ಕುಡಿವ ನೀರಿಗೆ ಹಾಹಾಕಾರ: ಸಂಬಂಧಪಟ್ಟವರ ಮೌನ
ಚಿಂತಾಮಣಿ: ತಾಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಆಹಾಕಾರ ಇದ್ದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ.
ಬೇಸಿಗೆ ಮುನ್ನವೇ ನೀರಿನ ಅಭಾವ ತಲೆದೂರಿದೆ. ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಕೊಳವೆ ಬಾವಿಗಳು ಬತ್ತಿಹೋಗಿವೆ. ಕುಡಿಯುವ ನೀರು ಸಿಗದೆ ಜನರು ಪರಿತಪಿಸುತ್ತಿದ್ದಾರೆ. ದನಕರುಗಳು ಮೇವು ಮತ್ತು ಕುಡಿಯಲು ನೀರಿಲ್ಲದೆ ಸಾಯುವ ಹಂತ ತಲುಪಿವೆ. ಕುಡಿಯುವ ನೀರಿಗಾಗಿ ಗ್ರಾಮಗಳು ಮತ್ತು ನಗರ ಪ್ರದೇಶದಲ್ಲಿ ಬಿಂದಿಗೆಗೆ 5 ರು. ನೀಡಿದರೂ ಸಿಗದ ಸ್ಥಿತಿ ನಿರ್ಮಾಣಗೊಂಡಿದೆ.
ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ರೈತರು ಇತ್ತೀಚಿನ ದಿನಗಳಲ್ಲಿ ಅದನ್ನು ಕೈಬಿಟ್ಟಿದ್ದಾರೆ.
ಜಾನುವಾರುಗಳು ರೋಗಕ್ಕೆ ತುತ್ತಾಗಿ ಸಾಯುತ್ತಿವೆ. ಹೀಗಾಗಿ ರೈತರು ಪರ್ಯಾಯ ವ್ಯವಸ್ಥೆಗಾಗಿ ಪಟ್ಟಣದಲ್ಲಿ ದಿನನಿತ್ಯ 100 ರಿಂದ 150 ರು.ಗಳ ಕೂಲಿಗಾಗಿ ಕೆಲಸ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರು ಕೊಳ್ಳುವ ಸ್ಥಿತಿ: ನಗರ ಪ್ರದೇಶದಲ್ಲಿ ಮನೆ, ಹೊಟೇಲ್‌ಗಳಿಗೆ ಎತ್ತಿನಗಾಡಿ ನೀರಿಗೆ 70 ರಿಂದ 100 ರು. ನೀಡಿ ಕೊಳ್ಳುವ ಪರಿಸ್ಥಿತಿ ಒದಗಿ ಬಂದಿದೆ. ಜನಪ್ರತಿನಿಧಿಗಳು ಬರದಿಂದ ತತ್ತರಿಸಿರುವ ತಾಲೂಕಿನ ಬಗ್ಗೆ ಕಿಂಚಿತ್ತೂ ಗಮನ ನೀಡಿಲ್ಲ. ಇವರ ಮೌನದ ವಿರುದ್ಧ ರೈತರು, ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಿದರೂ ಫಲಿತಾಂಶ ಮಾತ್ರ ಶೂನ್ಯ.
ಕೊಳವೆಬಾವಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಂಪು, ಮೋಟಾರ್, ಕೇಬಲ್ ಮತ್ತಿತರೆ ಸಲಕರಣೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದರಿಂದ ಅಲ್ಪ-ಸ್ವಲ್ಪ ನೀರೂ ದೊರೆಯದಂತಾಗಿದೆ. ಮತ್ತೊಂದು ಕಡೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಂತ ಹಂತವಾಗಿ ಹೋರಾಟಗಳನ್ನು ನಡೆಸಿ, ನೀರು ಕೊಡಿ ಎಂದು ಬೊಬ್ಬೆಹಾಕುತ್ತಿದ್ದಾರೆ.
ಜನಪ್ರತಿನಿಧಿಗಳ ಮೌನ: ಸ್ವಪ್ರತಿಷ್ಟೆಗಾಗಿ ಇಲ್ಲಿನ ರಾಜಕಾರಣಿಗಳು ಕುಡಿಯುವ ನೀರಿನ ಬಗ್ಗೆ ಚಕಾರವೆತ್ತದೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಅಧಿಕಾರಿಗಳು ಮತ್ತು ಜಮಪ್ರತಿನಿಧಿಗಳು ಜನರ ದಾಹ ತೀರಿಸಲು ಮುಂದಾಗದಿದ್ದರೆ ಜನರು ಬೀದಿಗಿಳಿದು ಹೋರಾಟ ಮಾಡುವ ದಿನಗಳು ದೂರವಿಲ್ಲ ಎಂಬುದನ್ನು ಅರಿಯಬೇಕಿದೆ.
ಸಮರ್ಪಕ ನೀರು ಪೂರೈಸಲು ಸೂಚನೆ
ಚಿಂತಾಮಣಿ: ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದಲ್ಲಿ ನಗರ ಸಭೆಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಎಚ್ಚರಿಸಿದರು. ನಗರಸಭೆ ಆಯುಕ್ತ ಚನ್ನೇಗೌಡ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಿದ್ಧತೆ ಮಾಡಿಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ನಗರಸಭಾ ಆಯುಕ್ತರಿಗೆ ಎಚ್ಚರಿಕೆ ನೀಡಿದರು. ನಗರಕ್ಕೆ ನೀರನ್ನು ಕಲ್ಪಿಸಿಕೊಡದ ಪಕ್ಷದಲ್ಲಿ ನಗರ ಸಭೆಗೆ ಬೀಗ ಜಡಿದು, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಜನರ ಸಮಕ್ಷಮದಲ್ಲೇ ಹೋರಾಟ ಹಮ್ಮಿಕೊಳ್ಳುವುದಾಗಿ ಶಾಸಕರು ಆಯುಕ್ತರಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪ್ರಕಾಶ್, ಮಂಜುನಾಥ್, ಜಬೀನಾ ತಾಜ್, ಅಭಿಯಂತರ ಗೌತಮ್, ಚಕ್ರಪಾಣಿ ಇದ್ದರು.
-ಎನ್. ಬಾಬು