ಚಿಕ್ಕಬಳ್ಳಾಪುರದಲ್ಲಿ ಆಪ್ ಸದಸ್ಯತ್ವ ಅಭಿಯಾನ
ಚಿಕ್ಕಬಳ್ಳಾಪುರ: ಜನ ಸಾಮಾನ್ಯ ಎಂಬ ಹೆಸರಿನಲ್ಲಿಯೇ ಕ್ರಾಂತಿಯನ್ನುಂಟು ಮಾಡಿ ದೆಹಲಿಯಲ್ಲಿ ಗದ್ದುಗೆಯನ್ನು ಹಿಡಿದ ಆಮ್ ಆದ್ಮಿ ಪಾರ್ಟಿ ಚಿಕ್ಕಬಳ್ಳಾಪುರದಲ್ಲೂ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದೆ.
ಮಕರಸಂಕ್ರಾಂತಿ ಹಬ್ಬದ ದಿನದಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಯುವಕ ಯುವತಿಯರಿಗೆ ಸದಸ್ಯತ್ವನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ದೇಶದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಶ್ರೀ ಸಾಮಾನ್ಯನ ಸರ್ಕಾರವನ್ನು ರಚನೆ ಮಾಡಿ ಜನರ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ಈಗಾಗಲೇ ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿದ ಭ್ರಷ್ಟಾಚಾರಕ್ಕೆ ಅಲ್ಲಿನ ಜನರು ತಕ್ಕ ಪಾಠ ಕಲಿಸಿ ಆಮ್ ಆದ್ಮಿ ಪಕ್ಷದ ಕೈ ಹಿಡಿದಿದ್ದಾರೆ. ಮುಖ್ಯಮಂತ್ರಿಯಾಗಿ ಅರವಿಂದ್ ಕ್ರೇಜಿವಾಲ್ ಅಧಿಕಾರವನ್ನು ಸ್ವೀಕರಿಸಿ ಜನಪರ ಆಡಳಿತ ನಡೆಸಲು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಸಹ ಜನರು ಪಕ್ಷಕ್ಕೆ ಅಭೂತಪೂರ್ವ ಬೆಂಬಲವನ್ನು ನೀಡಬೇಕು.ಇದಕ್ಕಾಗಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡು ಪಕ್ಷಕ್ಕೆ ಶಕ್ತಿಯನ್ನು ಕೊಡಬೇಕೆಂದು ಪಕ್ಷದ ಮುಖಂಡರು ಕೋರಿದರು.
ಮುಂದೆ ಲೋಕಸಭಾ ಚುನಾವಣೆ ಬರಲಿದೆ.ದೇಶದ ಭವಿಷ್ಯವನ್ನು ಬದಲಾಯಿಸುವಂತಹ ಈ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನವನ್ನು ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.ರಾಜ್ಯದಲ್ಲೂ ಸಹ ಲೋಕಸಭಾ ಚುನಾವಣೆಗೆ ಪಕ್ಷದಿಂದ ಪ್ರಾಮಾಣಿಕರು ನಿಂತುಕೊಳ್ಳಲಿದ್ದಾರೆ.ಈ ಪ್ರಾಮಾಣಿಕರ ಕೈ ಬಲಪಡಿಸಿ,ಭ್ರಷ್ಟಾಚಾರಿಗಳಿಗೆ ಗುಣಪಾಠ ಕಲಿಸಲು ಜನರು ಸ್ವಯಂಪ್ರೇರಣೆಯಿಂದ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅನೇಕರು ಸ್ವಯಂ ಪ್ರೇರಣೆಯಿಂದ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು. ಪಕ್ಷದ ಮುಖಂಡರು ಜನರಿಂದ ಅರ್ಜಿಯ ಮೂಲಕ ಮಾಹಿತಿಯನ್ನು ಸ್ವೀಕರಿಸಿದರು. ಅಲ್ಲದೇ ಪಕ್ಷದ ಹಿತದಣಷ್ಟಿಗೆ ನಡೆದುಕೊಳ್ಳುವ ಘೋಷಣೆಯನ್ನು ಸಹ ಮಾಡಿಸಲಾಯಿತು.
ಬಂಗಾರಪೇಟೆಯಲ್ಲಿ ಚಾಲನೆ
ಬಂಗಾರಪೇಟೆ: ಆಮ್ ಆದ್ಮಿ ಪಕ್ಷ ಪಟ್ಟಣದಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿಯುವಷ್ಟು ಮಟ್ಟಕ್ಕೆ ಬೆಳೆದಿರುವುದರಿಂದ ಅಪಾರ ಜನ ಬೆಂಬಲಗಳಿಸುತ್ತಿದೆ ಎಂದು ಕಳವಂಚಿ ವೆಂಕಟೇಶ್ ಹೇಳಿದರು.
ಪಟ್ಟಣದ ಗಂಗಮ್ಮನಪಾಳ್ಯದಲ್ಲಿ ಪಕ್ಷದ ನೂತನ ಕಚೇರಿ ಮತ್ತು ಸದಸ್ಯತ್ವ ಅಭಿನಾಯಕ್ಕೆ ಚಾಲನೆ ನೀಡಿ ಮಾತನಾಡಿ, ದೆಹಲಿಯಲ್ಲಿ ಹಲವಾರು ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷದ ದುರಾಡಳಿಕ್ಕೆ ಅಂತ್ಯ ಹಾಡಿ ಜನರ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಪಕ್ಷದ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರಂವಿದ್ ಕೇಜ್ರಿವಾಲ್ ಕನಸಾಗಿತ್ತು ಅದು ನನಸಾಗಿದ್ದು ಪಕ್ಷವನ್ನು ದೇಶದಾದ್ಯಂತ ಆರಂಭಿಸಲು ಮುಂದಾಗಿದೆ ಎಂದರು. ಪಕ್ಷದ ಡಾ.ಅಶೋಕ್ ವರ್ಧನ್, ಬಾಷ, ಶಿವು, ಸಂಪತ್ ಕುಮಾರ್ ಇದ್ದರು.