ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಳಕಗೆ ಬಾರದೆ ತುಕ್ಕು ಹಿಡಿಯುತ್ತಿರುವ ಸಕ್ಕಿಂಗ್ ಯಂತ್ರಗಳು

Vishwanath S
Updated On : 16 Jan 2014, 1:35 am

ಬಂಗಾರಪೇಟೆ: ಮಾನವ ಶಕ್ತಿಯಿಂದ ಮಲ ಹೊರುವ ಪದ್ಧತಿಗೆ ಮಂಗಳ ಹಾಡಿ, ಯಂತ್ರದ ಮೂಲಕ ಮಲ ತೆಗೆಯಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ತಾಪಂ ಎರಡು ಸಕ್ಕಿಂಗ್ ಯಂತ್ರಗಳನ್ನು ಖರೀದಿಸಿ 6ತಿಂಗಳಾದರೂ ಯಾರೂ ಇತ್ತ ಗಮನ ಹರಿಸದಿದ್ದು, ಯಂತ್ರಗಳು ತಾಪಂ ಕಚೇರಿ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ.
ಪಕ್ಕದ ಕೆಜಿಎಪ್ ನಗರದಲ್ಲಿ ಶೌಚಾಲಯದಲ್ಲಿ ತುಂಬಿದ್ದ ಮಲದ ಗುಂಡಿ ಸ್ವಚ್ಛಗೊಳಿಸಲು ಮಾನವ ಶಕ್ತಿಯನ್ನು ಬಳಸಿದ್ದ ಪರಿಣಾಮ ಇಬ್ಬರು ಉಸಿರು ಕಟ್ಟಿ ಮೃತಪಟ್ಟ ನಂತರ, ಎಚ್ಚತ್ತುಕೊಂಡ ಸರ್ಕಾರ ಮಲದ ಗುಂಡಿ ಸ್ವಚ್ಛಗೊಳಿಸಲು ಮಾನವ ಶಕ್ತಿ ಬದಲು ಸಕ್ಕಿಂಗ್ ಯಂತ್ರ ಬಳಸಬೇಕೆಂದು ಆದೇಶ ನೀಡಿದ್ದರಿಂದ ಎಲ್ಲಾ ಪುರಸಭೆ, ನಗರಸಭೆಗಳಲ್ಲಿ ಸಕ್ಕಿಂಗ್ ಯಂತ್ರಗಳನ್ನು ಖರೀದಿಸಿಲಾಗಿದೆ.
ಗ್ರಾಮೀಣ ಭಾಗದ ಎಲ್ಲಾ ಶೌಚಾಲಯಗಳನ್ನೂ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛಗೊಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ಮೇರೆಗೆ ಇಲ್ಲಿನ ತಾಪಂ ಕಳೆದ ಆರು ತಿಂಗಳ ಹಿಂದೆ 13ನೇ ಹಣಕಾಸಿನಲ್ಲಿ ಒಂದಕ್ಕೆ ಹತ್ತು ಲಕ್ಷದಂತೆ 20ಲಕ್ಷದಲ್ಲಿ ಎರಡು ಯಂತ್ರಗಳನ್ನು ಖರೀದಿಸಿದೆ. ಆದರೆ ಯಂತ್ರಗಳಿಗೆ ಟ್ರ್ಯಾಕ್ಟರ್ ಎಂಜಿನ್ ಖರೀದಿ ಮಾಡದ ಕಾರಣ 6ತಿಂಗಳಿಂದ ಬಳಕೆಯಾಗದೆ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪಿವೆ. ತಾಲೂಕಿನಲ್ಲಿ 2012 ಬೇಸ್ ಲೈನ್ ಸರ್ವೆಯಂತೆ ಒಟ್ಟು ಶೌಚಾಲಯ ರಹಿತ ಬಿಪಿಎಲ್ ಕುಟುಂಬಗಳ ಸಂಖ್ಯೆ 36,239 ಇದ್ದು ಈವರೆಗೆ ಶೇ.50ರಷ್ಟು ಕುಟುಂಬಗಳು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿವೆ. ಮುಂದಿನ ಐದು ವರ್ಷದಲ್ಲಿ 5,068 ಗುರಿ ಸಾಧಿಸುವ ಯೋಜನೆಯಿದೆ ಎಂದು ತಾಪಂ ಇಒ ಕೆ.