ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

3 ವರ್ಷ ಸಂಕ್ರಾಂತಿ ಆಚರಣೆಗೆ ತಗುಲುವ ವೆಚ್ಚ ಶುದ್ಧ ಕುಡಿವ ನೀರಿನ ಘಟಕಗಳ ಸ್ಥಾಪನೆಗೆ ಬಳಕೆ

Vishwanath S
Updated On : 16 Jan 2014, 1:34 am

ಚಿಕ್ಕಬಳ್ಳಾಪುರ: ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ಶಾಸಕ ಕೆ. ಸುಧಾಕರ್, ಪ್ರಸಕ್ತ ವರ್ಷ ಸೇರಿದಂತೆ ಮುಂದಿನ ಮೂರು ವರ್ಷ ಹಬ್ಬವನ್ನು ಹಮ್ಮಿಕೊಳ್ಳಲು ತಗುಲುವ ವೆಚ್ಚವನ್ನು ಶುದ್ಧವಾದ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಬಳಸಲು ನಿರ್ಧರಿಸಿದ್ದಾರೆ.
ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಪಾತಾಳಕ್ಕೆ ಹೋಗುತ್ತಿರುವುದಲ್ಲದೇ ದೊರೆಯುತ್ತಿರುವ ನೀರಿನಲ್ಲಿ ಫ್ಲೋರೈಡ್ ಸೇರಿದಂತೆ ಲವಣಾಂಶಗಳು ಹೆಚ್ಚಿಗೆ ಇದ್ದು ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ಅನೇಕರು ಫ್ಲೋರೋಸೀಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಶುದ್ಧ ಕುಡಿವ ನೀರನ್ನು ಪೂರೈಕೆ ಮಾಡಬೇಕಾಗಿದೆ. ಇದಕ್ಕೆ ಕ್ಷೇತ್ರದಲ್ಲಿ ಬರುವ 28 ಗ್ರಾ.ಪಂ.ಗೆ ತಲಾ 1 ಮತ್ತು ನಗರದಲ್ಲಿ 6 ಶುದ್ಧವಾದ ಕುಡಿಯುವ ನೀರಿನ ಘಟಕವನ್ನು ಸುಮಾರು 4 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆ ಮಾಡಲು ಮುಂದಾಗಿದ್ದು ಇದಕ್ಕೆ ವೈಯಕ್ತಿಕವಾಗಿ 2 ಕೋಟಿ ರು. ಮತ್ತು ಕ್ಷೇತ್ರಾಭಿವೃದ್ಧಿ ನಿಧಿಯಿಂದ 2 ಕೋಟಿ ರು.ಗಳನ್ನು ನೀಡಲಿದ್ದಾರೆ. ಮುಂದಿನ ಮೂರು ವರ್ಷದೊಳಗೆ ಕ್ಷೇತ್ರದೆಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯ ಭರವಸೆ ನೀಡಿದ್ದಾರೆ.
ತಲಾ 12 ಲಕ್ಷ ರು. ಮೊತ್ತದ ಒಟ್ಟು 34 ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಯೋಜಿಸಿದ್ದು 17 ಘಟಕಗಳನ್ನು ಸ್ವಂತ ಖರ್ಚಿನಿಂದ ತಾವು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾದ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ಮೂಲಕ ಹಾಗೂ ಇನ್ನುಳಿದ 17 ಘಟಕಗಳನ್ನು ಶಾಸಕರ ನಿಧಿಯಿಂದ ಭರಿಸುವುದಾಗಿ ಶಾಸಕ ಕೆ. ಸುಧಾಕರ್ ತಿಳಿಸಿದ್ದಾರೆ.  
ಕಳೆದ ನಾಲ್ಕು ವರ್ಷದಿಂದ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮ್ಮ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್‌ನ ಮೂಲಕ ರಂಗೋಲಿ ಸ್ಪರ್ಧೆ ಹಾಗೂ ಇತರೆ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಆಕರ್ಷಕ ಬಹುಮಾನ ನೀಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಕ್ಷೇತ್ರದ ಜನತೆ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಶಾಸಕರನ್ನಾಗಿ ಆಯ್ಕೆ ಮಾಡಿದ್ದರಿಂದ ಜನರಿಗೆ ಹೆಚ್ಚಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ತಲಾ 11ರಿಂದ 12 ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ.ಮುಂದಿನ ಮೂರು ವರ್ಷ ಅವಧಿಯಲ್ಲಿ ಈ ಎಲ್ಲಾ ನೀರಿನ ಘಟಕ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಉಚಿತ ಬಸ್ ಪಾಸ್ ವಿತರಣೆ, ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ಯಾದಿ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು ಬಂದಿರುವುದನ್ನು ಎಂದಿನಂತೆಯೇ ನಡೆಸಿಕೊಂಡು ಹೋಗುವುದಾಗಿ ತಿಳಿಸಿರುವ ಅವರು, ಸಂಕ್ರಾಂತಿ ಸಂದರ್ಭದಲ್ಲಿ ಜನತೆಗೆ ಏನಾದರೂ ದೊಡ್ಡ ಕೊಡುಗೆ ನೀಡಬೇಕಾಗಿದ್ದು ಸ್ಪರ್ಧೆ ಮೂಲಕ ಒಂದಿಷ್ಟು ಮಂದಿಗೆ ಬಹುಮಾನ ವಿತರಿಸುವ ಬದಲು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಸಮೂಹ ರೂಪದಲ್ಲಿ ಜನತೆಗೆ ಶಾಶ್ವತ ಅನುಕೂಲ ಕಲ್ಪಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement