ಸಾಮೂಹಿಕ ಸಂಕ್ರಾಂತಿ ಮೂಲಕ ದೇಶ ಕಟ್ಟೋಣ
ಕ.ಪ್ರ. ವಾರ್ತೆ , ಕೋಲಾರ , ಜ.14
ದೇಶದ ಐಕ್ಯತೆ, ಸಮಗ್ರತೆಗಾಗಿ ಸಮಸ್ತ ಜನತೆ ಒಂದಾಗುವ ಮೂಲಕ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ನೀಡಿದರು.
ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪವನ್ ಕಾಲೇಜಿನ ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ಅಹಿಂಸಾ ಚಳವಳಿ, ದಂಡಿ ಯಾತ್ರೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಸರಿಯಲ್ಲ, ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಸಾರ್ಥವಾಗಿದೆಯೇ ಎಂಬುದರ ಬಗ್ಗೆ ಚಿಂತನೆ ನಡೆಸಲು ಪ್ರತಿ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದಿನದಂದು ಸಾಮೂಹಿಕವಾಗಿ ಹಬ್ಬವನ್ನು ಆಚರಿಸುವ ಮೂಲಕ ದೇಶವನ್ನು ಸಂರಕ್ಷಣೆ ಮಾಡಲು ಸಂಕಲ್ಪ ಮಾಡಬೇಕಾಗಿದೆ ಎಂದರು.
ದೇಶಕ್ಕಾಗಿ ಬಲಿದಾನ ಇಂದು ಅಗತ್ಯವಿಲ್ಲ, ದೇಶಕ್ಕಾಗಿ ಬದುಕುವವರ ಅವಶ್ಯವಿದೆ ಪ್ರತಿಪಾದಿಸಿದ ಸಂತೋಷ್ ಅವರು ಬಿಜೆಪಿ ಯುವ ಮೋರ್ಚಾ ರಾಜಕಾರಣಕ್ಕಾಗಿ ಇಲ್ಲವೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಸಂಕ್ರಾಂತಿ ಆಚರಣೆ ಮಾಡುತ್ತಿಲ್ಲ, ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಆತ್ಮಾವಲೋಕನೆ ಮಾಡಿಕೊಂಡು ಹೊಸ ಬದಲಾವಣೆ, ಪರಿವರ್ತನೆ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿದೆ ಎಂದು ತಿಳಿಸಿದರು. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ಸಮಾಜವನ್ನು ಛಿದ್ರಗೊಳಿಸುತ್ತಿರುವ ಅಸ್ಪೃಶ್ಯತೆಯನ್ನು ತೋಲಗಿಸಲು ಯುವಕರಲ್ಲಿ ಚಿಂತನೆ ಮಾಡಬೇಕೆಂದ ಅವರು, ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇದೆ ಎಂದು ವಿನಾ ಕಾರಣ ಆರೋಪಿಸುವವರು ತಮ್ಮಲ್ಲಿ ಆಧಾರಗಳು ಇದ್ದಲ್ಲಿ ಸಾಬೀತು ಮಾಡಿದಲ್ಲಿ ತಾವು ಸಾಮಾಜಿಕ ಜೀವನದಿಂದ ದೂರ ಉಳಿಯುವುದಾಗಿ ಸವಾಲು ಹಾಕಿದರು. ಸಂಕ್ರಾಂತಿ ಸಂಜೆ ಕಾರ್ಯಕ್ರಮದಲ್ಲಿ ಎದೆ ತುಂಬಿ ಹಾಡುವೆನು ಖ್ಯಾತಿಯ ಓಹಿಲೇಶ್ವರಿ ತಂಡದಿಂದ ದೇಶ ಭಕ್ತಿಗೀತೆಗಳ ಗಾಯನ, ಭವ್ಯಶ್ರೀ, ಹರ್ಷಿತಾಶ್ರೀ ತಂಡದಿಂದ ಭರತನಾಟ್ಯ, ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಶ್ರೀನಿವಾಸರಿಂದ ದೇಶ ಭಕ್ತಿಯನ್ನು ಮೂಡಿಸುವ ನೃತ್ಯಗಳು ನಡೆದವು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್, ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಮಾಜಿ ಶಾಸಕ ವೈ. ಸಂಪಂಗಿ,ಎಂ. ನಾರಾಯಣಸ್ವಾಮಿ, ಬೆಂಗಳೂರು ಮಹಾನಗರಪಾಲಿಕೆ ಸದಸ್ಯ, ಪಕ್ಷದ ಜಿಲ್ಲಾ ಉಸ್ತುವಾರಿ ಶಿವಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ರಂಗಪ್ಪ, ಪ್ರಮೀಳಾ ಮಲ್ಲಿಕಾರ್ಜುನ್, ರಾಮಸಂದ್ರ ನಾಗರಾಜ್, ಸಿ. ವೆಂಕಟೇಶ್, ವೆಂಕಟೇಶ್ ಮೌರ್ಯ, ಸತ್ಯನಾರಾಯಣರಾವ್, ಜಯಂತಿಲಾಲ್, ಜಿಪಂ ಮಾಜಿ ಸದಸ್ಯ ರಾಮೇಗೌಡ, ಮಮತಾ, ನಿರ್ಮಲ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ತಮ್ಮೇಶ್‌ಗೌಡ ಮತ್ತಿತರರು ಇದ್ದರು.