪನರಮೇಶ್ ಇದ್ದರು.