ಎಸ್. ಭಟ್ ತಿಳಿಸಿದ್ದಾರೆ. ಈ ವರ್ಷ 7,629 ಶೌಚಾಲಯಗಳನ್ನು ನಿರ್ಮಾಣ ಮಾಡುವ ಗುರಿ ತಾಲೂಕು ಆಡಳಿತಕ್ಕಿದೆ ಎಂದು ವಿವರಿಸಿದರು.
ಗ್ರಾಮೀಣ ಭಾಗದಲ್ಲಿ ಶೌಚಾಲಯ ಬಳಸಲು ಜನರು ಮುಂದಾಗದೆ ಇರುವುದರಿಂದ ಇನ್ನೂ ಬಯಲೇ ನಿತ್ಯ ಕರ್ಮಗಳಿಗೆ ಆಶ್ರಯ ತಾಣವಾಗಿದೆ. ಸರ್ಕಾರಗಳು ಶೌಚಾಲಯಗಳನ್ನು ಬಳಸುವಂತೆ ಎಷ್ಟೇ ಅರಿವು ಮೂಡಿಸಿದರೂ ಜನರು ಬಯಲನ್ನೇ ಆಶ್ರಯಿಸಿದ್ದಾರೆ. ಅಲ್ಲದೆ ಈ ವರ್ಷ ಶೌಚಾಲಯ ಜೊತೆ ಸ್ನಾನದ ಕೊಠಡಿಗೂ ಅನುದಾನ ಮಂಜೂರು ಮಾಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಪಿಡಿಒ ಮತ್ತು ಫಲಾನುಭವಿಗಳು ಒಂದಾಗಿ ಶೌಚಾಲಯ ನಿರ್ಮಾಣ ಮಾಡದೆಯೇ ಇತರರ ಶೌಚಾಯಲದ ಮುಂದೆ ಪೋಟೋ ನೀಡಿ ಅನುದಾನ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದರಿಂದ ಸರ್ಕಾರದ ಯೋಜನೆ ತಾಲೂಕಿನಲ್ಲಿ ಹಳ್ಳ ಹಿಡಿಯುವಂತಾಗಿದೆ.
ತಾಪಂ 20ಲಕ್ಷ ವೆಚ್ಚದಲ್ಲಿ ಸಕ್ಕಿಂಗ್ ಯಂತ್ರಗಳನ್ನು ಖರೀದಿಸಿದೆ ಆದರೆ ಅದಕ್ಕೆ ಎಂಜಿನ್ ಖರೀದಿಗೆ ಆಸಕ್ತಿ ತೋರದಿರುವುದರಿಂದ ಯಂತ್ರಗಳು ಪಾಳು ಬಿದ್ದಿದೆ. ಈ ಬಗ್ಗೆ ಇಒರನ್ನು ಕೇಳಿದರೆ ಜಿಪಂನಿಂದ ಎಂಜಿನ್ ಖರೀದಿಗೆ ಅನುಮತಿ ಕೋರಲಾಗಿದೆ ಸಿಕ್ಕ ಕೂಡಲೆ ಖರೀದಿಸುವುದಾಗಿ ತಿಳಿಸಿದರು. ತ್ವರಿತವಾಗಿ ಜಿಪಂ ಅನುಮತಿ ನೀಡಿ ಸಕ್ಕಿಂಗ್ ಯಂತ್ರಗಳು ಬಳಕೆಗೆ ಬರಲಿ ಇಲ್ಲದಿದ್ದರೆ ಮತ್ತೆ ಹಳೇ ಪದ್ಧತಿಗೆ ಜನರು ಹೋಗಿ ಅನಾಹುತ ಕಟ್ಟಿಟ್ಟ ಬುತ್ತಿಯಾಗಲಿದೆ.


-ಕೆ. ರಮೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement