ಕಂಪ್ಯೂಟರ್ ತರಬೇತಿ ಶಿಕ್ಷಣಕ್ಕೆ ಪಠ್ಯಕ್ರಮ ಸಿದ್ಧ
ಕ.ಪ್ರ.ವಾರ್ತೆ , ಕೋಲಾರ , ಜ.16
ರಾಜ್ಯದ ಸುಮಾರು 300ಕ್ಕೂ ಹೆಚ್ಚು ಮಾನ್ಯತೆ ಪಡೆದ ವಾಣಿಜ್ಯ ವಿದ್ಯಾ ಸಂಸ್ಥೆಗಳ ಮಾಲೀಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಕಂಪ್ಯೂಟರ್ ತರಬೇತಿಗೆ ಸಂಬಂಧಿಸಿ ಅಧಿಕೃತ ಪಠ್ಯಕ್ರಮ ಸಿದ್ಧಪಡಿಸಿರುವುದರಿಂದ ವಾಣಿಜ್ಯ ಶಾಲೆಗಳ ಪುನಶ್ಚೇತನಕ್ಕೆ ಸಹಕಾರಿಯಾಗಿದೆ ಎಂದು ರಾಜ್ಯ ವಾಣಿಜ್ಯ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಎಸ್.ವಿ. ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಕ್ರಮದಿಂದಾಗಿ ರಾಜ್ಯದಲ್ಲಿ ಏಕರೂಪದ ಪಠ್ಯಕ್ರಮ ಹೊಂದಿರುವ ವಿಸ್ತೃತ ಸಂಖ್ಯೆಯ ಶಾಲೆಗಳನ್ನು ಒಳಗೊಂಡಿರುವ ವಾಣಿಜ್ಯ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿಯನ್ನು ಪ್ರಾರಂಭಿಸಲು ಅವಕಾಶ ಸಿಕ್ಕಿದಂತಾಗಿದೆ ಎಂದರು.
ತಾಂತ್ರಿಕತೆ ಅವಿಷ್ಕಾರದಿಂದಾಗಿ ವಾಣಿಜ್ಯ ವಿದ್ಯಾ ಸಂಸ್ಥೆಗಳಲ್ಲಿ ಟೈಪಿಂಗ್ ಕಲಿಯುವವರ ಸಂಖ್ಯೆ ಇಳಿಮುಖವಾಗಿ ಹಲವಾರು ವಾಣಿಜ್ಯ ಶಾಲೆಗಳು ಮುಚ್ಚಲ್ಪಟ್ಟಿವೆ. ಈಗ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಿ ವಾಣಿಜ್ಯ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿ ಪಡೆಯಲು ಯಾವ ರೀತಿಯ ಪಠ್ಯಕ್ರಮ ಇರಬೇಕೆಂಬುದನ್ನು ತಜ್ಞರ ಸಲಹೆ ಮೇರೆಗೆ ರೂಪಿಸಿ ಪಠ್ಯ ಪುಸಕ್ತವನ್ನು ಬಿಡುಗಡೆ ಮಾಡಿರುವುದರಿಂದ ಮುಚ್ಚಿರುವ ಹಲವು ವಾಣಿಜ್ಯ ಶಾಲೆಗಳಿಗೆ ಮರು ಜೀವ ಸಿಕ್ಕಿದಂತಾಗಿದೆ ಎಂದು ತಿಳಿಸಿದರು.
ವಾಣಿಜ್ಯ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿ ನೀಡಲು ಅನುಮತಿ ನೀಡುವಂತೆ 2006ರಲ್ಲಿ ಆಗಿನ ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರು ಕಂಪ್ಯೂಟರ್ ತರಬೇತಿಯನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದರು.
ನಂತರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಂಪ್ಯೂಟರ್ ತರಬೇತಿಯನ್ನು ಪ್ರಾರಂಭಿಸುವ ಬಗ್ಗೆ ಅನುಮತಿ ನೀಡಿ ಪಠ್ಯ ಕ್ರಮವನ್ನು ಬಿಡುಗಡೆ ಮಾಡಿದ್ದು, ಇದೀಗ ರಾಜ್ಯದಲ್ಲಿ ಮಾನ್ಯತೆ ಪಡೆದ ವಾಣಿಜ್ಯ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿ ಪ್ರಾರಂಭಿಸಲು ಅನುಮತಿ ಸಿಕ್ಕಿರುವುದರಿಂದ ವಿದ್ಯಾರ್ಥಿಗಳು ಧೈರ್ಯವಾಗಿ ಕಲಿಕೆಗೆ ಪ್ರವೇಶ ಪಡೆಯಬಹುದಾಗಿದೆ ಎಂದರು.
ಕಂಪ್ಯೂಟರ್ ತರಬೇತಿಯು ಇಡೀ ರಾಜ್ಯದಲ್ಲಿ ಏಕರೂಪದ ಪಠ್ಯಕ್ರಮ ಹೊಂದಿದ್ದು, ಆರು ತಿಂಗಳ ಹಂತದ ಎರಡು ಅವಧಿಯ ತರಬೇತಿ ಪಡೆಯಬಹುದಾಗಿದೆ. ಏಕರೂಪದ ಶುಲ್ಕ, ನುರಿತ ಅಧ್ಯಾಪಕರಿಂದ ಬೋಧನೆ ಮತ್ತು ಪರೀಕ್ಷೆಗಳನ್ನು ನಡೆಸುವ ಹಾಗೂ ಫಲಿತಾಂಶ ಪ್ರಕಟಿಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪತ್ರವನ್ನು ನೀಡುವ ಹೊಣೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಹಿಸಿರುವುದರಿಂದ ತರಬೇತಿ ಪಡೆಯಲಿಚ್ಚಿಸುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ವಿವರಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಸುಮಾರು 30 ಮಾನ್ಯತೆ ಪಡೆದ ವಾಣಿಜ್ಯ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿಯನ್ನು ಪ್ರಾರಂಭಿಸಲಾಗಿದ್ದು, ಜಿಲ್ಲೆಯ ಯುವಕ, ಯುವತಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಕೆ. ರಂಗನಾಥ್ ತಿಳಿಸಿದರು.
ಶಾರದ ವಾಣಿಜ್ಯ ಶಿಕ್ಷಣ ಶಾಲೆಯ ರವಿಪ್ರಸಾದ್, ಶ್ವೇತ ವಾಣಿಜ್ಯ ಶಾಲೆಯ ವಾಣಿಶ್ರೀ, ಪೊಲೀಸ್ ವಾಣಿಜ್ಯ ಶಾಲೆಯ ಮಂಜುನಾಥ್, ವೇಮಗಲ್ ಧನರಾಜ್ ಗೋಷ್ಠಿಯಲ್ಲಿದ್ದರು.