ಬಂಗಾರಪೇಟೆಯಲ್ಲಿ ಸಂಕ್ರಾಂತಿ ಆಚರಣೆ
ಬಂಗಾರಪೇಟೆ: ಪಟ್ಟಣದ ಗಾಂಧಿನಗರದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ನಡೆದ ರಾಸುಗಳ ಓಟದ ಸ್ವರ್ದೆ ನೋಡುಗರ ಗಮನ ಸೆಳೆಯಿತು.
ಬೆಳಗ್ಗೆ ಸಾಮೂಹಿಕವಾಗಿ ನಾಗರಿಕರು ದೀಪಗಳ ಮೆರವಣಿಗೆ ಹೊರಟು ಪಟ್ಟಣದ ಹೆಬ್ಬಾಗಿಲಿಗೆ ಪೂಜೆ ಸಲ್ಲಿಸಿದರು. ನಂತರ ಸಂಜೆ 4ಗಂಟೆಗೆ ಗಣೇಶ ದೇವಾಲಯ ಪಕ್ಕದ ರಸ್ತೆಯಲ್ಲಿ ರಾಸುಗಳ ಓಟದ ಸ್ವರ್ದೆ ನಡೆಯಿತು. ಕ್ಷೇತ್ರದಲ್ಲಿ ಬತ್ತಲಹಳ್ಳಿ ಗ್ರಾಮದಲ್ಲಿ ಬಿಟ್ಟರೆ ರಾಸುಗಳ ಓಟ ಪಟ್ಟಣದಲ್ಲಿ ಮಾತ್ರ ಕಾಣಬಹುದು. ರಾಸುಗಳ ಓಟವನ್ನು ನೋಡಿ ಕಣ್ಣು ತುಂಬಿಸಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದರು.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ರಾಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಗಾಂಧಿನಗರ, ಕುಂಬಾರಪಾಳ್ಯ, ಬೋವಿನಗರದ ನಿವಾಸಿಗರು ಹಳೇ ಪದ್ಧತಿಯನ್ನು ಬಿಡದೆ ಪಾಲಿಸಿಕೊಂಡು ಮುಂದಿನ ಪೀಳಿಗೆಗೆ ನಮ್ಮ ತನ ಮನ ಬಗ್ಗೆ ಪರಿಚಯಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆಂದು ಶ್ಲಾಘಿಸಿದರು. ಸಂಕ್ರಾಂತಿ ಹಬ್ಬ ಎಲ್ಲ ಜನರಿಗೆ ಶಾಂತಿ ನೆಮ್ಮದಿ ತರಲೆಂದು ಶುಭ ಹಾರೈಸಿದರು. ಚಂದ್ರಶೇಖರಗೌಡ,ಪುರಸಭೆ ಸದಸ್ಯ ಕೆ. ಚಂದ್ರಾರೆಡ್ಡಿ, ವೆಂಕಟೇಶಗೌಡ, ಶಫಿ, ಎಲ್. ರಾಮಕೃಷ್ಣಪ್ಪ, ನಂಜುಂಡಗೌಡ, ಆದಿನಾರಾಯಣಪ್ಪ ಇದ್ದರು.
ರಕ್ಷಣೆ ನೀಡುವಲ್ಲಿ ಪೊಲೀಸರ ವಿಫಲ: ಗಾಂಧಿನಗರದಲ್ಲಿ ರಾಸುಗಳ ಓಟದ ಸ್ವರ್ಧೆಯಿದೆ ಎಂದು ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಓಟದ ವೇಳೆ ವಾಹನಗಳನ್ನು ತಡೆದು ಬೇರೆ ಮಾರ್ಗದಲ್ಲಿ ಕಳುಹಿಸದೆ ನಿರ್ಲಕ್ಷ್ಯವಹಿಸಿದ್ದರಿಂದ ರಾಸುಗಳು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ಜಖಂಗೊಂಡಿತು ಇದರಿಂದ ವಾಹನ ಸವಾರರು ಪೊಲೀಸರನ್ನು ಶಪಿಸುತ್ತಿದ್ದರು.