ಮಧ್ಯವರ್ತಿಗಳ ಹಾವಳಿ; ಶಾಸಕರ ಅಸಮಾಧಾನ
ಬಂಗಾರಪೇಟೆ: ಕೃಷಿ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳನ್ನು ಪಡೆಯಲು ರೈತರು ಸಂಘ ಸಂಸ್ಥೆಗಳ ಮುಖಂಡರನ್ನು ಅವಳಂಬಿಸುವಂತಾಗಿದೆ. ಈ ಪ್ರವೃತ್ತಿ ಬಿಟ್ಟು ನೇರವಾಗಿ ಯೋಜನೆಗಳನ್ನು ಅರ್ಹ ರೈತರಿಗೆ ಇಲಾಖೆ ಅಧಿಕಾರಿಗಳೇ ವಿತರಿಸಿ ಪಾರದರ್ಶಕತೆ ಮೆರೆಯಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಬರಗಾಲದಲ್ಲಿ ರೈತರಿಗೆ ನೆರವಾಗುವಂತೆ ಏನು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಾಸಕರು ಸಹಾಯಕ ನಿರ್ದೇಶಕ ನಾಗರಾಜ್ರನ್ನು ಪ್ರಶ್ನಿಸಿದರು, ಸರ್ಕಾರದ ಯೋಜನೆಗಳನ್ನು ಯಾವುದೇ ಅವ್ಯವಹಾರವಿಲ್ಲದೆ ವಿತರಿಸಲಾಗಿದೆ ಎಂಬ ಉತ್ತರಕ್ಕೆ ಅಸಮಧಾನಗೊಂಡ ಶಾಸಕರು ಸರ್ಕಾರ ಯೋಜನೆಗಳನ್ನು ವಿತರಿಸಲು ನೀವೇ ಬೇಕೆ ಗುಮಾಸ್ತ ಸಾಕು ಇದು ಬಿಟ್ಟು ರೈತರಿಗೆ ಉಪಯುಕ್ತವಾಗುವ ರೀತಿ ಏನು ಮಾಡಿದ್ದೀರಿ, ಅಲ್ಲದೆ ಇಲಾಖೆಲ್ಲಿ ಸಿಗುವ ಅನುಕೂಲಗಳನ್ನು ಪಡೆಯಲು ಮಧ್ಯವರ್ತಿಗಳ ಹಾವಳಿ ಇದೆಯಲ್ಲ ಅವರಿಲ್ಲದೆ ನೇರವಾಗಿ ರೈತರೇ ಬಂದರೆ ಆಗುವುದಿಲ್ಲವೆ ಎಂದು ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡರು.
ತಾಲೂಕಿನಲ್ಲಿ ವೈನ್ ಶಾಪ್ಗಳಿಗೆ ಅನುಮತಿ ಪಡೆದು ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಪರಿವರ್ತಿಸಿಕೊಂಡು ರಾಜರೋಷವಾಗಿ ಕಾನೂನು ಉಲ್ಲಂಘಿಸುತ್ತಿದ್ದರೂ ಅಬಕಾರಿ ಇಲಾಖೆ ಏನು ಮಾಡುತ್ತಿದೆ, ಎಷ್ಟು ಪ್ರಕರಣ ದಾಖಲಿಸಲಾಗಿದೆ, ಎಷ್ಟು ಅಂಗಡಿಗಳ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ಪ್ರಶ್ನೆ ಕೇಳಿದಾಗ ಅಧಿಕಾರಿ ತಿಮ್ಮಾರೆಡ್ಡಿ ಉತ್ತರ ಕೊಡಲು ಪೇಚಿಗೆ ಸಿಲುಕಿಸಿದರು. ಬರಗಾಲದಲ್ಲಿ ಕುಡಿಯವ ನೀರಿಗೆ ಹಾಹಾಕಾರ ಬಾರದಂತೆ ಸರ್ಕಾರ ಕ್ರಮ ಕೈಗೊಂಡಿದೆ ಆದರೆ ಕೊರೆದಿರುವ ಬೋರ್ಗಳಿಗೆ ಪಂಪು ಮೋಟಾರ್ ಅಳವಡಿಸದಿರುವುದಕ್ಕೆ ಬೇಸರವ್ಯಕ್ತಪಡಿಸಿದರು.
ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿದ ಶಾಸಕರು ಬರದ ಸಮಯದಲ್ಲಿ ಅಧಿಕಾರಿಗಳು ರೈತರ ಆರ್ಥಿಕ ಅಭಿವೃದ್ದಿ ಉಪಯುಕ್ತ ಸಲಹೆಗಳನ್ನು ನೀಡಿ ಅವರನ್ನು ಉತ್ತೇಜಿಸಬೇಕು, ಬರೀ ಸರ್ಕಾರದ ಸವಲತ್ತುಗಳನ್ನು ವಿತರಿಸಿ ಕೈ ತೊಳೆಯಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿ ಸಕಾಲಕ್ಕೆ ರೈತರ ಕೆಲಸಕ್ಕೆ ಸ್ಪಂದಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ರೇಣುಕಾ, ಇಒ ಕೆ.ಎಸ್. ಭಟ್, ಜಿಪಂ ಎಇಇ ಮಂಜುನಾಥ್ ಇದ್ದರು.