ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಬಾಗೇಪಲ್ಲಿ: ಅನಾರೋಗ್ಯದಿಂದ ನರಳುತ್ತಿರುವ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ಖಾಲಿ ಇರುವ ವೈದ್ಯರ ಮತ್ತು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಡಿವೈಎಫ್ಐ ಕಾರ್ಯಕರ್ತರು ಒತ್ತಾಯಿಸಿದರು.
ಡಾ.ಎಚ್.ಎನ್ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಯಲ್ಲಿ ಸಾಗಿದ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ಐ ಮುಖಂಡ ಚನ್ನರಾಯಪ್ಪ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಔಷಧಿಗಳ ಕೊರತೆಯಿಂದ ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿ ಸಿಗದೇ ಈ ಭಾಗದ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಹಾಗೂ ಶುಚಿತ್ವ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತಿವೆ. ಈ ಸಮಸ್ಯೆಗಳ ಕಡೆ ಗಮನಹರಿಸಬೇಕಾಗಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಾಲೂಕು ಕೇಂದ್ರದಲ್ಲಿರುವ ಈ ಆಸ್ಪತ್ರೆಗೆ ದಿನ ನಿತ್ಯ 800 ರಿಂದ 1 ಸಾವಿರ ಹೊರ ರೋಗಿಗಳು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಭೇಟಿ ನೀಡುತ್ತಿದ್ದಾರೆ. ಆದರೆ, ಈ ರೋಗಿಗಳಿಗೆ ಕನಿಷ್ಠ ಚಿಕಿತ್ಸೆ ದೊರೆಯುತ್ತಿಲ್ಲ. ಈ ಆಸ್ಪತ್ರೆಯನ್ನು ಕೇವಲ ಹೆಸರಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಇಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 11 ವೈದ್ಯರಿಗೆ ಕೇವಲ 4 ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ವಿಭಾಗಗಳಲ್ಲಿ ಒಟ್ಟು 71 ಸಿಬ್ಬಂದಿ ಅವಶ್ಯಕತೆ ಇರುವ ಈ ಆಸ್ಪತ್ರೆಯಲ್ಲಿ ಕೇವಲ 33 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಸೇವೆಗೆ ಅವಶ್ಯಕವಾದ ಹಾಗೂ ಅಪಘಾತ ಸಂದರ್ಭದಲ್ಲಿ ಜೀವರಕ್ಷಕ ಉಪಕರಣಗಳು ಇಲ್ಲದಿರುವುದರಿಂದ ಈ ಭಾಗದ ಬಡ ರೋಗಿಗಳ ಅಮೂಲ್ಯ ಜೀವಗಳು ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಪ್ರತಿ ತಿಂಗಳೂ ಆರೋಗ್ಯ ಶಿಬಿರವನ್ನು ನಡೆಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ತಿಂಗಳಿಗೊಮ್ಮೆ ಆರೋಗ್ಯ ಶಿಬಿರವನ್ನು ಮಾಡಿ, ಬೆಂಗಳೂರಿನಿಂದ ವೈದ್ಯರನ್ನು ಕರೆಸಿ, ರೋಗಿಗಳಿಗೆ ಪರೀಕ್ಷೆ ನಡೆಸಿ ಚೀಟಿ ಬರೆಸಿಕೊಡುವುದಕ್ಕೆ ಶಾಸಕರೇ ಬೇಕೇ ಎಂದು ಪ್ರಶ್ನಿಸಿದರು. ಶಾಸಕರಿಗೆ ಈ ಭಾಗದ ಬಡ ಜನರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಈ ಆಸ್ಪತ್ರೆಯಲ್ಲಿ ಖಾಲಿ ಇರುವಂತಹ ವೈದ್ಯರ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಲಿ ಎಂದು ಒತ್ತಾಯಿಸಿದರು.
15 ದಿನಗಳ ಒಳಗಾಗಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಮಂಜೇನಾಯಕ್ ಮನವಿ ಸ್ವೀಕರಿಸಿದರು. ಡಿವೈಎಫ್ಐ ತಾಲೂಕು ಸಂಚಾಲಕ ಹೇಮಚಂದ್ರ, ರಘುರಾಮರೆಡ್ಡಿ, ಗೋವರ್ಧನಚಾರ್, ವಾಲ್ಮೀಕಿ ಅಶ್ವತ್ಥಪ್ಪ, ಜಿ. ಕೃಷ್ಣಪ್ಪ, ನವಾಜ್, ಜಗದೀಶ್, ಆಸೀಫ್, ಜಬೀ, ಶ್ರೀಧರ್, ಸಾಧೀಕ್, ಅನಿಲ್ ಕುಮಾರ್ ಭಾಗವಹಿಸಿದ್ದರು.